ಮುಂಡಗೋಡ:
ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಮಾತ್ರ ನೀಡಬಹುದು. ಆದರೆ, ಉತ್ತಮ ಸಂಸ್ಕಾರ ನೀಡಲು ತಂದೆ-ತಾಯಿಯಿಂದ ಮಾತ್ರ ಸಾಧ್ಯ. ಮಕ್ಕಳಿಗೆ ತಾಯಿಯೇ ಮೊದಲ ಗುರು ಎಂಬುವುದನ್ನು ನಾವು ಅರಿತುಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಮಂಗಳವಾರ ತಾಲೂಕಿನ ತಮ್ಯಾನಕೊಪ್ಪ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಆರೋಗ್ಯ ಪೂರಕ ವಾತಾವರಣ ನಿರ್ಮಿಸುವಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪಾಲಕರದ್ದು ಆಗಿದೆ. ಮಕ್ಕಳು ೮ ಗಂಟೆ ಮಾತ್ರ ಶಾಲೆಯಲ್ಲಿ ಉಳಿಯುತ್ತಾರೆ. ಇನ್ನುಳಿದ ಸಮಯದಲ್ಲಿ ಪಾಲಕರ ಕೈಯಲ್ಲಿರುತ್ತಾರೆ. ತಾಯಂದಿರುವ ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿದರೆ ವ್ಯಸನಮುಕ್ತ, ಆರೋಗ್ಯ ಹಾಗೂ ಶಿಕ್ಷಣವಂತ ಮಕ್ಕಳು ತಯಾರಾಗುತ್ತಾರೆ. ಇದರಿಂದ ಕುಟುಂಬದ ಆರ್ಥಿಕ ಬಲ ಕೂಡ ಹೆಚ್ಚುತ್ತದೆ. ಯಾವ ಉದ್ದೇಶದಿಂದ ಶಿಕ್ಷಣ ನೀಡುತ್ತೇವೆಯೋ ಅದು ಫಲಪ್ರದವಾಗುತ್ತದೆ ಎಂದರು.ಕೆಲ ವರ್ಷಗಳ ಹಿಂದೆ ಭತ್ತ ಪ್ರಧಾನ ಪ್ರದೇಶವಾಗಿದ್ದ ಈ ಭಾಗ ಈಗ ಕಬ್ಬಿನ ಕಣಜವಾಗಿ ಪರಿವರ್ತನೆಯಾಗಿದ್ದು, ಆರ್ಥಿಕ ಶಕ್ತಿಯುತರಾಗಿ ರೈತರು ಹೊರ ಹೊಮ್ಮುತ್ತಿದ್ದಾರೆ. ನಾವು ಮಾಡುವ ಕೆಲಸದಲ್ಲಿ ನಮಗೆ ಖಿನ್ನತೆ ಇರಬಾರದು. ನಾವು ಬೆಳೆದ ಬೆಳೆ ಕತ್ತರಿಸುವುದಕ್ಕೆ ಮುಜುಗರಪಟ್ಟುಕೊಳ್ಳದೆ ನಮ್ಮ ಕೆಲಸ ನಾವು ಮಾಡಿಕೊಂಡರೆ ಆತ್ಮಾಭಿಮಾನ ಹೆಚ್ಚುತ್ತದೆ ಎಂದು ಶಾಸಕರು ಕಿವಿಮಾತು ಹೇಳಿದರು.ಕಬ್ಬು ಕತ್ತರಿಸಲು ಬೇರೆ ರಾಜ್ಯಗಳಿಂದ ಜನರನ್ನು ಕರೆಸುವುದರಿಂದ ಕೋಟ್ಯಂತರ ರೂಪಾಯಿ ಹಣ ಅನ್ಯ ರಾಜ್ಯ ಸೇರುತ್ತದೆ. ಈ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ದುಡಿಮೆಯೂ ಆಗುತ್ತದೆ. ಸಮಸ್ಯೆಯೂ ಪರಿಹಾರವಾಗುತ್ತದೆ. ಹೊರ ರಾಜ್ಯಕ್ಕೆ ಹೋಗುವ ಹಣ ನಮ್ಮಲ್ಲಿಯೇ ಉಳಿಯುತ್ತದೆ. ಬಡತನ ದೂರವಾಗುತ್ತದೆ ಹಾಗೂ ಸ್ಥಳೀಯ ಕೃಷಿ ಕೂಲಿಕಾರರ ಆರ್ಥಿಕ ಶಕ್ತಿ ಕೂಡ ಹೆಚ್ಚುತ್ತದೆ ಎಂದರು.ಇದೇ ವೇಳೆ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ವಸತಿ ಯೋಜನೆ ಫಲಾನುಭವಿಗಳಿಗೆ ಶಾಸಕ ಶಿವರಾಮ ಹೆಬ್ಬಾರ ಹಕ್ಕುಪತ್ರ ವಿತರಿಸಿದರು. ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಗ್ರಾಪಂ ಸದಸ್ಯ ಪ್ರದೀಪ ಲಮಾಣಿ, ಮಂಜುನಾಥ ಕಟಗಿ, ಸುನಿಲ ಲಮಾಣಿ, ವೈ.ಪಿ. ಪಾಟೀಲ ಉಪಸ್ಥಿತರಿದ್ದರು.