ಸಂಪಗೋಡು ಶಿಥಿಲ ಬಸ್ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ

KannadaprabhaNewsNetwork | Published : Aug 9, 2024 12:33 AM

ಸಾರಾಂಶ

ಸೊರಬ ತಾಲೂಕಿನ ಸಂಪಗೋಡು ಗ್ರಾಮದ ಸೊರಬ-ಶಿರಸಿ ಸಂಪರ್ಕ ಮುಖ್ಯರಸ್ತೆಯಲ್ಲಿರುವ ಬಸ್ ತಂಗುದಾಣ ಸಂಪೂರ್ಣ ಶಿಥಿಲವಾಗಿ ಕುಸಿಯುವ ಆತಂಕ ತಂದೊಡ್ಡಿದೆ.

- ಎಚ್.ಕೆ.ಬಿ.ಸ್ವಾಮಿಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಸಂಪಗೋಡು ಗ್ರಾಮದ ಬಸ್ ತಂಗುದಾಣ ಶಿಥಿಲಗೊಂಡು ಸಾರ್ವಜಕರಿಗೆ ಅಪಾಯ ತಂದೊಡ್ಡಿದೆ. ಮನವಿಗೆ ಸ್ಪಂದಿಸದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.ತಾಲೂಕಿನ ದ್ಯಾವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಂಪಗೋಡು ಬಸ್ ತಂಗುದಾಣ ಸೊರಬ ಪಟ್ಟಣದಿಂದ ೧೮ ಕಿ.ಮೀ. ದೂರದಲ್ಲಿದೆ. ಸೊರಬ-ಬನವಾಸಿ-ಶಿರಸಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿರುವ ಬಸ್ ತಂಗದಾಣ ೨೫ ವಸಂತಗಳನ್ನು ಪೂರೈಸಿದೆ. ಈಗ ಶಿಥಿಲಗೊಂಡು ೬ ವರ್ಷಗಳು ಕಳೆದಿವೆ. ಬೆಳ್ಳಿ ಹಬ್ಬ ಆಚರಿಸಿಕೊಳ್ಳುವ ಬದಲು ನೆಲಸಮವಾಗಲು ದಿನ ಎಣಿಸುತ್ತಿದೆ.ಕಾಂಕ್ರಿಟ್‌ನಿಂದ ರೂಪಿತಗೊಂಡ ಮೇಲ್ಚಾವಣಿಯ ತಳದಲ್ಲಿ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದು ಜೋತಾಡುತ್ತಿವೆ. ಸುತ್ತಲಿನ ಕಂಬಗಳ ಸಿಮೆಂಟ್ ಪ್ಲಾಸ್ಟರ್ ಉದುರಿಸುತ್ತಿದೆ. ಮಳೆಗಾಲದಲ್ಲಿ ಆರ್‌ಸಿಸಿಯಿಂದ ಜಿನುಗುವ ಕಲುಷಿತ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಸಾರ್ವಜನಿಕ ನಿರುಪಯುಕ್ತ ಬಸ್ ತಂಗುದಾಣವಾಗಿರುವುದರಿಂದ ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಇದೂ ಅಲ್ಲದೇ ಮೂತ್ರ ವಿಸರ್ಜನೆ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ದೂರಗಳು ಗ್ರಾಮಸ್ಥರಿಂದ ಕೇಳಿ ಬಂದಿದೆ. ಇಷ್ಟೆಲ್ಲಾ ಭಯಭೀತ ವಾತಾವರಣ ಸೃಷ್ಟಿಸಿರುವ ಬಸ್ ತಂಗುದಾಣದಿಂದ ಇನ್ನಷ್ಟು ಅವಘಡ ಸಂಭವಿಸುವ ಮೊದಲು ಕಟ್ಟಡ ತೆರವುಗೊಳಿಸಿ ಹೈಟೆಕ್ ಸಾರ್ವಜನಿಕ ಬಸ್ ತಂಗುದಾಣ ನಿರ್ಮಿಸಿಕೊಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.ಸಂಪಗೋಡು, ದುಗ್ಲಿ, ಹೊಸೂರು ಗ್ರಾಮಗಳ ಒಟ್ಟು ೨೫೦ ಮನೆಗಳ ಗ್ರಾಮಸ್ಥರು ಶಿಥಿಲಗೊಂಡ ಬಸ್ ತಂಗುದಾಣದಲ್ಲಿ ವಿಶ್ರಮಿಸುತ್ತಾರೆ. ಬೆಳಿಗ್ಗೆ ಸುಮಾರು ೪೦ ರಿಂದ ೫೦ ಜನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೊರಬ, ಬನವಾಸಿ, ಶಿರಸಿ ನಗರಗಳಿಗೆ ತೆರಳಲು ಬಸ್‌ಗಾಗಿ ಕಾಯುತ್ತಾರೆ. ರೈತರು ತಾಲೂಕು ಕಛೇರಿ, ಗ್ರಾ.ಪಂ. ಸೇರಿದಂತೆ ನಾಡ ಕಛೇರಿ ಭೇಟಿಗಾಗಿ ಬಸ್ ಹತ್ತಲು ಇಲ್ಲಿನ ತಂಗುದಾಣದಲ್ಲಿ ನಿಲ್ಲುತ್ತಾರೆ. ಆದರೆ ಬೀಳುವ ಸ್ಥಿತಿಯಲ್ಲಿ ಭಯವನ್ನು ಮೂಡಿಸಿರುವ ಬಸ್ ನಿಲ್ದಾಣವನ್ನು ಯಾರೂ ಬಳಸುತ್ತಿಲ್ಲ. ಮಳೆ, ಗಾಳಿ, ಧೂಳು ಲೆಕ್ಕಿಸದೇ ರಸ್ತೆಯ ಅಂಚು ಮತ್ತು ಮರಗಳ ಕೆಳಗೆ ನಿಲ್ಲುವ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಸಂಪಗೋಡು, ದುಗ್ಲಿ, ಹೊಸೂರು ಗ್ರಾಮಗಳ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಮಳೆ ಬಂದರೆ ನೆನೆಯುವುದು, ಚಳಿಯಲ್ಲಿ ನಡುಗುವುದು, ಬಿಸಿಲಿಗೆ ಬಾಡುವಂತಾಗಿದೆ.ಶಿಥಿಲಗೊಂಡ ಬಸ್ ತಂಗುದಾಣ ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಿಸುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಸಹ ಗ್ರಾ.ಪಂ. ಅಧಿಕಾರಿಗಳು ಬಸ್ ತಂಗುದಾಣ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟಿದೆ ಎಂದು ಜಾರಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಆಗಿನ ಶಾಸಕರ ಗಮನಕ್ಕೆ ತರಲಾಗಿದೆ. ಅಲ್ಲದೇ ಪಿ.ಡಬ್ಲ್ಯುಡಿ. ಮುಖ್ಯ ಅಭಿಯಂತರರಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೂ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನಾದರೂ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಮಳೆ, ಚಳಿ, ಬಿಸಿಲಿನಿಂದ ರಕ್ಷಣೆ ನೀಡಲು ನೂತನ ಬಸ್ ತಂಗುದಾಣ ನಿರ್ಮಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

ಇನ್ನು, ಸೊರಬ-ಬಸವಾಸಿ ಮಾರ್ಗ ಮಧ್ಯದಲ್ಲಿರುವ ಸಂಪಗೋಡು ಗ್ರಾಮದ ಬಸ್ ತಂಗುದಾಣ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ನೆಲಕ್ಕುರುಳಲು ಸಿದ್ಧವಾಗಿ ಭಯದ ವಾತಾವರಣ ನಿರ್ಮಿಸಿದೆ. ಈ ಕಾರಣದಿಂದ ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ಬಸ್ ಹತ್ತಲು ಮರದಡಿಯಲ್ಲಿ ಮಳೆ, ಚಳಿ, ಬಿಸಿಲಲ್ಲಿ ನಿಂತು ಯಾತನೆ ಪಡುವಂತಾಗಿದೆ. ಹೊಸ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಹಿಂದಿನ ಶಾಸಕರ ಗಮನಕ್ಕೆ ತರಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ಮಾಡಲಾಗಿತ್ತು. ಎಲ್ಲರೂ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎಂದು ಸಂಪಗೋಡುವಿನ ಕೃಷಿಕ ಮಹೇಶ್ ಆರೋಪಿಸಿದರು.

Share this article