ಯಲ್ಲಾಪುರ:
ಧರ್ಮದಿಂದ ಸಾಗಿದಾಗ ನಮಗೆ ಅರ್ಥ, ಸುಖ, ದುಃಖ ಪ್ರಾಪ್ತವಾಗುತ್ತದೆ. ಶಾಸ್ತ್ರಕ್ಕೆ ಮೂಲ ಸ್ವರೂಪ ನೀಡಿದ ವಾಲ್ಮೀಕಿ ರಚಿಸಿದ ರಾಮಾಯಣ ಮಾತ್ರ ಸಮರ್ಪಕ ಉತ್ತರ ನೀಡಬಲ್ಲದು ಎಂದು ನಿಶ್ಚಲಾನಂದಗಿರಿ ಶ್ರೀ ಹೇಳಿದರು.ಪಟ್ಟಣದ ಅಡಿಕೆ ಭವನದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಯೋಧ್ಯೆಯಲ್ಲಿ ಶ್ರೀರಾಮನನ್ನು ಜ. ೨೨ರಂದು ಪ್ರತಿಷ್ಠಾಪಿಸಲಾಗುತ್ತಿದ್ದು, ಪ್ರತಿಯೊಬ್ಬ ಹಿಂದೂಗಳ ಮನೆಗಳಿಗೆ ಗೌರವದ ಅಕ್ಷತದ ಆಮಂತ್ರಣ ತಲುಪಿಸುವ ಉದ್ದೇಶದಿಂದ ಪ್ರತಿ ತಾಲೂಕಿನ ಮುಖ್ಯಸ್ಥರಿಗೆ ಅಕ್ಷತ ಕಲಶ ವಿತರಿಸಿ, ಆಶೀರ್ವಚನ ನೀಡಿದರು.ಸನಾತನ ಧರ್ಮವನ್ನು ಯಾರಿಂದಲೂ, ಎಂದಿಗೂ ನಾಶ ಮಾಡಲಾಗದು. ನಾವೂ ಹಾಗೇಯೇ ಒಂದೇ ಜನ್ಮಕ್ಕೆ ಅಂಟಿಕೊಂಡಿರಲಾಗದು. ಪಾಶ್ಚಾತ್ಯ ಸಂಸ್ಕೃತಿಗೆ ನಮ್ಮ ಯುವ ಜನಾಂಗ ಮರುಳಾಗುತ್ತಿದ್ದಾರೆ. ಆದರೆ ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿಗೆ ಶರಣಾಗುತ್ತಿದ್ದಾರೆ ಎಂದರು.ಶ್ರೀರಾಮನ ಆದರ್ಶಗಳೇ ಬದುಕಿಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲದು. ಗೀತೆಯ ಮೂಲಕ ಭಗವಂತ ಸಕಲ ಸಮಸ್ಯೆಗೆ ಪರಿಹಾರ ನೀಡಿದ್ದಾನೆ. ಪ್ರಾಚೀನದಲ್ಲಿ ಸನಾತನ ಹಿಂದೂ ರಾಜರು ಸರ್ವಾಧಿಕಾರಿಗಳಾಗಿರಲಿಲ್ಲ. ಆದರೆ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತ್ಯತೀತತೆಯ ಹೆಸರಿನಲ್ಲಿ ನಮ್ಮನ್ನಾಳುವ ನಾಯಕರು ಜಾತಿಗಳ ನಡುವಿನ ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ. ಇದನ್ನು ಪ್ರತಿಯೊಬ್ಬ ಹಿಂದೂಗಳು ಅರ್ಥಮಾಡಿಕೊಳ್ಳಬೇಕು. ಅಲ್ಲದೇ, ಪ್ರತಿಯೊಬ್ಬ ಹಿಂದೂಗಳು ಶ್ರೀರಾಮ ಜಯ ರಾಮ ಜಯ ಜಯ ರಾಮ ಎಂಬ ತಾರಕ ಮಂತ್ರ ಪಠಿಸಿದರೆ, ಭಗವಂತನ ಸಾನ್ನಿಧ್ಯ ಖಂಡಿತ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಸ್ವಚ್ಛಭಾರತ ಅಭಿಯಾನ ಘೋಷಣೆಯ ನಂತರವೂ ಇಂದಿಗೂ ರಸ್ತೆಯ ಇಕ್ಕೆಲದಲ್ಲಿ ಗುಟ್ಕಾ ಚೀಟಿ, ತ್ಯಾಜ್ಯ ವಸ್ತುಗಳು ವಿಪರೀತವಾಗಿ ಅಸಹ್ಯ ಹುಟ್ಟಿಸುತ್ತವೆ. ಈ ಕುರಿತು ಈ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು. ವಿಹಿಂಪ ಮುಖ್ಯಸ್ಥ ಬಸವರಾಜ ಮಾತನಾಡಿ, ಜ. ೨೨ರಂದು ಪ್ರತಿಯೊಬ್ಬ ಹಿಂದೂಗಳು ಮನೆ ಸಮೀಪದ ಮಂದಿರಗಳಿಗೆ ತೆರಳಿ, ಅಲ್ಲಿ ನಡೆಯುವ ಶ್ರೀರಾಮನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ ಪ್ರತಿಯೊಬ್ಬರ ಮನೆಯಲ್ಲಿ ಹಣತೆ ಹಚ್ಚಬೇಕು ಎಂದ ಅವರು, ರಾಮ ಜನ್ಮ ಭೂಮಿಯ ಕುರಿತಾಗಿ ೧೯೮೪ರಿಂದ ಆರಂಭಿಸಿದ ಹೋರಾಟ, ಪ್ರಯತ್ನ, ನಂತರದ ಯಶಸ್ಸುಗಳ ಸವಿಸ್ತಾರ ಮಾಹಿತಿ ನೀಡಿದರು.ವೇದಿಕೆಯಲ್ಲಿ ವಿಶ್ವಹಿಂದೂ ಜಿಲ್ಲಾಧ್ಯಕ್ಷ ಎಸ್.ಎನ್. ಭಟ್ಟ ಏಕಾನ, ಜಿಲ್ಲಾ ಪ್ರಮುಖರಾದ ಗಂಗಾಧರ ಹೆಗಡೆ, ಗಣಪತಿ ಹಿರೇಸರ, ಧೋಂಡು ಪಾಟೀಲ್, ಡಿ.ಎಸ್. ಭಟ್ಟ ಗುಳ್ಳಾಪುರ ಇದ್ದರು.