- ಬಿಎಸ್ಪಿ ಕಚೇರಿಯಲ್ಲಿ ಸಾವಿತ್ರಿಬಾಯಿ ಪುಲೆ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಜಯಂತಿಯನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲೂ ಆಚರಿಸಬೇಕು ಎಂದು ಬಿಎಸ್‌ಪಿರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಹೇಳಿದರು.ನಗರದ ಬಿಎಸ್‌ಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಪುಲೆ ಅವರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳು ಅಡುಗೆ ಮನೆಗಷ್ಟೇ ಸೀಮಿತರಾಗಿ ಮನೆಯಿಂದ ಹೊರ ಬಾರದಂತಹ ಅಂದಿನ ಕಾಲದಲ್ಲಿ ಗಂಡನಿಂದಲೇ ಅಕ್ಷರ ಕಲಿತು ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾದವರು. ಸಾವಿತ್ರಿಬಾಯಿ ಫುಲೆ. ಅಂದಿನ ಬ್ರಿಟಿಷ್ ಸರ್ಕಾರ ಸಹ ಅವರಿಗೆ ಫಸ್ಟ್ ಲೇಡಿ ಟೀಚರ್ ಬಿರುದು ನೀಡಿ ಗೌರವಿಸಿದೆ ಎಂದರು. ತನ್ನಂತಯೇ ಉಳಿದ ಎಲ್ಲಾ ಹೆಣ್ಣು ಮಕ್ಕಳೂ ಶಿಕ್ಷಿತರಾಗಬೇಕು ಎಂದು ಸ್ವಾತಂತ್ರ್ಯ ಪೂರ್ವದಲ್ಲೇ ಮೇಲ್ವರ್ಗದವರ ಅಡೆ-ತಡೆ, ಅವರು ನೀಡಿದ ಕಿರುಕುಳ, ಕಷ್ಟಗಳನ್ನೆಲ್ಲ ಎದುರಿಸಿ 14 ಶಾಲೆಗಳನ್ನು ತೆರೆದವರು ಸಾವಿತ್ರಿಬಾಯಿ ಫುಲೆ ಎಂದು ತಿಳಿಸಿದರು. ಇಂತಹವರ ಜಯಂತಿಯನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸದಿರುವುದು, ಆ ಮೂಲಕ ಅವರನ್ನು ಸ್ಮರಿಸದಿರುವುದು ವಿಪರ್ಯಾಸ ಎಂದರು. ಇದರಿಂದಾಗಿ ಎಷ್ಟೋ ಜನರಿಗೆ ಇಂದಿನ ಮಕ್ಕಳಿಗೆ ಸಾವಿತ್ರಿ ಬಾಯಿ ಪುಲೆ ಯಾರೆಂಬುದೇ ತಿಳಿದಿಲ್ಲ ಎಂದು ವಿಷಾದಿಸಿದರು. ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಮಾತನಾಡಿ, ಜ್ಯೋತಿ ಬಾಪುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರು ಅಂದು ಧೈರ್ಯದಿಂದ ಮುನ್ನುಗ್ಗಿ ಶಾಲೆಗಳನ್ನು ತೆರೆಯದಿದ್ದರೆ. ಕೆಳ ವರ್ಗದ ಮಹಿಳೆಯರು ಇಂದಿಗೂ ಶಿಕ್ಷಣದಿಂದ ವಂಚಿತರಾಗಿಯೇ ಉಳಿಯುತ್ತಿದ್ದರು ಎಂದರು. ಇನ್ನಾದರೂ ದೇಶದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಣೆಗೆ ತರಬೇಕು ಎಂದು ಒತ್ತಾಯಿಸಿದರು. ಲೋಕಸಭಾ ಕ್ಷೇತ್ರದ ಸಂಯೋಜಕ ಕೆ.ಆರ್.ಗಂಗಾಧರ್ ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರ ಜಯಂತಿಯನ್ನು ಆಚರಣೆಗೆ ತಾರದಿರುವುದು ಈ ದೇಶದ ದುರಂತ ಎಂದರು. ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಪಕ್ಷದ ಅಸೆಂಬ್ಲಿ ಅಧ್ಯಕ್ಷ ಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್. ಮಂಜುಳಾ, ಅಸೆಂಬ್ಲಿ ಪ್ರಧಾನ ಕಾರ್ಯದರ್ಶಿ ಆರ್.ವಸಂತ್, ಈರಯ್ಯ, ಪ್ರೇಮ, ಗಿರೀಶ್, ಜಿನ್ನಪ್ಪ, ವೆಂಕಟೇಶ್, ಮಂಜುನಾಥ್ ಉಪಸ್ಥಿತರಿದ್ದರು.
3 ಕೆಸಿಕೆಎಂ 2ಚಿಕ್ಕಮಗಳೂರಿನ ಬಿಎಸ್‌ಪಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಪುಲೆ ಅವರ ಜಯಂತಿಯನ್ನು ಕೆ.ಬಿ. ಸುಧಾ ಉದ್ಘಾಟಿಸಿದರು.