ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪೋಷಕರು ಕಲಿಸಿದ ಸಂಸ್ಕಾರ, ಶಾಲಾ-ಕಾಲೇಜುಗಳಲ್ಲಿ ಕಲಿತ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಡೀನ್ ಹಾಗೂ ನಿರ್ಧೇಶಕ ಡಾ.ಎಂ.ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು.ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಸಂಸ್ಕೃತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡವೂ ಪರಿಪೂರ್ಣ ಭಾಷೆ
ಪ್ರಪಂಚದಲ್ಲಿ ಕೇವಲ ಮೂರು ಭಾಷೆಗಳು ಮಾತ್ರ ಪರಿಪೂರ್ಣ ಭಾಷೆಗಳು ಅದರೆಲ್ಲಿ ನಮ್ಮ ಕನ್ನಡ ಮತ್ತು ಸಂಸ್ಕೃತ ಭಾಷೆಗೆ ಮೊದಲೆರಡು ಸ್ಥಾನ ದಕ್ಕಿದೆ. ಅದಕ್ಕೆ ಕಾರಣ ನಮ್ಮ ಭಾಷೆ ನುಡಿದಂತೆ ಬರೆಯಬಹುದು, ಬರೆದಂತೆ ಓದಬಹುದು. ಇನ್ನೂ ಗ್ರೀಕ್ ಭಾಷೆಯೂ ಸಹ ಪರಿಪೂರ್ಣ ಭಾಷೆ ಎಂದು ಕರೆಸಿಕೊಂಡಿದೆ ಎಂದು ಹೇಳಿದರು. ಕರ್ನಾಟಕ ದಕ್ಷಿಣ ಪ್ರಾಂತ್ಯದ ಕೋಶ ಪ್ರಮುಖ ಮಧುಸೂದನ ದೇಸಾಯಿ ಮಾತನಾಡಿ, ಸಂಸ್ಕೃತ ಕೇವಲ ಭಾಷೆಯಲ್ಲ. ಅದು ಭಾರತದ ಆತ್ಮದ ಧ್ವನಿ. ಹಿಂದೆ ಭಾರತದ ಸಾಧನೆ ಹೇಗಿತ್ತು ಎಂಬುದನ್ನು ಸಂಸ್ಕೃತ ತೋರಿಸಿಕೊಡುತ್ತದೆ. ಈ ಭಾಷೆ ದೇಹದ ನರನಾಡಿಗಳ ಆರೋಗ್ಯ ವೃದ್ಧಿಗೂ ಕಾರಣಿಭೂತವಾಗಿದೆ. ನ್ಯಾಯಾಲಯ, ವಾಯು ಸೇನೆ, ನೌಕಾ ಸೇನೆ, ಭೂ ಸೇನೆ ಇತ್ಯಾದಿ ಎಲ್ಲಾ ಸ್ಥಳಗಳಲ್ಲಿ ಸಂಸ್ಕೃತದ ಧ್ಯೇಯ ವಾಕ್ಯಗಳನ್ನು ನಾವು ಕಾಣಬಹುದು ಎಂದರು.ಸಂಸ್ಕೃತ ಬಹಳ ವಿಸ್ತಾರ ಭಾಷೆಅಖಿಲ ಭಾರತ ಸಂಸ್ಕೃತ ವಿಶ್ವ ವಿದ್ಯಾಲಯದ ಉಪ ಕುಲಪತಿ ಶ್ರೀಶ್ ದೇವ್ ಪೂಜಾರಿ ಮಾತನಾಡಿ, ಸಂಸ್ಕೃತದಲ್ಲಿ ಅನೇಕ ಜ್ಞಾನ ಶಾಖೆಗಳು ಇವೆ. ನ್ಯಾಯಶಾಸ್ತ್ರ, ವೇದಾಂತಶಾಸ್ತ್ರ, ವ್ಯಾಕರಣಶಾಸ್ತ್ರ, ಮೀಮಾಂಸಾಶಾಸ್ತ್ರ, ಅರ್ಥಶಾಸ್ತ್ರ, ನೀತಿಶಾಸ್ತ್ರ, ಆಯುರ್ವೆದ, ವಾಸ್ತು, ಖಗೋಲವಿಜ್ಞಾನ. ಹೀಗೆ. ಅದರ ವ್ಯಾಪ್ತಿ ಬಹಳ ವಿಸ್ತಾರವಾದದ್ದು. ಪ್ರಾಚೀನ ಕಾಲದಲ್ಲಿ ಅಧ್ಯಯನವೆಂದರೆ ಸಂಸ್ಕೃತದ ಅಧ್ಯಯನ, ಅದರಲ್ಲೂ ವಿಶೇಷವಾಗಿ ಒಂದೊಂದು ಶಾಸ್ತ್ರದಲ್ಲಿ ಪಾಂಡಿತ್ಯವನ್ನು ಪಡೆಯುತ್ತಿದ್ದರು. ಆಗ ಸಂಸ್ಕೃತ ಆಡುಭಾಷೆಯೇ ಆಗಿದ್ದರಿಂದ ಅದನ್ನು ಭಾಷೆಯಾಗಿ ಕಲಿಯುವ ಅನಿವಾರ್ಯತೆ ಇರಲಿಲ್ಲ ಎಂದು ಹೇಳಿದರು.
ಈ ವೇಳೆ ಕೋಲಾರದ ದೇವರಾಜ ಅರಸ್ ಮೆಡಿಕಲ್ ಕಾಲೇಜಿನ ಪ್ರಾದ್ಯಾಪಕರಾದ ಡಾ.ಪ್ರಸಾದ್,ಡಾ.ಶಾಸ್ತ್ರಿ,ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ನೋಡಲ್ ಅಧಿಕಾರಿ ಡಾ.ಸಿ.ಎನ್.ರವೀಂದ್ರ, ಯೂರಾಲಜಿಸ್ಟ್ ಡಾ.ದೊರೆಸ್ವಾಮಿ, ವಿಭಾಗ ಮುಖ್ಯಸ್ಥರಾದ ಡಾ.ಎಂ.ಆರ್.ಅನಿತ, ಡಾ.ಸುರೇಶ್ ನಾಯಕ್,ಡಾ.ರಮೇಶ್, ಡಾ.ಸಿ.ಎಸ್.ನಾಗಲಕ್ಷ್ಮಿ, ಡಾ.ಅರ್ಜುನ್ ಬಹದ್ದೂರ್, ಡಾ.ಶಂಕರಪ್ಪ, ಮತ್ತಿತರರು ಇದ್ದರು.