ಹುಲಿಗೆಮ್ಮ ದೇವಸ್ಥಾನ ಬಳಿ ಕೊಳಕು ನೀರಲ್ಲೇ ಭಕ್ತರ ಸಂಕ್ರಾಂತಿ ಪುಣ್ಯಸ್ನಾನ

KannadaprabhaNewsNetwork | Published : Jan 16, 2024 1:46 AM

ಸಾರಾಂಶ

ತ್ಯಾಜ್ಯ ಸೇರಿ ನೀರು ಹಸಿರು ಬಣ್ಣಕ್ಕೆ ತಿರುಗಿ ಕೊಳಚೆ ನೀರಾಗಿ ಪರಿವರ್ತನೆಯಾಗಿತ್ತು. ದೇವಿ ದರ್ಶನಕ್ಕೆ ಸ್ನಾನ ಮಾಡಿ ಮಡಿಯಾಗಿ ಹೋಗಬೇಕೆಂದು ಧಾವಂತದಲ್ಲಿ ಭಕ್ತರು ಮಜ್ಜುಗಟ್ಟಿದ ಮಲಿನ ನೀರನ್ನು ಮೈಮೇಲೆ ಸುರಿದು ದರ್ಶನಕ್ಕೆ ತೆರಳುತ್ತಿದ್ದರು.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಬರದಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿಲ್ಲ, ನದಿಯ ಒಡಲೂ ಒಣಗುತ್ತಿದ್ದು, ಸಂಕ್ರಾತಿ ಸಂಭ್ರಮಕ್ಕೆ ಗರಬಡಿದಂತಾಗಿದೆ. ಸಂಪ್ರದಾಯ ಬಿಡದವರು, ಬೇಡಿಕೊಂಡವರು ನದಿಯಲ್ಲಿ ಅಲ್ಲಲ್ಲಿಯೇ ನಿಂತ ಕೊಳಕು ನೀರಲ್ಲೇ ಮೂಗು ಮುಚ್ಚಿ ಸ್ನಾನ ಮಾಡಿ ಪುನೀತರಾದರು!ಮಕರ ಸಂಕ್ರಮಣ ಹಿನ್ನೆಲೆ ತಾಲೂಕಿನ ಹುಲಿಗೆಮ್ಮ ದೇವಸ್ಥಾನ ಬಳಿ, ಶಿವಪುರ ಮಾರ್ಕಂಡೇಶ್ವರ ದೇವಸ್ಥಾನ ಬಳಿ ಗಬ್ಬು ನೀರಿನಲ್ಲಿ ಜನರು ಸ್ನಾನ ಮಾಡುವ ದೃಶ್ಯ ಮನಕಲಕುವಂತಿತ್ತು. ಪ್ರತಿ ವರ್ಷ ಇರುತ್ತಿದ್ದ ನದಿಯುದ್ದಕ್ಕೂ ಲಕ್ಷಾಂತರ ಭಕ್ತರ ಸಂಭ್ರಮಗೀ ಬಾರಿ ಇಲ್ಲದಂತಾಗಿತ್ತು.ಚರಂಡಿ ನೀರಿನಂತೆ ಕಲುಷಿತವಾಗಿರುವ ನೀರನ್ನು ಮೈಮೇಲೆ ಹಾಕಿಕೊಂಡು ಭಕ್ತರು ಮಡಿಯಾಗಿದ್ದಾರೆ. ನದಿಯ ಗುಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ಆ ನೀರು ನಿಂತಲ್ಲೇ ನಿಂತು ಹಾಗೂ ಅದರಲ್ಲಿ ತ್ಯಾಜ್ಯ ಸೇರಿ ನೀರು ಹಸಿರು ಬಣ್ಣಕ್ಕೆ ತಿರುಗಿ ಕೊಳಚೆ ನೀರಾಗಿ ಪರಿವರ್ತನೆಯಾಗಿತ್ತು. ದೇವಿ ದರ್ಶನಕ್ಕೆ ಸ್ನಾನ ಮಾಡಿ ಮಡಿಯಾಗಿ ಹೋಗಬೇಕೆಂದು ಧಾವಂತದಲ್ಲಿ ಭಕ್ತರು ಮಜ್ಜುಗಟ್ಟಿದ ಮಲಿನ ನೀರನ್ನು ಮೈಮೇಲೆ ಸುರಿದು ದರ್ಶನಕ್ಕೆ ತೆರಳುತ್ತಿದ್ದರು.

ಮಕರ ಸಂಕ್ರಾಂತಿ ಸಂದರ್ಭದಲ್ಲಿ ಪ್ರತಿ ವರ್ಷ ನದಿಯುದ್ದಕ್ಕೂ ಲಕ್ಷಾಂತರ ಭಕ್ತರು ಸ್ನಾನ ಮಾಡುವುದು ಸಂಪ್ರದಾಯ. ಆದರೆ ಈ ವರ್ಷ ಅಲ್ಲಲ್ಲಿ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಮಾತ್ರ ಭಕ್ತರು ಸ್ನಾನ ಮಾಡುತ್ತಿರುವುದು ಕಂಡುಬಂದಿತು.ಹುಲಿಗೆಮ್ಮ ಬಳಿ ಪರ್ಯಾಯ ವ್ಯವಸ್ಥೆ ಆಗಬೇಕು ಎನ್ನುವ ಕೂಗು ಕೇಳಿಬರುತ್ತಲೇ ಇದೆ. ಆದರೂ ಸರ್ಕಾರ ಕಿವಿಗೊಡುತ್ತಿಲ್ಲ. ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಭಕ್ತರ ಕಾಣಿಕೆಯೇ ₹೬೦-೭೦ ಕೋಟಿ ಕೊಳೆಯುತ್ತಿದ್ದರೂ ಬಳಕೆ ಮಾಡುತ್ತಿಲ್ಲ. ಸರಿಯಾದ ವ್ಯವಸ್ಥೆ ಕಲ್ಪಿಸುತ್ತಿಲ್ಲ.

10 ವರ್ಷಗಳಲ್ಲೇ ಭೀಕರ: ಈ ವರ್ಷದಷ್ಟು ಭೀಕರ ಪರಿಸ್ಥಿತಿ ಕಳೆದ 10 ವರ್ಷಗಳಲ್ಲಿಯೇ ಕಂಡಿಲ್ಲ ಎನ್ನಲಾಗುತ್ತಿದೆ. ಜಲಾಶಯದಲ್ಲಿ ನೀರು ತಳ ಸೇರಿದೆ. ಸಂಕ್ರಮಣದ ವೇಳೆಯಲ್ಲಿ ಒಂದಷ್ಟು ನೀರು ನದಿಗೆ ಬಿಡುವ ಮೂಲಕ ಅನುಕೂಲ ಮಾಡುತ್ತಿದ್ದರು. ನೀರಿನ ಅಭಾವ ಇರುವುದರಿಂದ ಈ ವರ್ಷ ಸಂಪ್ರದಾಯ ಪಾಲಿಸಲು ಆಗುತ್ತಿಲ್ಲ. ನದಿಯಲ್ಲಿ ನೀರಿನ ಹರಿವು ತಗ್ಗುತ್ತಲೇ ಇರುವುದರಿಂದ ವರ್ಷದಿಂದ ವರ್ಷಕ್ಕೆ ಸಮಸ್ಯೆ ಹೆಚ್ಚುತ್ತಿದೆ.ಮಕ್ಕಳಿಗೂ ಗಲೀಜು ನೀರಿನ ಸ್ನಾನ: ಇಲ್ಲಿ ಚಿಕ್ಕ ಮಕ್ಕಳಿಗೂ ಈ ಕೊಳಚೆ ನೀರಿನಿಂದ ಭಕ್ತರು ಸ್ನಾನ ಮಾಡಿಸಿದ್ದಾರೆ. ಮಡಿಯ ಹೆಸರಿನಲ್ಲಿ ಮಕ್ಕಳಿಗೆ ಈ ರೀತಿ ನೀರು ಸೂಕ್ತವಾಗುತ್ತಾ? ಬಾಯಿಯಲ್ಲಿ ನೀರು ಹಾಕಿಕೊಳ್ಳುವವರ ಸಂಖ್ಯೆಗೇನೂ ಕಡಿಮೆ ಇರಲಿಲ್ಲ.ಬಿಸಾಡಿದ ಬಟ್ಟೆಯಿದ್ದರೂ ಸ್ನಾನ: ನದಿಯಲ್ಲಿ ಭಕ್ತರು ಸ್ನಾನ ಮಾಡಿ ತಮ್ಮ ಬಟ್ಟೆಗಳನ್ನು ಅಲ್ಲಿಯೇ ಬಿಸಾಡಿದ್ದರು. ಸ್ನಾನ ಮಾಡಿ ಬೇರೆ ಭಕ್ತರು ಬಿಸಾಡಿದ ಬಟ್ಟೆಗಳು ನೀರಿನಲ್ಲಿದ್ದರೂ ಭಕ್ತರು ಆ ನೀರನ್ನು ಮೈಮೇಲೆ ಹಾಕಿಕೊಂಡು ಮಡಿವಂತಿಕೆಗೆ ಮಾರುಹೋದರು.ಸಂಕ್ರಮಣ ವೇಳೆ ಸತತ ಮೂರು ವರ್ಷ ಸ್ನಾನ ಮಾಡುವ ಹರಕೆ ಹೊತ್ತಿದ್ದೆ. ಹೀಗಾಗಿ ವಿಧಿಯಿಲ್ಲ. ಗಬ್ಬು ನೀರಿನಲ್ಲಿಯೇ ಸ್ನಾನ ಮಾಡಿದ್ದೇನೆ ಎನ್ನುತ್ತಾರೆ ಭಕ್ತ ಸೂರಪ್ಪ ಮಡಿವಾಳರ.ತುಂಗಭದ್ರಾ ನದಿಯಲ್ಲಿ ನೀರಿಲ್ಲದಂತಾಗಿದೆ. ಭಕ್ತರಿಗೆ ತೀವ್ರ ಸಮಸ್ಯೆಯಾಗಿದೆ. ಸರ್ಕಾರ ಹುಲಿಗೆಮ್ಮ ದೇವಸ್ಥಾನದಲ್ಲಿರುವ ಹಣ ಬಳಸಿಕೊಂಡು ನದಿ ಬಳಿ ಸ್ನಾನಘಟ್ಟ, ನೀರಿನ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಕೊಪ್ಪಳ ಜಿಪಂ ಮಾಜಿ ಅಧ್ಯಕ್ಷ ಜನಾರ್ದನ ಹುಲಿಗಿ.

Share this article