ಚಿಕ್ಕಮಗಳೂರು : ರಾಜ್ಯದ ಕಾಂಗ್ರೆಸ್ ಸರ್ಕಾರ ಹಗರಣಗಳ ಬೇರಾಗಿದೆ. ದಿನೇ ದಿನೇ ದಲಿತರ ಹಣವನ್ನು ಕಬಳಿಸಿ ಉಚಿತ ಭಾಗ್ಯಗಳಿಗೆ ಹಂಚುವ ಮೂಲಕ ಎಸ್.ಸಿ., ಎಸ್.ಟಿ. ಸಮುದಾಯದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಆರೋಪಿಸಿದರು.
ದಲಿತರ 1144 ಕೋಟಿ ರು. ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಬಿಜೆಪಿ ಎಸ್ಸಿ ಮೋರ್ಚಾದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೈಕಲ್ ಜಾಥಾದ ಸಂದರ್ಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ವರ್ಷದಲ್ಲೇ ಪ.ಜಾತಿ ಮತ್ತು ಪ.ಪಂಗಡದ ಕೋಟ್ಯಂತರ ಅನುದಾನವನ್ನು ಕಬಳಿಸುತ್ತಿದೆ. ಅಲ್ಲದೇ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರು.ಗಳನ್ನು ದುರ್ಬಳಕೆ ಮಾಡಿಕೊಂಡಿರುವ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನವಿರೋಧಿ ಆಡಳಿತ ನೀಡುತ್ತಿದೆ ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದೆ. ಈ ಸಂಬಂಧ ಓರ್ವ ಸಚಿವರ ತಲೆದಂಡವಾಗಿದೆ. ಅಲ್ಲದೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೂ ಮುಖ್ಯಮಂತ್ರಿಗಳು ಮೌನ ವಹಿಸಿದ್ದಾರೆ ಎಂದು ದೂರಿದರು.
ಬಡವರು, ರೈತರು, ಶೋಷಿತರು, ದೀನದಲಿತ ಪರವಾಗಿ ಮಾದರಿ ಆಡಳಿತ ನೀಡುತ್ತೆನೆಂದು ಭರವಸೆ ಮೂಡಿಸಿ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ದಿನೇ ದಿನೇ ದಲಿತರ ಹಣ ಲೂಟಿವೆಸಗಿರುವ ಜತೆಗೆ ಪೆಟ್ರೋಲ್, ಡೀಸೆಲ್ ಹಾಗೂ ಹಾಲಿನ ದರ ಸೇರಿದಂತೆ ದಿನೋಪಯೋಗಿ ವಸ್ತುಗಳನ್ನು ಗಗನಕ್ಕೇರಿಸಿ ಜನ ಸಾಮಾನ್ಯರು ಬದುಕಲಾರದ ಸ್ಥಿತಿಗೆ ತಂದೊಡ್ಡಿದ್ದಾರೆ ಎಂದು ತಿಳಿಸಿದರು.
ಸಂವಿಧಾನ ಕಾಂಗ್ರೆಸ್ ಆಸ್ತಿ ಎಂದು ಹೇಳಿಕೊಳ್ಳುವ ಮುಖಂಡರು ಡಾ. ಬಿ.ಆರ್.ಅಂಬೇಡ್ಕರ್ ಸೋಲಿಗೆ ಹಾಗೂ ಸಂವಿಧಾನ ರಚನೆ ವೇಳೆಯಲ್ಲಿ ನೀಡಿದಂತಹ ಹಿಂಸೆ ಜನತೆ ಮರೆತಿಲ್ಲ. ಸಂವಿಧಾನ ಅಂಗೀಕಾರ ನಂತರ ಅಂಬೇಡ್ಕರ್ ಆಶಯಗಳಿಗೆ ಕೊಡಲಿಪೆಟ್ಟು ನೀಡಿದ್ದೆ ಕಾಂಗ್ರೆಸ್. ಕೊನೆ ಸಮಯದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸದೇ ಕಡೆಗಣಿಸಿದ್ದರು ಎಂದು ದೂರಿದರು.
ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಸೀತಾರಾಮಭರಣ್ಯ ಮಾತನಾಡಿ, ರಾಜ್ಯಸರ್ಕಾರ ಉಚಿತ ಭಾಗ್ಯಗಳ ಆಸೆ ಹುಟ್ಟಿಸಿ ಜನತೆ ರಕ್ತವನ್ನು ಹೀರುವ ಕೆಲಸ ಮಾಡುತ್ತಿದೆ. ದಲಿತರ ಹಣವನ್ನು ಯಥೇಚ್ಛವಾಗಿ ದುರ್ಬಳಕೆ ಮಾಡಿಕೊಂಡು ದ್ರೋಹವೆಸಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ದಲಿತರ ಶ್ರೇಯೋಭಿವೃದ್ಧಿ ಮೀಸಲಿಟ್ಟ ಕೋಟ್ಯಂತರ ಹಣವನ್ನು ರಾಜ್ಯ ಸರ್ಕಾರ ಬೇಕಾಬಿಟ್ಟಿಯಾಗಿ ಗ್ಯಾರಂಟಿಗೆ ನೀಡಿ ದಲಿತ ಸಮುದಾಯಕ್ಕೆ ದೌರ್ಜನ್ಯವೆಸಗುತ್ತಿದೆ. ಪ್ರತಿ ಬಾರಿಯೂ ಇಂತಿಷ್ಟು ಹಣ ದೋಚುತ್ತಿರುವ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮುಖಂಡ ರವೀಂದ್ರ ಬೆಳವಾಡಿ ಮಾತನಾಡಿ, ಅನಧಿಕೃತವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಹಿಂದೆ ಪೆಟ್ರೋಲ್ ಏರಿಕೆ ಸಂಬಂಧ ಪ್ರತಿಭಟಿಸಿದ ಅವರು ಇದೀಗ ರಾಜ್ಯದಲ್ಲಿ ತಮ್ಮದೇ ಸರ್ಕಾರದಲ್ಲಿ ದರ ಇಳಿಕೆಗೊಳಿಸುವ ಬದಲು ಏರಿಕೆಗೊಳಿಸಿರುವ ಕಾರಣವೇನು ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ್, ಸುಜಿತ್ ಕುಮಾರ್, ನಗರ ಎಸ್.ಸಿ. ಮೋರ್ಚಾ ಅಧ್ಯಕ್ಷ ಜಗದೀಶ್, ಗ್ರಾಮಾಂತರ ಮೋರ್ಚಾ ಅಧ್ಯಕ್ಷ ಪ್ರದೀಪ್ ನಾಯ್ಕ್, ಹಂಪಯ್ಯ, ಮಾಧ್ಯಮ ಪ್ರಮುಖ್ ಕೇಶವಮೂರ್ತಿ, ನಗರ ಮಂಡಲ ಉಪಾಧ್ಯಕ್ಷ ರೇವನಾಥ್, ಮುಖಂಡರಾದ ಕೋಟೆ ರಂಗನಾಥ್, ಮಧುಕುಮಾರ್ ರಾಜ್ ಅರಸ್, ಬಿ.ರಾಜಪ್ಪ, ಕೆ.ಎಸ್.ಪುಷ್ಪರಾಜ್, ಓಂಕಾರೇಗೌಡ, ಕೃಷ್ಣಮೂರ್ತಿ, ಮಂಜುನಾಥ್, ಅನ್ವರ್ ಹಾಗೂ ಕಾರ್ಯಕರ್ತರು ಇದ್ದರು.