ಕನ್ನಡಪ್ರಭ ವಾರ್ತೆ ತುಮಕೂರು
ಸರ್ಕಾರಿ ಶಾಲೆಗಳು ಉಳಿದರೆ ಕನ್ನಡ ಉಳಿಯುತ್ತದೆ. ನಾವೆಲ್ಲರೂ ಸೇರಿ ಕನ್ನಡ ಶಾಲೆಗಳ ಗುಣಮಟ್ಟವನ್ನು ಎತ್ತರಿಸುವ ಕೆಲಸ ಮಾಡಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಆಗ್ರಹಿಸಿದರು.ತುಮಕೂರು ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಸಮೃದ್ಧ ಪರಂಪರೆಯನ್ನು, ಪ್ರಸಿದ್ಧ ವ್ಯಕ್ತಿಗಳನ್ನು ಉಲ್ಲೇಖಿಸಿ ತಮ್ಮ ಕ್ಷೇತ್ರದಲ್ಲಿಯ 15 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ತಾವೇ ಸ್ವತಃ ಅಭಿವೃದ್ಧಿ ಪಡಿಸಿದ್ದುದನ್ನು ಉದಾಹರಿಸಿದರು.
ಸರ್ಕಾರಿ ಶಾಲೆಗಳು ಯಾವ ಇಂಗ್ಲಿಷ್ ಮಾಧ್ಯಮ ಶಾಲೆಗೂ ಕಡಿಮೆಯಿಲ್ಲ. ಒಬ್ಬ ಶಾಸಕನಾಗಿ ನನಗೆ ಅತಿ ಹೆಚ್ಚಿನ ಸಮಾಧಾನ ಮತ್ತು ಸಂತೃಪ್ತಿ ಕೊಟ್ಟ ಕೆಲಸ ಅದು. ಇದೇ ರೀತಿ ಎಲ್ಲ ಶಾಸಕರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿನ 10-15 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು, ಸಾರ್ವಜನಿಕರ ಮತ್ತು ಖಾಸಗಿ ಕಂಪೆನಿಗಳ ನೆರವಿನಿಂದ ಅಭಿವೃದ್ಧಿಪಡಿಸಿದರೆ ನಮ್ಮ ಮಕ್ಕಳು ದುಬಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗಬೇಕಾಗಿಲ್ಲʼ ಎಂದು ಅವರು ತಿಳಿಸಿದರು.ʻನನ್ನ ಕ್ಷೇತ್ರದ ಸಾರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಲು ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ಇಂಗ್ಲಿಷ್ ಭಾಷೆಯ ಅಗತ್ಯವನ್ನು ನಾನು ಮನಗಂಡಿದ್ದೇನೆʼ ಎಂದು ಅವರು ಹೇಳಿದರು.
ʻಹಿಂದಿನ ಅವಧಿಯಲ್ಲಿ ನಾನು ಅಧಿಕಾರದಲ್ಲಿ ಇರಲಿಲ್ಲ. ಹೀಗಾಗಿ ಒಂದಿಷ್ಟು ಅರೆಕೊರೆಗಳು ಬಂದಿರಬಹುದು. ಮತ್ತೆ ಅವುಗಳನ್ನು ಮೊದಲಿನ ಮಟ್ಟಕ್ಕೇ ತರಲು ನಾನು ಕಂಕಣಬದ್ಧನಾಗಿದ್ದೇನೆ. ಇದನ್ನು ನನ್ನ ಆದ್ಯ ಕರ್ತವ್ಯ ಎಂದು ಮಾಡುತ್ತಿರುವೆ. ನಮ್ಮ ನಾಡಿನ ಭಾಷೆಗೆ, ನಮ್ಮ ಜಿಲ್ಲೆಯ ಪುಣ್ಯ ಪುರುಷರಿಗೆ ಸಲ್ಲಿಸುವ ಪ್ರಾಮಾಣಿಕ ಋಣಸಂದಾಯವಿದು. ಇದರಲ್ಲಿ ನನ್ನ ಸ್ವಾರ್ಥವೇನೂ ಇಲ್ಲ. ನಮ್ಮ ಬಡ ಮತ್ತು ದುರ್ಬಲರ ಮಕ್ಕಳು ಶ್ರೀಮಂತರ ಮಕ್ಕಳ ಹಾಗೆಯೇ ಉತ್ತಮ ಪರಿಸರದಲ್ಲಿ ಶಿಕ್ಷಣ ಪಡೆಯಬೇಕು. ಇದನ್ನು ಈ ವೇದಿಕೆ ಮೇಲೆ ಅಲ್ಲದೇ ಇನ್ನು ಎಲ್ಲಿ ಹೇಳಿಕೊಳ್ಳಲಿʼ ಎಂದು ಅವರು ಕೇಳಿದರು.ʻನಮ್ಮ ಭಾಷೆ ಉಳಿದರೆ ನಾವು ಉಳಿಯುತ್ತೇವೆ. ನಾವು ಆಡುವ ಭಾಷೆಯಲ್ಲಿ ನಮ್ಮ ಜೀವನ, ನಮ್ಮ ಸಂಸ್ಕೃತಿ, ನಮ್ಮ ಆಚರಣೆಗಳು ಎಲ್ಲವೂ ಇರುತ್ತವೆ. ಇಂಗ್ಲಿಷ್ ಭಾಷೆಯಲ್ಲಿ ನಮ್ಮ ಜೀವನವೂ ಇಲ್ಲ. ನಮ್ಮ ಸಂಸ್ಕೃತಿಯೂ ಇಲ್ಲ. ಅದಕ್ಕಾಗಿ ಕನ್ನಡ ಶಾಲೆಗಳು ಉಳಿಯಬೇಕುʼ ಎಂದು ಸುರೇಶ್ ಗೌಡ ನುಡಿದರು.
ʻಕನ್ನಡ ಮಾತು ತಲೆಯೆತ್ತುವ ಬಗೆʼ ಎಂದು ನಮ್ಮ ಜಿಲ್ಲೆಯವರೇ ಆದ ಬಿ.ಎಂ. ಶ್ರೀಕಂಠಯ್ಯನವರು ಮಾಡಿದ ಪ್ರಸಿದ್ಧ ಭಾಷಣ ನಮಗೆಲ್ಲ ಗೊತ್ತಿದೆ. 1911ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅವರು ಮಾಡಿದ ಭಾಷಣವಿದು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳ ನಡುವಿನ ಭೇದಭಾವವನ್ನು ಹೋಗಲಾಡಿಸಲು ಬಿ.ಎಂ.ಶ್ರೀಯವರು ಆಗಲೇ ಪ್ರಯತ್ನ ಮಾಡಿದರು. ಆದರೆ, ಆ ಭೇದಭಾವ ಇದುವರೆಗೂ ಅಳಿಸಿ ಹೋಗಿಲ್ಲ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ನಾವು ಉತ್ತರ ಕರ್ನಾಟಕದ ಬೇಡಿಕೆಗಳ ಬಗ್ಗೆ ಮತ್ತೆ ಚರ್ಚಿಸಿದ್ದೇವೆ ಎಂದು ಅವರು ಸ್ಮರಿಸಿದರು.ʻಕೇವಲ ಭಾಷೆ ಮಾತ್ರ ಉಳಿದರೆ ಸಾಲದು. ನಾಡೂ ಉಳಿಯಬೇಕು. ಭಾಷೆಯ ಜತೆಗೆ ನಾಡಿನ ಜನರ ಜೀವನವೂ ಸಮೃದ್ಧವಾಗಬೇಕು. ಎಲ್ಲ ಜನರೂ ಸುಖ ಮತ್ತು ನೆಮ್ಮದಿಯಿಂದ ಬದುಕುವಂತೆ ಆಗಬೇಕು. ಕನ್ನಡ ತಲೆಯೆತ್ತುವ ಬಗೆಯ ಜತೆಗೆ ಕನ್ನಡ ನಾಡು ತಲೆ ಎತ್ತುವ ಬಗೆ ಕುರಿತು ಇಂಥ ಸಮ್ಮೇಳನಗಳಲ್ಲಿ ಚರ್ಚೆ ನಡೆಯಬೇಕುʼ ಎಂದು ಸುರೇಶ್ ಗೌಡ ಕರೆ ಕೊಟ್ಟರು.