ವಿ.ಎಂ. ನಾಗಭೂಷಣ
ಸಂಡೂರು: ವಿಶಿಷ್ಟ ವಾಸ್ತು ವಿನ್ಯಾಸದಿಂದ ರೂಪುಗೊಂಡು ಒಂದು ಕಾಲದಲ್ಲಿ ಬ್ರಿಟಿಷರು, ನಂತರದ ದಿನಗಳಲ್ಲಿ ಗಣಿ ಕಾರ್ಮಿಕರ ವಸತಿನಿಲಯಗಳಾಗಿದ್ದ ತಾಲೂಕಿನ ರಾಮಗಡದಲ್ಲಿನ ಬ್ಯಾರಕ್‌ಗಳು (ಬರ್‌ಕಾಸ್-ವಸತಿನಿಲಯ) ಇಂದು ಶಿಥಿಲಾವಸ್ಥೆಗೆ ತಲುಪಿವೆ.ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬಳ್ಳಾರಿಯಲ್ಲಿ ಇರುತ್ತಿದ್ದ ಬ್ರಿಟಿಷರು ಬೇಸಿಗೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ ಎತ್ತರದಲ್ಲಿದ್ದು, ತಂಪು ವಾತಾವರಣದ ರಾಮಗಡಕ್ಕೆ ಬಂದು ಇಲ್ಲಿ ನಿರ್ಮಿಸಲಾಗಿದ್ದ ಬ್ಯಾರಕ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರೆಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿನ ಬ್ಯಾರಕ್‌ಗಳ ಸನಿಹದಲ್ಲಿ ಕೆಲವು ಬ್ರಿಟಿಷರ ಸಮಾಧಿಗಳಿವೆ. ಇಲ್ಲಿ ಬ್ರಿಟಿಷರು ತಂಗುತ್ತಿದ್ದರೆಂಬುದಕ್ಕೆ ಇಲ್ಲಿನ ಬ್ರಿಟಿಷರ ಸಮಾಧಿಗಳು ಪುರಾವೆ ಒದಗಿಸುತ್ತವೆ.
೧೦-೧೫ ವರ್ಷಗಳ ಹಿಂದೆ ಈ ವಸತಿಗೃಹಗಳಲ್ಲಿ ಕೆಲ ಗಣಿ ಕಾರ್ಮಿಕರ ಕುಟುಂಬಗಳು ವಾಸವಾಗಿದ್ದವು. ಸೂಕ್ತ ನಿರ್ವಹಣೆ ಇಲ್ಲದೇ ಈ ವಸತಿಗೃಹಗಳು ಶಿಥಿಲವಾಗತೊಡಗಿದ್ದರಿಂದ ಗಣಿ ಕಾರ್ಮಿಕರ ಕುಟುಂಬಗಳು ಹತ್ತಿರದ ರಾಮಗಡ ಗ್ರಾಮಕ್ಕೆ ಸ್ಥಳಾಂತರಗೊಂಡು ನೆಲೆಕಂಡುಕೊಂಡಿವೆ.ನಂತರ ಬ್ಯಾರಕ್‌ಗಳಿದ್ದ ಸ್ಥಳದ ಸುತ್ತ ಗಿಡಗಂಟಿ ಬೆಳೆದು ನಿರ್ಜನ ಪ್ರದೇಶವಾಗಿ ಪರಿಣಮಿಸಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡ ಕೆಲವರು ಈ ಮನೆಗಳಲ್ಲಿದ್ದ ತೇಗ, ಮತ್ತಿ ಮುಂತಾದ ಕಟ್ಟಿಗೆಗಳ ತೊಲೆಗಳು ಮತ್ತಿತರ ವಸ್ತುಗಳನ್ನು ಕದ್ದಿದ್ದಾರೆ.
ವಿವಿಧ ಕಾರಣಗಳಿಂದಾಗಿ ಒಂದು ಕಾಲದಲ್ಲಿ ಬ್ರಿಟಿಷರಿಗೆ, ನಂತರದಲ್ಲಿ ಗಣಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದ ರಾಮಗಡದಲ್ಲಿದ್ದ ಬ್ಯಾರಕ್‌ಗಳಿಗೆ ಸೂಕ್ತ ರಕ್ಷಣೆ, ಪೋಷಣೆ ದೊರೆತಿದ್ದರೆ ಇವು ಇಂದಿಗೂ ತಮ್ಮ ಅಸ್ತಿತ್ವ ಉಳಿಸಿಕೊಂಡು ಹಲವು ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುತ್ತಿದ್ದವು. ಆದರೆ, ನಿರ್ಲಕ್ಷ್ಯದಿಂದಾಗಿ ಇವು ಶಿಥಿಲಾವಸ್ಥೆ ತಲುಪಿವೆ. ಇವುಗಳನ್ನು ಅಭಿವೃದ್ಧಿ ಪಡಿಸಿದರೆ, ತಮ್ಮ ವಿಶಿಷ್ಟ ವಾಸ್ತುಶೈಲಿಯಿಂದ ಕೂಡಿರುವ ಈ ಕಟ್ಟಡಗಳು ತಮ್ಮ ಗತ ಇತಿಹಾಸವನ್ನು ಇಲ್ಲಿಗೆ ಬರುವವರಿಗೆ ಸಾರಲಿವೆ. ಇಲ್ಲದಿದ್ದರೆ ಇತಿಹಾಸದ ಗರ್ಭ ಸೇರಿ ಕಣ್ಮರೆಯಾಗಲಿವೆ.ರಾಮಗಡದಲ್ಲಿನ ಬ್ಯಾರಕ್‌ಗಳಲ್ಲಿ ಈ ಹಿಂದೆ ಬಳ್ಳಾರಿ ಮುಂತಾದ ಕಡೆಗಳಿಂದ ಬರುತ್ತಿದ್ದ ಬ್ರಿಟಿಷರು ಉಳಿದುಕೊಳ್ಳುತ್ತಿದ್ದರೆಂದು ಹೇಳಲಾಗುತ್ತಿತ್ತು. ನಿರ್ಲಕ್ಷ್ಯದಿಂದಾಗಿ ಇತ್ತೀಚೆಗೆ ಅವು ಹಾಳಾಗಿವೆ. ಕಟ್ಟಡಗಳಲ್ಲಿದ್ದ ಬೆಲೆಬಾಳುವ ಕಟ್ಟಿಗೆಗಳನ್ನು ಯಾರೋ ಕಿತ್ತು ಹೊತ್ತೊಯ್ದಿದ್ದಾರೆ. ಆ ಕಟ್ಟಡಗಳು ಹಿಂದೆ ಬಹಳ ಸುಂದರ ಮತ್ತು ಗಟ್ಟಿಮುಟ್ಟಾಗಿದ್ದವು ಎನ್ನುತ್ತಾರೆ ಜನ ಸಂಗ್ರಾಮ ಪರಿಷತ್ ಸದಸ್ಯ ಈರಣ್ಣ ಮೂಲೆಮನೆ.