ಕನ್ನಡಪ್ರಭ ವಾರ್ತೆ ಚಿಂತಾಮಣಿ
ಪುರಾಣಗಳ ಪ್ರಕಾರ ಸವಿತಾ ಮಹರ್ಷಿ ದೇವ ದೇವತೆಗಳ ಆಯುಷ್ಕರ್ಮ ಸೇವೆಯನ್ನು ಮಾಡುತ್ತಿದ್ದರೆಂದೂ. ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿರುವುದರಿಂದಲೇ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದಿದ್ದಾರೆಂದು ಉಪ ತಹಸೀಲ್ದಾರ್ ಆರ್. ರಾಜೇಂದ್ರ ಅಭಿಪ್ರಾಯಪಟ್ಟರು.ನಗರದ ತಾಪಂ ಸಭಾಂಗಣದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿಯಲ್ಲಿ ಮಾತನಾಡಿ, ಈ ಜನಾಂಗಕ್ಕೆ ವಾದ್ಯ ನುಡಿಸುವುದು ಉಪಕಸುಬಾಗಿ ಬಂದಿದೆ. ಪ್ರತಿಯೊಂದು ಸಮಾಜವು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದಿಂದ ಸ್ವಾವಲಂಬನೆಯ ಬದುಕಿನೊಂದಿಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಿದೆ. ಕುಲ ಕಸುಬುಗಳು ಅವರವರ ಬದುಕಿಗೆ ಹೊರತು ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಶೋಷಣೆ ಮಾಡುವುದಲ್ಲ. ಪ್ರತಿಯೊಬ್ಬನಲ್ಲಿಯೂ ತಾನು ಮಾಡುವ ಕಸುಬಿನ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಮುನ್ನಡೆಯಲು ಸಾಧ್ಯವಿದೆಯೆಂದರು.
ಶಿಕ್ಷಣ ಇಲಾಖೆಯ ಸಿ.ಆರ್.ಪಿ ಕೆ.ಬಾಲಾಜಿ ಮಾತನಾಡಿ, ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿರುವುದರಿಂದಲೇ ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಬರೆದ್ದಾರೆ. ಸವಿತಾ ಮಹರ್ಷಿಯ ಪುತ್ರಿಯಾಗಿರುವ ಗಾಯತ್ರಿದೇವಿಯ ಮಂತ್ರಗಳಲ್ಲಿ ಸವಿತೃ ಎಂಬ ಪದವು ಸ್ಪಷ್ಟವಾಗಿ ಕಾಣುತ್ತಿದೆ, ಪ್ರತಿಯೊಂದು ಸಮುದಾಯವನ್ನು ಗೌರವಿಸಿ, ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವಲ್ಲಿ ರಾಜ್ಯ ಸರಕಾರವು ಜಯಂತಿಗಳನ್ನು ಆಚರಿಸುವ ಸತ್ಕಾರ್ಯ ನಡೆಸಿದೆ.ಪುರಾಣದ ಪ್ರಕಾರ ಶಿವನು ಅತಿಯಾಗಿ ಬೆಳೆದ ಕೂದಲುಗಳಿಂದ ತೊಂದರೆ ಅನುಭವಿಸುತ್ತಿದ್ದಾಗ ಪಾರ್ವತಿ ದೇವಿಯ ಸಲಹೆಯಂತೆ ತನ್ನ ಎಡಗಣ್ಣಿನಿಂದ ಕ್ಷೌರಿಕರ ಮೂಲಪುರುಷರಾದ ಸವಿತಾ ಮಹರ್ಷಿಯನ್ನು ಸೃಷ್ಟಿ ಮಾಡಿದರೆಂದು ಸವಿತಾ ಮಹರ್ಷಿಯು ಶಿವನಿಗೆ ಆಯುಷ್ಕರ್ಮವನ್ನು ಪೂರೈಸಿದರೆಂದು. ನಂತರ ಇತರೆ ದೇವರಿಗೂ ಸೇವೆ ಮಾಡಿದರೆಂದು ತಿಳಿಯುತ್ತದೆ. ಶಿವನ ನಯನದಿಂದ ಜನಿಸಿದ್ದರಿಂದ ಈ ಜನಾಂಗವನ್ನು ನಾಯಿಂದ, ನಯನಜ ಕ್ಷತ್ರೀಯ, ನಾಪಿತ, ನಾವೀಕ್ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಮಹರ್ಷಿಯ ಸೇವೆಯಿಂದ ತೃಪ್ತನಾದ ಶಿವನು ಸಂಗೀತ ಸಾಧನಗಳನ್ನು ನೀಡಿದ್ದನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದರು.
ನಗರಸಭೆಯ ಅಧ್ಯಕ್ಷ ಜಗನ್ನಾಥ್, ಬಿಇಒ ಉಮಾದೇವಿ, ಸವಿತಾ ಸಂಘದ ತಾಲೂಕು ಅಧ್ಯಕ್ಷ ಬಿ.ಶ್ರೀನಿವಾಸ್, ಗೌರವಾಧ್ಯಕ್ಷ ಎನ್.ವೆಂಕಟೇಶಪ್ಪ, ಪತ್ರಕರ್ತ ಆರ್.ಸುರೇಶ್, ಸಮಾಜ ಸೇವಕ ಬಿ.ಎಂ.ಶಬರೀಶ್, ಕಸಾಪ ಅಧ್ಯಕ್ಷ ಶ್ರೀನಿವಾಸನ್, ಮುಖಂಡ ಉಮೇಶ್, ವಿ.ಮುನಿಸ್ವಾಮಿ, ಬಿ.ಎಂ.ಮಂಜುನಾಥ್, ಸಿ.ಎಸ್.ಅಶ್ವಥ್, ಬಿ.ಕೆ.ನಾರಾಯಣಸ್ವಾಮಿ, ಕರವೇ ಆರ್. ನಾಗರಾಜ್ ಉಪಸ್ಥಿತರಿದ್ದರು.