ಭಕ್ತರ ಉದ್ಧಾರವೇ ಗುರುವಿನ ಸತ್ಕಾರ್ಯ: ಗವಿಸಿದ್ಧಲಿಂಗ ಶ್ರೀ

KannadaprabhaNewsNetwork | Published : Jul 3, 2024 12:22 AM

ಸಾರಾಂಶ

ಕಷ್ಟಗಳನ್ನು ಎದುರಿಸಲು ಗುರುನಾಥನ ಪ್ರೇರಣೆ ಬೇಕಾಗಿದ್ದು, ಸದಾ ನಾವೆಲ್ಲರೂ ಗುರುವಿನ ಸ್ಮರಣೆ ಮಾಡುವುದು ಅವಶ್ಯವಿದೆ

ಗದಗ: ಭಕ್ತರ ಉದ್ಧಾರವೇ ಗುರುವಿನ ಸತ್ಕಾರ್ಯವಾಗಿದೆ. ಈ ದಿಸೆಯಲ್ಲಿ ಭಕ್ತರು ಹಿಂದೆ ಗುರುಗಳನ್ನು ಇಟ್ಟುಕೊಂಡು ಮುಂದೆ ಇರುವ ತಮ್ಮ ಗುರಿ ಸಾಧಿಸಿಕೊಳ್ಳಬೇಕು ಎಂದು ಗವಿಸಿದ್ಧಲಿಂಗ ಸ್ವಾಮಿಗಳು ಹೇಳಿದರು.

ತಾಲೂಕಿನ ಹರ್ಲಾಪುರ ಕೊಟ್ಟೂರೇಶ್ವರ ಮಠದ ಜಾತ್ರಾಮಹೋತ್ಸವದಲ್ಲಿ, ಲಿಂಗೈಕ್ಯರಾದ ದ್ವಿತೀಯ ಮತ್ತು ತೃತೀಯ ಪೀಠಾಧಿಪತಿಗಳಾದ ಕರಿಬಸವ ಸ್ವಾಮಿಗಳು ಹಾಗೂ ನೀಲಕಂಠ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಲಿಂಗೈಕ್ಯರಾದ ಸಂತರ ಸ್ಮರಣೆ ಮಾಡುವ ಕಾರಣ ಏನೆಂದರೆ ಅವರ ಆದರ್ಶ ಗುಣಗಳು ಹಾಗೂ ಸಾಮಾಜಿಕ ಬದುಕು, ನಮಗೆಲ್ಲಾ ಪ್ರೇರಣೆ ನೀಡಲಿ ಎಂಬ ಉದ್ದೇಶದಿಂದಲೇ ವಿನಃ ಕೇವಲ ಭಾವಚಿತ್ರ ಪೂಜೆ ಮಾಡುವುದಲ್ಲ. ಈ ನಿಟ್ಟಿನಲ್ಲಿ ಕೊಟ್ಟೂರೇಶ್ವರ ಶ್ರೀಗಳು ನಮ್ಮಂತಹ ನೂತನ ಸ್ವಾಮೀಜಿಗಳಿಗೆ ಆದರ್ಶವಾಗಿದ್ದಾರೆ ಎಂದರು.ಕೊಣ್ಣೂರು ಡಾ. ಶಿವಾನಂದ ಸ್ವಾಮಿಗಳು ಮಾತನಾಡಿ, ಪ್ರತಿ ಧಾರ್ಮಿಕ ಕ್ಷೇತ್ರದಲ್ಲಿ ಶರಣರು, ಸಂತರು, ಮನುಷ್ಯನ ಜೀವನಕ್ಕೆ ಬೇಕಾಗುವ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳು ನಮಗೆ ಆದರ್ಶವಾಗಿವೆ ಎಂದರು.

ಹರ್ಲಾಪುರ ಗೆಜ್ಜೆಸಿದ್ದೇಶ್ವರ ಮಠದ ಶಿವಯೋಗಿ ರಾಮನಾಥ ಸ್ವಾಮಿಗಳು ಮಾತನಾಡಿ, ಜೀವನದಲ್ಲಿ ಅನೇಕ ಕಷ್ಟಗಳು ಬರುತ್ತವೆ. ಆ ಕಷ್ಟಗಳನ್ನು ಎದುರಿಸಲು ಗುರುನಾಥನ ಪ್ರೇರಣೆ ಬೇಕಾಗಿದ್ದು, ಸದಾ ನಾವೆಲ್ಲರೂ ಗುರುವಿನ ಸ್ಮರಣೆ ಮಾಡುವುದು ಅವಶ್ಯವಿದೆ ಎಂದರು.

ಡಾ. ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಕಳೆದ 15 ದಿನಗಳಿಂದ ನಡೆದ ಜಾತ್ರಾ ಮಹೋತ್ಸವ ಯಶಸ್ಸಿಗೆ ಸೇವೆ ಸಲ್ಲಿಸಿದ ಸರ್ವ ಭಕ್ತರಿಗೆ ಅಭಿನಂದನೆಗಳು. ತಮ್ಮೆಲ್ಲರ ಸೇವಾ ಮನೋಭಾವನೆ ಹೀಗೆ ಮುಂದುವರಿಯಲಿ ಎಂದರು.

ಕೊಟ್ಟೂರೇಶ್ವರ ಶ್ರೀಗಳಿಗೆ ಚಂದ್ರಶೇಖರ ಹಿರೇಮಠ ಅವರು ತುಲಾಭಾರ ನೆರವೇರಿಸಿದರು. ಸೇವೆ ಸಲ್ಲಿಸಿದ ಮಹನೀಯರನ್ನು ಶ್ರೀಗಳು ಸನ್ಮಾನಿಸಿದರು. ಈ ವೇಳೆ ಹಳ್ಳಿಗುಡಿ ಶಂಕ್ರಯ್ಯಜ್ಜನವರು ಮಾತನಾಡಿದರು.

ನಿವೃತ್ತ ಶಿಕ್ಷಕ ರಾಮಣ್ಣ ಬೆಳಧಡಿ ಇದ್ದರು. ಕೆ.ಬಿ. ವೀರಾಪುರ, ನಾಗೇಂದ್ರ ಅರ್ಕಸಾಲಿ ಸಂಗೀತ ಸೇವೆ ನೀಡಿದರು. ಶ್ರೀದೇವಿ ಹರಕುಣಿ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ವೆಂಕಟೇಶ ಜುಂಜಣಿ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್.ಸಿ. ಸರ್ವಿ ವಂದಿಸಿದರು.

Share this article