ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳೆಯರು ಇಂದು ಶೈಕ್ಷಣಿಕವಾಗಿ ಮುಂದೆ ಬಂದಿದ್ದಾರೆ. ಅವರ ಜೀವನ ಮಟ್ಟ ಸುಧಾರಿಸಿದ್ದರೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್, ಮಾತೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಅಪಾರ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಬಿ.ಗೋಪಾಲ್ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ 193ನೇ ಜನ್ಮದಿನ ನಿಮಿತ್ತ 2024ನೇ ಸಾಲಿನ ರಾಜ್ಯಮಟ್ಟದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ನಾಟಕ ಉದ್ಘಾಟಿಸಿ ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಅವರು ಅಂದಿನ ದಿನಮಾನದಲ್ಲಿ ಮೆಲ್ಜಾತಿಯವರ ತುಳಿತದ ವಿರುದ್ಧ ಹಾಗೂ ಹೆಣ್ಣುಮಕ್ಕಳು ಶೊಷಿತ ಸಮುದಾಯ ಶಿಕ್ಷಣ ಪಡೆಯಬಾರದು ಅದು ಅಪರಾದ ಎನ್ನುವ ಕಾಲದಲ್ಲಿ ತಾವು ಶಿಕ್ಷಣ ಪಡೆಯುವುದರ ಜೊತೆಗೆ ಎಲ್ಲಾ ಜಾತಿ ಜನಾಂಗದ ಮಹಿಳೆಯರೂ ಶಿಕ್ಷಣ ಪಡೆಯಬೇಕು ಎಂದು ಹೋರಾಟ ಪ್ರಾರಂಭಿಸಿ ಅನೇಕ ಅಸೂಹೆ ನೋವುಗಳನ್ನು ಅನುಭವಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಮಹಾನ್ ಮಾತೆ. ಮಹಾನ್ ವ್ಯಕ್ತಿತ್ವವನ್ನು ಜಗತ್ತಿಗೆ ಗುರುತಿಸುವಂತಹ ಕೆಲಸವನ್ನು ದಲಿತ ವಿದ್ಯಾರ್ಥಿ ಪರಿಷತ್ ಮಾಡುತ್ತಿರುವುದು ಹಮ್ಮೆಯ ವಿಷಯ ಎಂದರು.ಡಿಸಿಸಿ ಬ್ಯಾಂಕಿನ ನಿರ್ದೇಶಕಿ ಸಂಯುಕ್ತಾ ಪಾಟೀಲ ಮಾತನಾಡಿ, ಚಿತ್ರರಂಗದ ನಾಯಕ ನಾಯಕಿಯರಿಗಿಂತ ಅತ್ಯಂತ ಪ್ರಭಾವಿ ಮಹಿಳೆ ಸಾವಿತ್ರಿಬಾಯಿ ಫುಲೆ, ಅಂತಹ ಮಹಾನ ಮಹಿಳೆಗೆ ಆಗಿನ ಕಾಲದಲ್ಲಿ ದಲಿತ ಕುಟುಂಬದಲ್ಲಿ ಹುಟ್ಟಿ ಸಮಾಜದ ಅಸಮಾನತೆ ಹಾಗೂ ಶಿಕ್ಷಣ ಕೇವಲ ಮೇಲ್ಜಾತಿಯರಿಗೆ ಸೀಮಿತ ಎನ್ನುವ ಕಾಲಘಟ್ಟದಲ್ಲಿ ತನ್ನ ಪತಿ ಜ್ಯೋತಿಬಾ ಫುಲೆ ಅವರ ಸಂಪೂರ್ಣ ಬೆಂಬಲದಿಂದ ಶಿಕ್ಷಣ ಪಡೆದು ಎಲ್ಲರೂ ಶಿಕ್ಷಣ ಪಡೆಯುವಂತಾಗಲಿ ಎಂದು ಹೋರಾಟ ಮಾಡಿದ ಮಹಾನ ಮಹಿಳೆ ಸಾವಿತ್ರಿಬಾಯಿ ಫುಲೆ ಅವರ ಜೀವನದ ಸಾಧನೆ ಕುರಿತು ನಾವೆಲ್ಲರೂ ಸೇರಿ ಅರಿತು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ಇದೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಶ್ರಿನಾಥ ಪೂಜಾರಿ ಮಾತನಾಡಿದರು. ಸಾನ್ನಿಧ್ಯ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಪಾ.ಟಿಯೋಲಾ ಮೇಚೊಡಾ ವಹಿಸಿದ್ದರು.ಹಿರಿಯ ಪತ್ರಕರ್ತ ಅನೀಲ ಹೊಸಮನಿ, ಬಲರಾಮ ನಾಯಕ, ಬಿಹಾರದ ದಲಿತ ವಿದ್ಯಾರ್ಥಿ ಪರಿಷತ್‌ನ ಹಬ್ಸಾನಾ, ರಾಜ್ಯ ಸಂಚಾಲಕ ಬಾಲಾಜಿ ಎಂ. ಕಾಂಬಳೆ ಇತರರು ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವಾರು ಸಾಧಕಿಯರಿಗೆ 2024ನೇ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.