ಜುಗಲ್‌ ಬಂದಿಯಲ್ಲಿ ಹೊಸಪೇಟೆಯ ಸಂತೋಷ್ ಹಿರೋ

KannadaprabhaNewsNetwork | Updated : Feb 21 2024, 04:39 PM IST

ಸಾರಾಂಶ

ತನ್ನ ವಿಶೇಷ ಧ್ವನಿಯಿಂದಲೆ ಪ್ರಸಿದ್ಧಿಯಾದ ಸಂತೋಷ್‌ ಆಶ್ರಯ ಅವರು ಜುಗಲ್ ಬಂದಿ ಚಿತ್ರದಲ್ಲಿ ವಿಶೇಷಚೇತನ ಪಾತ್ರ ನಿರ್ವಹಿಸಿದ್ದಾರೆ.

ಹೊಸಪೇಟೆ: ಹೊಸಪೇಟೆ ಹುಡುಗ ಸಂತೋಷ್ ಆಶ್ರಯ ನಟನೆಯ ಜುಗಲ್ ಬಂದಿ ಚಿತ್ರ ಮಾರ್ಚ್‌ ಒಂದರಂದು ತೆರೆಗೆ ಬರುತ್ತಿದೆ. ಉತ್ತರ ಕರ್ನಾಟಕದ ಹುಡುಗ ಕಷ್ಟಪಟ್ಟು ಚಿತ್ರರಂಗಕ್ಕೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಹೊರಹೊಮ್ಮುತ್ತಿದ್ದಾರೆ.

ಮಾರ್ಚ್‌ ಒಂದರಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಥೇಟರ್‌ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ತನ್ನ ವಿಶೇಷ ಧ್ವನಿಯಿಂದಲೆ ಪ್ರಸಿದ್ಧಿಯಾದ ಸಂತೋಷ್‌ ಆಶ್ರಯ ಅವರು ಜುಗಲ್ ಬಂದಿ ಚಿತ್ರದಲ್ಲಿ ವಿಶೇಷಚೇತನ ಪಾತ್ರ ನಿರ್ವಹಿಸಿದ್ದಾರೆ.

ಸಂತೋಷ್ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಹೊಸಪೇಟೆಯಲ್ಲಿ, ಹಗರಿಬೊಮ್ಮನಹಳ್ಳಿಯಲ್ಲಿ ಮೆಕ್ಯಾನಿಕಲ್‌ ಡಿಪ್ಲೊಮಾ ಓದಿದ್ದಾರೆ. ಎಂಜಿನಿಯರ್‌ ಆಗಿಯೂ ಕೆಲಸ ಮಾಡಿರುವ ಸಂತೋಷ್ ಆಶ್ರಯಗೆ ಸೆಳೆದಿದ್ದು ಚಿತ್ರರಂಗ.

2015ರಲ್ಲಿ ಹೀಗೊಂದು ಪ್ರೇಮಕಥೆ ಎಂಬ ಕಿರುಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 2017ರಲ್ಲಿ ರಾಣಿವಾಸ ಎಂಬ ಕಿರುಚಿತ್ರವು ಹೊಸಪೇಟೆಯ ಮನೆ ಮನೆಗೆ ತಲುಪಿತ್ತು. ಒಂದಷ್ಟು ಸಿನಿಮಾಗಳಿಗೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದರು. 

2018ರಲ್ಲಿ ಅಭಿರುಚಿ ಕಿರುಚಿತ್ರದ ಮೂಲಕ ಬೆಂಗಳೂರಿನ ಜನಕ್ಕೆ ಪರಿಚಯವಾಗಿ, 2019ರಲ್ಲಿ ವೇಗ ಎಂಬ ವಿಡಿಯೋ ಕವರ್ ಒಂದರ ಮೂಲಕ ಆಕ್ಷನ್ ಕೂಡ ಮಾಡಬಲ್ಲೆ ಎಂದು ನಿರೂಪಿಸಿದರು, ಆ ವೀಡಿಯೋವನ್ನು ರಾಕಿಂಗ್ ಸ್ಟಾರ್ ಯಶ್ ಅವರು ಬಿಡುಗಡೆಗೊಳಿಸಿದ್ದರು.

2021ರಲ್ಲಿ ಅಸಿಸ್ಟಂಟ್ ಡೈರೆಕ್ಟರ್ ಕಿರುಚಿತ್ರ ಮಾಡಿದರು. ಇನ್‌ಸ್ಟಾಗ್ರಾಂನಲ್ಲಿ ಇವರೇ ಸ್ವಂತ ಸಾಲುಗಳನ್ನು ಬರೆದು, ಇವರದ್ದೇ ಧ್ವನಿಯಲ್ಲಿ ವಿಡಿಯೋ ಮಾಡಲು ಶುರು ಮಾಡಿದರು, ಆ ವಿಡಿಯೋಗಳು ವೈರಲ್ ಆಗಿ ರಾಜ್ಯದ ಜನತೆ ಇವರನ್ನು ಗುರುತಿಸುವಂತಾಯಿತು.

ಜುಗಲ್ ಬಂದಿ ಚಿತ್ರದಲ್ಲಿ ಕಾಂತಾರದ ಮಾನಸಿ ಸುಧೀರ, ಸಲಗ ಖ್ಯಾತಿಯ ಎಸ್. ಶೆಟ್ಟಿ ಅಶ್ವಿನ್‌ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಕೂಡ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಹೊಸಪೇಟೆಯ ಕಮಲಾಪುರದ ಪ್ರಸಾದ್ ಎಚ್.ಎಂ. ಸಂಕಲನಕಾರರಾಗಿ ಕೆಲಸ ನಿರ್ವಹಿಸಿದ್ದಾರೆ. 

ಇನ್ನೂ ಹೊಸಪೇಟೆಯ ಕಲಾವಿದ ಚಂದ್ರಶೇಖರ್‌ ಎಸ್‌.ಎಸ್‌. ಕೂಡ ಸಣ್ಣದೊಂದು ಪಾತ್ರ ಮಾಡಿದ್ದಾರೆ. 

ಜನರ ಪ್ರೀತಿ ಮುಖ್ಯ: ಜುಗಲ್‌ ಬಂದಿ ಚಿತ್ರಕ್ಕೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನ ಬೆಂಬಲವಾಗಿ ನಿಲ್ಲುವ ವಿಶ್ವಾಸ ಇದೆ. ಪುನೀತ್‌ ರಾಜ್‌ಕುಮಾರ ಅಭಿಮಾನಿಯಾಗಿರುವೆ. ಸಿನಿಮಾ ರಂಗದಲ್ಲಿ ಬೆಳೆಯಲು ಜನರ ಪ್ರೀತಿ ಮುಖ್ಯ.

ಜುಗಲ್‌ ಬಂದಿ ಸಿನಿಮಾದಲ್ಲಿ ಶ್ರಮವಹಿಸಿ ಎಲ್ಲರೂ ಕೆಲಸ ಮಾಡಿದ್ದೇವೆ. ಉತ್ತಮವಾಗಿ ನಟಿಸಿದ್ದೇನೆ. ಕಲೆಯನ್ನು ನಮ್ಮ ಜನರು ಪ್ರೀತಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ನಟ ಸಂತೋಷ್ ಆಶ್ರಯ ತಿಳಿಸಿದರು.

Share this article