ಕನ್ನಡಪ್ರಭ ವಾರ್ತೆ ನಾಗಮಂಗಲ
ಮಕ್ಕಳ ಮನಸ್ಸಿಗೆ ಬಿತ್ತಿದ ಅಕ್ಷರ ಜ್ಞಾನ ಉತ್ತಮ ಫಲ ಕೊಡುತ್ತದೆ. ಧಾರ್ಮಿಕ ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಅಕ್ಷರಾಭ್ಯಾಸ ಮಾಡಿಸಿದರೆ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಹೇಳಿದರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಜ್ಞಾನಾಂಕುರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಂಪ್ರದಾಯಿಕ ಅಕ್ಷರಾಭ್ಯಾಸದ ದೀಕ್ಷೆಯನ್ನು ಕೊಟ್ಟು ಆಶೀರ್ವಚನ ನೀಡಿದ ಶ್ರೀಗಳು, ಜ್ಞಾನದ ಕೊಡ ತುಂಬಿದ್ದರೆ ಇತರರಿಗೆ ಹಂಚುವುದು ಸುಲಭ. ಮೊದಲ ಪಾಠಶಾಲೆಯಾದ ಮನೆಯಲ್ಲಿ ಪ್ರಥಮ ಗುರುವಾದ ತಾಯಿಯಿಂದ ಕಲಿತ ಸಂಸ್ಕಾರವು ಶಾಲೆಯಲ್ಲಿ ಮುಂದುವರೆಯುತ್ತದೆ ಎಂದರು.
ಮಕ್ಕಳನ್ನು ಅತಿ ಮುದ್ದಾಗಿ ಬೆಳೆಸಿ ದುವರ್ತನೆಗೆ ದೂಡುವ ಗಾಂಧಾರಿಯಾಗಬೇಡಿ. ಸಮಾಜದ ಸೌಹಾರ್ದತೆಯಲ್ಲಿ ಬೆರೆಯುವ ಸದ್ಭಾವನಗಳನ್ನು ಬೆಳೆಸಿ ಉತ್ತಮ ಪ್ರಜೆಗಳನ್ನಾಗಿಸಬೇಕು. ತಾಯಂದಿರು ಮಕ್ಕಳಿಗೆ ನೀಡುವ ಶ್ರೇಷ್ಠ ಸಂಸ್ಕಾರಗಳು ಆ ಮಗುವನ್ನು ರಾಮನಂತೆ ಪುರುಷೋತ್ತಮನನ್ನಾಗಿಸುತ್ತದೆ ಎಂದರು.ಮುಂಜಾನೆಯಿಂದಲೇ ಆರಂಭವಾಗಿದ್ದ ಜ್ಞಾನದಾತೆ ಶ್ರೀಸರಸ್ವತಿ ಹೋಮದ ಮಹಾ ಪೂರ್ಣಾಹುತಿಯನ್ನು ನೆರವೇರಿಸಿ ವೇದ ಘೋಷ, ಓಂಕಾರ ನಾದೋಪಾಸನೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ದೊಂದಿಗೆ ಜ್ಞಾನ ದೀಕ್ಷೆಯನ್ನು ಶ್ರೀಗಳು ನೀಡಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಮಾತನಾಡಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಎಲ್ಲಾ ಶಾಲೆಗಳಲ್ಲೂ ಜ್ಞಾನಾಂಕುರ ಕಾರ್ಯಕ್ರಮವನ್ನು ಆಯೋಜಿಸಿ ಶ್ರೀಗಳಿಂದ ಅಕ್ಷರ ದೀಕ್ಷೆಯನ್ನು ನೀಡಲಾಗುತ್ತಿದೆ ಎಂದರು.ನಮ್ಮ ಪೂರ್ವಜರು ಹೇಳಿರುವಂತೆ ಮೂರು ವರ್ಷ ಕಲಿತದ್ದು ನೂರು ವ?ದವರೆಗೂ ಎಂಬ ಮಾತು ಎಂದಿಗೂ ಜನಜನಿತ. ಮಗುವಿನ ಬುದ್ಧಿಶಕ್ತಿ ಮತ್ತು ಮಾನಸಿಕ ಸಾಮರ್ಥ್ಯವನ್ನು ಅರಿತು ಕಲಿಸುವ ಜ್ಞಾನ ಸಮಾಜದ ಬೇರು ಎಂದು ಭಾವಿಸಿ ಮೂಲ ಶಿಕ್ಷಣಕ್ಕೆ ನೀರೆರೆದು ಪೋಷಿಸಿದರೆ ಉತ್ತಮ ಫಲ ನೀಡುತ್ತದೆ ಎಂಬುದೇ ಈ ಸಂಸ್ಕಾರಯುತ ಅಕ್ಷರಾಭ್ಯಾಸದ ಮೂಲ ತತ್ವವಾಗಿದೆ ಎಂದರು.
ವಿಶ್ವವಿದ್ಯಾಲಯದ ಆಡಳಿತ ಮತ್ತು ಶೈಕ್ಷಣಿಕ ಸಲಹೆಗಾರ ಡಾ. ಈ ಎಸ್ ಚಕ್ರವರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಡೀನ್ ಡಾ. ಬಿ ರಮೇಶ್ ಕಾರ್ಯಕ್ರಮ ಕುರಿತು ಮಾತನಾಡಿದರು.ಶಾಲೆಯ ವಿದ್ಯಾರ್ಥಿನಿ ಕು.ನಿಹಾರಿಕಾ ಈ ವಿಶಿಷ್ಟ ದಿನದ ಮಹತ್ವವನ್ನು ಸಾದರ ಪಡಿಸಿದರು. ಪುಟ್ಟ ಮಕ್ಕಳೇ ಕಾರ್ಯಕ್ರಮ ನಿರ್ವಹಿಸಿದ್ದು ವಿಶೇಷವಾಗಿತ್ತು. ಶಾಸ್ತ್ರೀಯ ನೃತ್ಯ ಮತ್ತು ಗಾಯನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಮೆಚ್ಚುಗೆಗೆ ಪಾತ್ರವಾದವು. ಚಿತ್ರಕಲಾ ಶಿಕ್ಷಕ ಬೊಮ್ಮರಾಯಸ್ವಾಮಿ ಅವರ ಸುಂದರ ವಿನ್ಯಾಸದ ವಿಶೇಷ ವೇದಿಕೆಯಲ್ಲಿ ಸುಮಾರು 130 ಮಕ್ಕಳಿಗೆ ಪೋಷಕರ ಸಮ್ಮುಖದಲ್ಲಿ ಅಕ್ಷರಭ್ಯಾಸ ಮಾಡಿಸಲಾಯಿತು.
ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆ ಪ್ರಾಂಶುಪಾಲ ವಿ. ಪುಟ್ಟಸ್ವಾಮಿ, ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ.ಎನ್. ಶಿಲ್ಪ, ಸಿ.ದರ್ಶಿನಿ, ಸಂಯೋಜಕರಾದ ಆರೋಕಿಯಸಾಮಿ, ಸಪ್ನಾ ಸಜೀವನ್, ಟಿ.ಎಸ್.ಗಾಯತ್ರಿ ಸೇರಿದಂತೆ ಹಲವರು ಇದ್ದರು.