ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಯಾವುದೇ ಜನಾಂಗದ ಹೆಗ್ಗುರುತು ಆಗಿರುವ ಹಬ್ಬ ಹರಿದಿನಗಳ ಆಚರಣೆಯೂ ಮಹತ್ವಪೂರ್ಣವಾದದು. ಇದನ್ನು ನಾವು ನಮ್ಮ ಮಕ್ಕಳಿಗೆ ಪರಿಚಯಿಸಬೇಕು. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಕಲೆ, ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ಮತ್ತು ತುಳುನಾಡು ಬಿಲ್ಲವ ಮಹಿಳಾ ಸಂಘದ ಆಶ್ರಯದಲ್ಲಿ ಭಾನುವಾರದಂದು ಇಲ್ಲಿನ ಜಾನಕಿ ಕನ್ವೆನ್ಶನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ೯ನೇ ವರ್ಷದ ಆಟಿ ಸಂಭ್ರಮೋತ್ಸವ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ಮಲಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ .ವಿಜಯ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು ಮಾನವ ಕುಲವೆಲ್ಲ ಒಂದೇ ಎಂದು ಸಾಧಿಸಿ ತೋರಿಸಿದವರು. ಶಿಕ್ಷಣ ಪಡೆದು ಸ್ವತಂತ್ರರಾಗಿರಿ, ಸಂಘಟನೆಯಿಸುಂದ ಪ್ರಗತಿ ಹೊಂದಿರಿ ಎಂದು ಅಂದಿನ ಕಾಲದಲ್ಲಿ ಗುರುಗಳು ಹೇಳಿದ ಮಾತು ಇಂದು ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅಸಮಾನತೆ, ಅಸ್ಪೃಶ್ಯತೆ, ಶೋಷಣೆಗಳಿಗೆ ಚಿಕಿತ್ಸಕರಾಗಿ ತನ್ನ ಬದುಕನ್ನೇ ಸಮರ್ಪಿಸಿದ ಸಂತ,ಸುಧಾರಕ ನಾರಾಯಣ ಗುರುಗಳ ಆದರ್ಶ, ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಬಿ.ಆರ್. ಚಂದ್ರಹಾಸ್ ಅಧ್ಯಕ್ಷತೆ ವಹಿಸಿದ್ದರು. ತುಳುನಾಡು ಸಿರಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಬೇಬಿ ಚಂದ್ರಹಾಸ್, ಉದ್ಯಮಿ ಬಿ.ಎಸ್. ಸುಂದರ್, ಬಿಲ್ಲವ ಸೇವಾ ಸಂಘದ ಮಡಿಕೇರಿ ಘಟಕದ ಅಧ್ಯಕ್ಷರಾದ ಲೀಲಾವತಿ,ವೀರಾಜಪೇಟೆ ಘಟಕದ ಗಣೇಶ್,ಕುಶಾಲನಗರ ಘಟಕದ ಸುಧೀರ್,ಸುಂಟಿಕೊಪ್ಪ ಹೋಬಳಿಯ ಮಣಿ ಮುಖೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮುಳ್ಳೂರು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್,ಭಾರತ ಕಿರಿಯರ ಹಾಕಿ ತಂಡದ ತರಬೇತುದಾರ ಸಿ.ಬಿ.ಜನಾರ್ಧನ್,ಬಿಲ್ಲವ ಜನಾಂಗದ ಕಲೆ,ಸಂಸ್ಕೃತಿ,ಇತಿಹಾಸ ಕುರಿತು ಸಂಶೋಧನಾ ಪ್ರಭಂಧ ಮಂಡಿಸಿರುವ ಉಪನ್ಯಾಸಕಿ ಹರ್ಷಿತಾ ಬಿ.ಎಲ್,ರಾಷ್ಟಿಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿರುವ ಬಾಲಪ್ರತಿಭೆ ಹರ್ಷಲ್ ಬಿ.ಕೆ.ಅವರನ್ನು ಸನ್ಮಾನಿಸಲಾಯಿತು.ಸಮುದಾಯದ ಎಲ್ಲಾ ವಿದ್ಯಾರ್ಥಿಗಳು,ಪುರುಷರು ಮತ್ತು ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ವಿವಿಧ ಕ್ರೀಡಾಸ್ಫರ್ಧೆಗಳು ಮತ್ತು ಸಾಂಸ್ಕೃತಿಕ ಸ್ಫರ್ಧೆಗಳ ಪೈಪೋಟಿಯನ್ನು ಏರ್ಪಡಿಸಲಾಗಿತ್ತು.ಅತೀ ಹೆಚ್ಚು ಅಂಕ ಪಡೆದ ಸಮುದಾಯದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು. ಸಮಾಜದ ಗೌರವ ಸಲಹೆಗಾರರಾದ ಬಿ.ಎ.ಭಾಸ್ಕರ್ ಮತ್ತು ಪ್ರಧಾನ ಕಾರ್ಯದರ್ಶಿ ಇಂದಿರಾ ಮೋಣಪ್ಪ ನಿರ್ವಹಿಸಿದರು.