ಉಂಚಳ್ಳಿಯಲ್ಲಿ ನಾಟಿ ಹಬ್ಬ: ಗದ್ದೆಯಲ್ಲಿ ಕುಣಿದು, ಕುಪ್ಪಳಿಸಿದ ಯುವ ಜನತೆ

KannadaprabhaNewsNetwork | Published : Aug 18, 2024 1:46 AM

ಸಾರಾಂಶ

ಶಿರಸಿ ತಾಲೂಕಿನ ಉಂಚಳ್ಳಿಯ ಸರಸ್ವತಿ ಫಾರ್ಮ್‌ನಲ್ಲಿ ನಾಟಿ ಹಬ್ಬ ನಡೆಸಲಾಯಿತು. ಸಾಂಪ್ರದಾಯಿಕ ಕೃಷಿಗೆ ಉತ್ತೇಜನ ನೀಡಿ ರೈತರಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಿರಸಿ: ಅಳಿವಿನ ಅಂಚಿನಲ್ಲಿರುವ ಬತ್ತಗಳ ತಳಿಗಳ ಸಂವರ್ಧನೆಗಾಗಿ ಸಾವಯವ ಕೃಷಿ ಪದ್ಧತಿಯ ಮೂಲಕ ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ತಾಲೂಕಿನ ಉಂಚಳ್ಳಿಯ ಸರಸ್ವತಿ ಫಾರ್ಮ್‌ನಲ್ಲಿ ನಾಟಿ ಹಬ್ಬ ನಡೆಸಲಾಯಿತು.

ಸಾಂಪ್ರದಾಯಿಕ ಕೃಷಿಗೆ ಉತ್ತೇಜನ ನೀಡಿ ರೈತರಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ಸ್ಕೊಡ್‌ವೆಸ್ ಸಂಸ್ಥೆ, ಜಿಐಝಡ್, ಕೃಷಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಟಿ ಹಬ್ಬ ಪಾರಂಪರಿಕ ಕೃಷಿ ಪದ್ಧತಿಯಂತೆ ನಡೆಯಿತು. ಗೋ ಪೂಜೆ ನೆರವೇರಿಸಿ, ಗೋಗ್ರಾಸ ನೀಡುವ ಮೂಲಕ, ನೇಗಿಲು, ನೊಗ ಹಾಗೂ ಅಗೆ ಪೂಜೆಯೊಂದಿಗೆ ನಾಟಿ ಕಾರ್ಯ ಆರಂಭಿಸಲಾಯಿತು. ಸ್ಕೊಡ್‌ವೆಸ್ ಸಂಸ್ಥೆಯ ಪದಾಧಿಕಾರಿಗಳು, ಕೃಷಿ, ತೋಟಗಾರಿಕೆ ಇಲಾಖಾ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಸಾವಯವ ಕೃಷಿಕರು, ರೈತ ಉತ್ಪಾದಕ ಕಂಪೆನಿಗಳ ಪದಾಧಿಕಾರಿಗಳು ಬತ್ತದ ಸಸಿಗಳನ್ನು ನಾಟಿ ಮಾಡಿದರು.

ಉಂಚಳ್ಳಿಯ ಸರಸ್ವತಿ ಫಾರಂನ ಸುಮಾರು ೫ ಎಕರೆ ಗದ್ದೆಯಲ್ಲಿ ೨೨ ವಿವಿಧ ತಳಿಯ ೫೯ ಕೆಜಿ ಬೀಜಗಳನ್ನು ಹಾಕಿ ನಾಟಿ ಮಾಡಲಾಯಿತು. ಅಪರೂಪದ ಬತ್ತದ ತಳಿಗಳಾದ ಗಜಮಿನಿ, ಶೋಬಿನಿ, ಮೈಸೂರು ಮಗ, ಕಗ್ಗ, ರಾಜಮುಡಿ, ಮಂಜಗುಣಿ ಸಣ್ಣ ಸೇರಿ ಪಾರಂಪರಿಕ ಅಳಿವಿನಂಚಿನಲ್ಲಿರುವ ಬತ್ತದ ತಳಿಯನ್ನು ನಾಟಿ ಮಾಡಲಾಗಿದೆ. ಇದರ ಜತೆಯಲ್ಲಿ ಈ ಭಾಗದ ಸುತ್ತಮುತ್ತಲಿನ ಪ್ರಗತಿಪರ ಮತ್ತು ಆಸಕ್ತ ರೈತರಿಗೂ ಕೆಲವು ಅಪರೂಪದ ಬತ್ತ ತಳಿಗಳ ಬೀಜವನ್ನು ನಾಟಿ ಮಾಡಲು ನೀಡಲಾಗಿದೆ.

ಕಾರ್ಯಕ್ರಮದ ಕುರಿತು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾಹಿತಿ ನೀಡಿ, ಇಂದು ನಾವು ನಾಟಿ ಹಬ್ಬವನ್ನು ಸಾಂಕೇತಿಕವಾಗಿ ಆರಂಭಿಸಿದ್ದೇವೆ. ಇದರ ಮುಂದಿನ ಸಾಧಕ-ಬಾಧಕಗಳನ್ನು ನೋಡಿ ಮುಂದಿನ ರೂಪುರೇಷೆ ಮಾಡಲಿದ್ದೇವೆ. ಇಂದು ನಮ್ಮೊಂದಿಗೆ ಹಲವು ಪರಿಣತರು, ಕೃಷಿ ಸಂಶೋಧಕರು, ಮಾದರಿ ರೈತರು ಭಾಗವಹಿಸಿದ್ದಾರೆ. ಈಗಾಗಲೇ ವಿವಿಧ ತಳಿಯ ೫೯ ಕೆಜಿ ಬತ್ತ ಹಾಕಲಾಗಿದ್ದು, ಅಂದಾಜು ೧೨ ಕ್ವಿಂಟಲ್ ಫಸಲು ಬರುವ ನಿರೀಕ್ಷೆ ಹೊಂದಿದ್ದೇವೆ. ಇದನ್ನು ಶುದ್ಧ ನೈಸರ್ಗಿಕ ಕೃಷಿಯ ಮೂಲಕ ಬೆಳೆಸಲಿದ್ದೇವೆ. ರೈತರಿಗೆ ಉತ್ತಮ ತಳಿಯ ಸಾಂಪ್ರದಾಯಿಕ ಬೀಜ ದೊರೆಯಬೇಕು. ರೈತರಿಗೆ ಬೇಕಾದ ಬೀಜ ಬ್ಯಾಂಕ್ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ಇದಲ್ಲದೇ ಕೆಲವು ಆಸಕ್ತ ರೈತರಿಗೂ ಅಪರೂಪದ ತಳಿಯ ಬೀಜಗಳನ್ನು ಬೆಳೆಸಲು ನೀಡಲಾಗಿದೆ. ಅವರು ಬೆಳೆದ ಬೀಜಗಳನ್ನು ನಾವೇ ಖರೀದಿ ಮಾಡುತ್ತೇವೆ. ಒಟ್ಟಾರೆಯಾಗಿ ದೊಡ್ಡ ಮಟ್ಟದಲ್ಲಿ ಸಾಂಪ್ರದಾಯಿಕ ಬತ್ತದ ತಳಿಗಳ ಸಂರಕ್ಷಣೆ ಮಾಡುವುದು ನಮ್ಮ ಉದ್ದೇಶ ಎಂದರು.

ನಾವು ಕೃಷಿಯಲ್ಲಿ ತುಂಬಾ ಬೇರೆ ಬೇರೆ ಸಮಸ್ಯೆಗಳು ರೈತರು ಎದುರಿಸುತ್ತಿರುವ ತೊಂದರೆಗಳನ್ನು ನೋಡುತ್ತಿದ್ದೇವೆ. ಆದರೆ ಅದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಪ್ರಯತ್ನಗಳು ಕಡಿಮೆ ಇದೆ ಎನ್ನುವ ಭಾವನೆ ಬಹುತೇಕರಲ್ಲಿ ಇದೆ. ಈ ನಿಟ್ಟಿನಲ್ಲಿ ಸ್ಕೊಡ್‌ವೆಸ್ ಸಂಸ್ಥೆ, ಜಿಐಝಡ್ ಸಂಸ್ಥೆ, ಕೃಷಿ ಇಲಾಖೆ ಸಹಯೋಗದಲ್ಲಿ ಯುವಕರನ್ನು ಕೃಷಿಯತ್ತ ಸೆಳೆಯುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ರೈತರಿಗೆ ಬೇಕಾಗುವಷ್ಟು ಬೀಜ ದೊರೆಯುಂತೆ ಮಾಡಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪಾರಂಪರಿಕ ಪದ್ದತಿಯಲ್ಲಿ ಕೃಷಿ ಮಾಡಬೇಕು. ನಮ್ಮ ಭೂಮಿಯಲ್ಲಿರುವ ಜೀವ ಜಂತುಗಳನ್ನು ರಕ್ಷಣೆ ಮಾಡಬೇಕು. ನಮಗೆ ಪೌಷ್ಟಿಕವಾದ ಸಾತ್ವಿಕ ಆಹಾರ ನಮಗೆ ಲಭ್ಯವಾಗುವಂತೆ ಮಾಡಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೃಷಿ ಇಲಾಖೆಯ ಉಪ ನಿರ್ದೇಶಕ ಟಿ.ಎಚ್. ನಟರಾಜ, ಕೃಷಿ ವಿಜ್ಞಾನ ಕೇಂದ್ರದ ಡಾ. ರೂಪಾ ಪಾಟೀಲ್, ಸ್ಕೊಡ್‌ವೆಸ್ ಉಪಾಧ್ಯಕ್ಷ ಕೆ.ವಿ. ಖೂರ್ಸೆ, ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮತ್ತು ಮುಖ್ಯ ಹಣಕಾಸು ಅಧಿಕಾರಿ ಸರಸ್ವತಿ ಎನ್. ರವಿ, ಸಂಸ್ಥೆಯ ನಿರ್ದೇಶಕ ಪ್ರೊ. ಕೆ.ಎನ್. ಹೊಸ್ಮನಿ ಮತ್ತಿತರರು ಇದ್ದರು.

Share this article