ಕನ್ನಡಪ್ರಭ ವಾರ್ತೆ ಮಣಿಪಾಲಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಹೊರಗುತ್ತಿಗೆ ನೌಕರರ ಸಂಘದ ಸೂಚನೆಯಂತೆ, ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಗೆ ಆಗ್ರಹಿಸಿ, ಉಡುಪಿ ಜಿಲ್ಲಾ ಸಂಘದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಸತ್ಯಾಗ್ರಹ ನಡೆಸಲಾಯಿತು. ಪೌರಕಾರ್ಮಿಕರು ರಾಜ್ಯಾದ್ಯಂತ ಸ್ವಚ್ಛತೆ, ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.15ರಂದು ನಮ್ಮ ನಡೆ ಮುಖ್ಯಮಂತ್ರಿ ಮನೆ ಕಡೆ ಎಂಬ ಘೋಷಣೆಯೊಂದಿಗೆ ಸಾವಿರಾರು ಕಾರ್ಮಿಕರು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಸತ್ಯಾಗ್ರಹ ನಿರತ ಕಾರ್ಮಿಕರು ತಿಳಿಸಿದರು.ಎಲ್ಲ ಹೊರಗುತ್ತಿಗೆ ನೌಕಕರನ್ನು ನೇರಪಾವತಿಯಡಿ ತರಬೇಕು, ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಂದು ಅಗತ್ಯಕ್ಕನುಗುಣವಾಗಿ ಪೌರ ಚಾಲಕ ಹುದ್ದೆಗಳನ್ನು ಸೃಷ್ಟಿಸಬೇಕು. ಬಾಕಿ ಇರುವ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿಗೊಳಿಸಬೇಕು. ಸಂಕಷ್ಟ ಭತ್ಯೆಯನ್ನು ಪೌರಕಾರ್ಮಿಕರಿಗೂ ವಿಸ್ತರಿಸಬೇಕು, ಈ ನಾಲ್ಕೂ ಬೇಡಿಕೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಸತ್ಯಾಗ್ರಹಿಗಳು ಆಗ್ರಹಿಸಿದರು.
ನೇರಪಾವತಿಯಿಂದ ಸರ್ಕಾರಕ್ಕೆ ಜಿಎಸ್‌ಟಿ ಉಳಿತಾಯವಾಗುತ್ತದೆ, ಜೊತೆಗೆ ಈ ಕಾರ್ಮಿಕರಿಗೆ ಹೊರಗುತ್ತಿಗೆ ಏಜೆನ್ಸಿಗಳ ಕಿರುಕುಳ ತಪ್ಪಿ, ಸೇವಾಭದ್ರತೆಯೂ ದೊರಕುತ್ತದೆ. 2022ರಲ್ಲಿ ಅಂದಿನ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೌರಕಾರ್ಮಿಕರನ್ನು ನೇರಪಾವತಿಗೊಳಪಡಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಹಿರಿಯ ಅಧಿಕಾರಿಗಳ ತಾರತಮ್ಯ ನೀತಿಯಿಂದ ಈ ನಿರ್ಧಾರ ಅನುಷ್ಠಾನಗೊಂಡಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.ಸಂಘ ಅಧ್ಯಕ್ಷ ವಿನಯ್ ಕುಮಾರ್ ಮಾರ್ಪಳ್ಳಿ, ಮುಖಂಡರಾದ ಪ್ರಭಾಕರ್ ಕುಂದಾಪುರ, ಗಿರೀಶ್ ಬೈಂದೂರು, ನಿತೇಶ್ ಕಾಪು, ಉದಯಕುಮಾರ್ ಕಾರ್ಕಳ, ವಿಕ್ಟರ್ ಸಾಲಿಗ್ರಾಮ, ನಿರಂಜನ್, ಪ್ರಕಾಶ್, ಜಾನ್ ಪ್ರಕಾಶ್ ರವೀಂದ್ರ, ಸಂದೀಪ್, ಸುದೀಪ್ ಮುಂತಾದವರು ಸತ್ಯಾಗ್ರಹದ ನೇತೃತ್ವ ವಹಿಸಿದ್ದರು.