ಆಹಾರ ಪರವಾನಗಿ, ತರಬೇತಿ ಹೆಸರಿನಲ್ಲಿ ಮೋಸದ ಜಾಲ?

KannadaprabhaNewsNetwork | Published : Dec 7, 2023 1:15 AM

ಸಾರಾಂಶ

ಆಹಾರ ಸುರಕ್ಷತಾ ಲೈಸೆನ್ಸ್ ಪಡೆಯಬೇಕೆಂದು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಶೋಷಣೆ ಮಾಡುವ ಜಾಲ ನಗರದಲ್ಲಿ ಹುಟ್ಟಿಕೊಂಡಿದ್ದು ವ್ಯಾಪಾರಿಗಳಿಗೆ ತಲೆನೋವಾಗಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ನಗರದ ಮಾಳಾಪುರ, ಕೊಪ್ಪದಕೇರಿ, ಸಪ್ತಾಪುರ, ಹೆಬ್ಬಳ್ಳಿ ಅಗಸಿ, ಮುರುಘಾಮಠ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸರ್ಕಾರದ ಸಂಸ್ಥೆಯ ಪ್ರತಿನಿಧಿಗಳೆಂದು ಹೇಳಿಕೊಂಡು ಗುರುತಿನ ಪತ್ರ ತೋರಿಸಿ ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು ಎಂದು ಹೇಳಿ ಹಣ ಲಪಟಾಯಿಸುತ್ತಿರುವ ಜಾಲವೊಂದು ಸಕ್ರೀಯವಾಗಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಆಹಾರ ಸುರಕ್ಷತಾ ಲೈಸೆನ್ಸ್ ಪಡೆಯಬೇಕೆಂದು ಸಣ್ಣ ಪುಟ್ಟ ಹೊಟೇಲ್, ಬೇಕರಿ, ಧಾಬಾ, ಕಿರಾಣಿ ಅಂಗಡಿ, ಚಿಕನ್ ಶಾಪ್, ಹಾಲಿನ ಡೇರಿ, ಗಿರಣಿ, ಕೋಲ್ಡ್ ಡ್ರಿಂಕ್ಸ್, ಪಾನ್‍ಶಾಪ್ ಸೇರಿದಂತೆ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಶೋಷಣೆ ಮಾಡುವ ಜಾಲ ನಗರದಲ್ಲಿ ಹುಟ್ಟಿಕೊಂಡಿದ್ದು ವ್ಯಾಪಾರಿಗಳಿಗೆ ತಲೆನೋವಾಗಿದೆ.

ನಮ್ಮನ್ನು ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಇಲಾಖೆ ಕಳುಹಿಸಿದೆ. ಕೇಂದ್ರ ಸರ್ಕಾರದ ನೂತನ ಆಹಾರ ಸುರಕ್ಷತಾ ಕಾಯ್ದೆಯನ್ವಯ ಲೈಸೆನ್ಸ್ ಪಡೆಯುವುದು ಕಡ್ಡಾಯ. ಅದನ್ನು ಕಿರಾಣಿ ಅಂಗಡಿ, ಬೇಕರಿ, ಪಾನ್‍ಶಾಪ್‍ನವರು ಕೂಡ ಪಡೆಯಬೇಕೆಂಬ ಒತ್ತಡ ಹೇರಿ ₹3 ರಿಂದ ₹5 ಸಾವಿರ ವರೆಗೆ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಲೈಸೆನ್ಸ್ ಪಡೆಯದಿದ್ದರೆ ಇಲಾಖೆ ವತಿಯಿಂದ ಅನಿರೀಕ್ಷಿತ ದಾಳಿ ನಡೆಸುವುದಾಗಿ ಭಯಪಡಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸುತ್ತಾರೆ.

ಲೈಸೆನ್ಸ್ ನೀಡಲು ಹಣ ಪಡೆಯುವ ಜವಾಬ್ದಾರಿಯನ್ನು ಸಂಸ್ಥೆಗೆ ನೀಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಈಗಾಗಲೇ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದಿಂದ ಲೈಸೆನ್ಸ್ ಪಡೆದಿದ್ದರೂ ಸಂಸ್ಥೆಯ ಪ್ರತಿನಿಧಿಗಳು ಮಾಹಿತಿ ಪತ್ರದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಪತ್ರಗಳ ಪ್ರತಿಗಳಿರುವುದರಿಂದ ಇದು ಅಸಲಿಯೋ ನಕಲಿಯೋ ವ್ಯಾಪಾರಿಗಳು ಗೊಂದಲಕ್ಕೀಡಾಗುತ್ತಿದ್ದಾರೆ. ವಿಚಿತ್ರವೆಂದರೆ ಲೈಸೆನ್ಸ್ ನೀಡುವ ಕಾರ್ಯವನ್ನು ಖಾಸಗಿ ಸಂಸ್ಥೆಗೆ ವಹಿಸಿದ ಬಗ್ಗೆ ಸರ್ಕಾರದ ಆಹಾರ ಇಲಾಖೆಗೂ ಸ್ಪಷ್ಟತೆಯಿಲ್ಲ. ಅಧಿಕಾರಿಗಳ ಸಹಿ ಇರುವ ಪತ್ರದ ಪ್ರತಿಯನ್ನು ಮಾಹಿತಿ ಪತ್ರದಲ್ಲಿ ಮುದ್ರಿಸಿರುವುದು ನಿಯಮದ ಪ್ರಕಾರ ಉಲ್ಲಂಘನೆ. ಪ್ರತಿನಿಧಿಗಳು ನೀಡುವ ಮಾಹಿತಿ ಪತ್ರದಲ್ಲಿ "ಹುಬ್ಬಳ್ಳಿ ಜಿಲ್ಲೆ'''''''' ಹಾಗೂ "ಜಿಲ್ಲಾಡಳಿತ ಹುಬ್ಬಳ್ಳಿ'''''''' ಎಂದು ಪ್ರಕಟಿಸಿರುವುದು ವ್ಯಾಪಾರಿಗಳನ್ನು ಗೊಂದಲಕ್ಕೀಡು ಮಾಡಿದೆ.

ಖೊಟ್ಟಿ ಪತ್ರಕರ್ತರು, ಸಂಘಟನೆಗಳು ಶಾಮೀಲು

ಈ ಜಾಲದಲ್ಲಿ ಖೊಟ್ಟಿ ಪತ್ರಕರ್ತರು ಹಾಗೂ ಸಂಘಟನೆಗಳು ಶಾಮೀಲಾಗಿದ್ದು, ಹೊಟೇಲ್‍ನವರು ಹಾಗೂ ಬೇಕರಿಯವರು ಲೈಸನ್ಸ್‌ಗೆ ಹಣ ನೀಡದಿದ್ದರೆ ಖೊಟ್ಟಿ ಪತ್ರಕರ್ತರು ಹಾಗೂ ಸಂಘಟನೆಗಳ ಸದಸ್ಯರೆಂದು ಹೇಳಿಕೊಳ್ಳುವವರು ಧಮಕಿ ಹಾಕಿಸಿ ಹಣ ತುಂಬುವಂತೆ ಒತ್ತಡ ಹೇರುತ್ತಿದ್ದಾರೆ. ಪ್ರಶ್ನೆಗಳನ್ನು ಕೇಳುವ ಹೊಟೇಲ್‍ನವರಿಗೆ ನಿಮ್ಮ ಹೊಟೇಲ್‍ನಲ್ಲಿ ಗುಣಮಟ್ಟ ಸರಿಯಿಲ್ಲ, ಕೆಲಸಗಾರರಿಗೆ ಸುರಕ್ಷತೆಯಿಲ್ಲ ಎಂಬುದನ್ನು ಪತ್ರಿಕೆಯಲ್ಲಿ ಬರೆಯಲಾಗುವುದು ಎಂದು ಕೂಡ ಧಮಕಿ ಹಾಕುತ್ತಾರೆ ಎಂಬುದು ವ್ಯಾಪಾರಸ್ಥರ ಆರೋಪವಾಗಿದೆ.

ಕನಿಷ್ಟ 24 ಕೆಲಸಗಾರರಿರುವ ಹೊಟೇಲ್, ರೆಸ್ಟೋರೆಂಟ್, ಖಾನಾವಳಿಗಳಲ್ಲಿ ಒಬ್ಬರಿಗೆ ಆಹಾರ ಸುರಕ್ಷತೆ ತರಬೇತಿ ನೀಡಬೇಕೆಂಬ ನಿಯಮವಿದೆ. 24ಕ್ಕಿಂತ ಕಡಿಮೆ ಕೆಲಸಗಾರರಿರುವ ಹೊಟೇಲ್‍ಗಳವರು ಲೈಸೆನ್ಸ್ ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವಿಲ್ಲ. ಆಸಕ್ತಿಯಿದ್ದರೆ ತರಬೇತಿ ಪಡೆಯಬಹುದು. ಒಂದು ವೇಳೆ ಒತ್ತಾಯಪೂರ್ವಕವಾಗಿ ಲೈಸೆನ್ಸ್ ನೀಡಲು ಹಣ ಪಡೆಯುತ್ತಿದ್ದರೆ ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಹಣ ಪಡೆದು ಲೈಸೆನ್ಸ್ ನೀಡುತ್ತಿರುವ ಕುರಿತು ಮಾಹಿತಿ ಇಲ್ಲ. ಸಾರ್ವಜನಿಕರ ಬಳಿಗೆ ಹೋಗಿ ಲೈಸೆನ್ಸ್‌ಗಾಗಿ ಹಣ ಕೇಳುವುದು ತಪ್ಪು. ಯಾರಾದರೂ ಲೈಸೆನ್ಸ್ ಹೆಸರಿನಲ್ಲಿ ಹಣ ಕೇಳುತ್ತಿದ್ದರೆ ವ್ಯಾಪಾರಸ್ಥರು ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದು ಆಹಾರ ಸುರಕ್ಷಾಧಿಕಾರಿ ಡಾ. ದೀಪಕ ಪ್ರತಿಕ್ರಿಯಿಸಿದರು.

Share this article