ಇರುವುದೊಂದೇ ಭೂಮಿ ಅದರ ರಕ್ಷಣೆ ನಮ್ಮೆಲ್ಲರ ಹೊಣೆ: ಸತೀಶ್ ಚಂದ್ರ

KannadaprabhaNewsNetwork | Published : May 1, 2024 1:16 AM

ಸಾರಾಂಶ

ಈ ಪ್ರಕೃತಿಯ ಮುನ್ಸೂಚನೆಯನ್ನು ಅರಿತು ಜಾಗ್ರತರಾಗದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ನಾವು ಕಡಿಮೆ ಇಂಗಾಲದ ಸಮಾಜ ನಿರ್ಮಾಣ, ಲಭ್ಯವಿರುವ ಜಗದಲ್ಲಿ ತೆರೆದ ಜಾಗದ ಅರಣ್ಯೀಕರಣ, ಪರಿಸರ ನಾಶವನ್ನುತಡಗಟ್ಟುವಿಕೆ ಮತ್ತು ಇದರ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರುಭೂಮಿ ಮತ್ತು ಅದರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ನಾವು ಜಾಗತಿಕ ತಾಪಮಾನ ವೈಪರೀತ್ಯ ಮತ್ತು ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ ನೋಡಿದರೆ ನಾವು ಭೂಮಿ ವಿನಾಶದ ಅಂಚಿನಲ್ಲಿದ್ದೇವೆ ಎಂದು ಅನಿಸುತ್ತದೆ ಎಂದು ಬೋಧಿ ವೃಕ್ಷ ಸೇವಾ ಸಂಸ್ಥೆ ಅಧ್ಯಕ್ಷ ಮೈಸೂರ್ ಸತೀಶ್ ಚಂದ್ರ ಹೇಳಿದರು.

ಆಳಂದ್ ಫೌಂಡೇಷನ್ ನೀಡುವ ಆದರ್ಶ ಪರಿಸರವಾದಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಮಗೆ ಇರುವುದು ಒಂದೇ ಭೂಮಿ. ಈ ಪ್ರಕೃತಿಯ ಮುನ್ಸೂಚನೆಯನ್ನು ಅರಿತು ಜಾಗ್ರತರಾಗದಿದ್ದರೆ ವಿನಾಶ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ನಾವು ಕಡಿಮೆ ಇಂಗಾಲದ ಸಮಾಜ ನಿರ್ಮಾಣ, ಲಭ್ಯವಿರುವ ಜಗದಲ್ಲಿ ತೆರೆದ ಜಾಗದ ಅರಣ್ಯೀಕರಣ, ಪರಿಸರ ನಾಶವನ್ನುತಡಗಟ್ಟುವಿಕೆ ಮತ್ತು ಇದರ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಬೋಧಿ ವೃಕ್ಷ ಸಂಸ್ಥೆಯ ಸ್ಥಾಪನೆಯ ಮಹತ್ವಕಾಂಕ್ಷಿ ಪ್ರೇರಣೆಯ ಹಿನ್ನಲೆಯನ್ನು ಅವರು ತಿಳಿಸಿದರು. ಪ್ರಸ್ತುತ ದಿನಮಾನಗಳಲ್ಲಿ ಜಾಗತಿಕ ತಾಪಮಾನ ಕೂಡ ಏರಿಕೆಯಾಗುತ್ತಿದ್ದು, ಹವಾಮಾನ ಬದಲಾವಣೆಯು ಭಾರತಕ್ಕೆ ಬಹುದೊಡ್ಡ ಸವಾಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ ಕಾರಣದಿಂದ ವಿಶ್ವವ್ಯಾಪಿ ಹಲವಾರು ದೇಶಗಳು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಅವುಗಳು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತಿವೆ ಅವುಗಳನ್ನು ಜನರು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಮಾತ್ರ ನಿರಾಸೆದಾಯಕ. ಪರಿಸರದ ಸಮಸ್ಯೆಯು ಭೀಕರ ಮತ್ತು ಜಾಗತಿಕ ಸಮಸ್ಯೆಯಾಗಿರುವುದರಿಂದ, ಅದರ ಪರಿಹಾರಕ್ಕಾಗಿ ಇಡೀ ಜಗತ್ತು ಒಗ್ಗೂಡಬೇಕಾಗಿದೆ ಎಂದರು.

ಹಾಗಾಗಿ ನಾವೆಲ್ಲರೂ ಸಂಘಟಿತ ಪ್ರಯತ್ನದಿಂದ ಮಾತ್ರ ಈ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯ. ನಾಗರಿಕರಾದ ನಾವು ಹೆಚ್ಚು ಹೆಚ್ಚು ಮರಗಳನ್ನು ನೆಡುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಶೋಷಣೆ ಕಡಿಮೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇಂದು ಪರಿಸರ ಸಂರಕ್ಷಣೆಯತ್ತ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಭೂಮಿಯ ನಾಶವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಪರಿಸರದ ಬಿಕ್ಕಟ್ಟಿಗೆ ಮಾಲಿನ್ಯ, ಜಾಗತಿಕ ತಾಪಮಾನ, ಅರಣ್ಯನಾಶ ಮುಂತಾದ ಹಲವು ಕಾರಣಗಳಿವೆ. ಹಾಗಾಗಿ ಪರಿಸರವನ್ನು ಸರಿಯಾಗಿ ಕಾಳಜಿ ವಹಿಸಿ ಮುಂದಿನ ಪೀಳಿಗೆಗೆ ಪರಿಸರವನ್ನು ಸುರಕ್ಷಿತವಾಗಿಡಬೇಕು ಎನ್ನುವ ತುಡಿತವಿತ್ತು. ಇದರೊಟ್ಟಿಗೆ ಮುಂಬೈನ ಪ್ರತಿಷ್ಠಿತ ಟಾಟಾ ಇನ್ಸ್ಟಿಟ್ಯೂಟ್ ಆಫ್ಸೋಶಿಯಲ್ ಸೈನ್ಸಸ್ ನ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಸಂಶೋಧನೆಯನ್ನು ಕೈಗೊಂಡು ಬೌದ್ಧಿಕ ಜ್ಞಾನದ ವಿಸ್ತರಿತ ಅನುಭವದಲ್ಲಿ ಕಂಡುಕೊಂಡ ಸತ್ಯಾಸತ್ಯತೆಯನ್ನು ಅವಲೋಕಿಸಿದಾಗ ಜೀವಸಂಕುಲದ ಒಳಿತಿಗೆ ಪರಿಸರ ಸಂರಕ್ಷಣೆ ಮತ್ತು ಸಾವಯವ ಕೃಷಿಯ ಮರುಹುಟ್ಟು ಅವಶ್ಯ ಎಂಬ ಎರಡು ಮಹತ್ವದ ಅಂಶಗಳನ್ನು ಮನಗಂಡು, ಪರಿಸರದಿಂದ ಮಾನವನೇ ವಿನಃ ಮಾನವನಿಂದ ಪರಿಸರವಲ್ಲ ಎಂಬ ನೈಜ ಸತ್ಯವನ್ನುಅರಿತು ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ಸಮಾನ ಮನಸ್ಕರರೊಂದಿಗೆ ಸೇರಿ ಪ್ರಕೃತಿಯೊಂದಿಗೆ ಸಂವೃದ್ಧಿ ಎಂಬ ಧ್ಯೇಯವಾಕ್ಯದೊಂದಿಗೆ ಬೋಧಿ ವೃಕ್ಷ ಸೇವಾ ಸಂಸ್ಥೆಯನ್ನು ಆರಂಭಿಸಿದೆವು ಎಂದರು.

ಈ ಸೇವೆಯನ್ನು ಮನಗಂಡು ಕಲಬುರ್ಗಿಯ ಆಳಂದ್ ಫೌಂಡೇಷನ್ 2024ನೇ ಸಾಲಿನ ಆದರ್ಶ ಪರಿಸರವಾದಿ ಪ್ರಶಸ್ತಿಯನ್ನು ಬೋಧಿ ವೃಕ್ಷ ಸಂಸ್ಥೆಗೆ ನೀಡಿ ಗೌರವಿಸಿರುವುದು ನಮಗೆ ಹೆಮ್ಮೆ ತಂದಿದೆ. ಇದು ನಮ್ಮ ಮುಂದಿನ ಯೋಜನೆಗೆ ಸ್ಫೂರ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು.

Share this article