ಕೊನೆಯಿಲ್ಲದ ದುರಾಸೆಯಿಂದಾಗಿ ಹಗರಣಗಳು ನಡೀತಿವೆ: ನ್ಯಾ.ಸಂತೋಷ ಹೆಗಡೆ

KannadaprabhaNewsNetwork | Published : Mar 11, 2024 1:20 AM

ಸಾರಾಂಶ

ಬಾಗಲಕೋಟೆ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಸಮೃದ್ಧ ಭಾರತ ಕರ್ನಾಟಕ ಬಾಗಲಕೋಟೆ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ, ನೈತಿಕತೆ ಹಾಗೂ ಮಾನವ ಹಕ್ಕುಗಳ ಕುರಿತ ವಿಚಾರ ಸಂಕಿರಣದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಮಾತನಾಡಿ, ದೇಶದಲ್ಲಿ ಒಂದು ದಶಕದಲ್ಲಿ 500 ರಿಂದ 600 ಹಗರಣ ನಡೆಯುತ್ತವೆ. ಇದು ದುರಾಸೆ ಎಂಬ ರೋಗಕ್ಕೆ ಮಿತಿ ಇಲ್ಲದ್ದರ ಪರಿಣಾಮ. ಸಂತೃಪ್ತಿಯ ಬದುಕು ಅಳವಡಿಸಿಕೊಳ್ಳದೆ ಹೋದಲ್ಲಿ ಹಗರಣಗಳಿಗೆ ಕೊನೆ ಇಲ್ಲದಂತಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದಲ್ಲಿ ಒಂದು ದಶಕದಲ್ಲಿ 500 ರಿಂದ 600 ಹಗರಣ ನಡೆಯುತ್ತವೆ. ಇದು ದುರಾಸೆ ಎಂಬ ರೋಗಕ್ಕೆ ಮಿತಿ ಇಲ್ಲದ್ದರ ಪರಿಣಾಮ. ಸಂತೃಪ್ತಿಯ ಬದುಕು ಅಳವಡಿಸಿಕೊಳ್ಳದೆ ಹೋದಲ್ಲಿ ಹಗರಣಗಳಿಗೆ ಕೊನೆ ಇಲ್ಲದಂತಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಸಮೃದ್ಧ ಭಾರತ ಕರ್ನಾಟಕ ಬಾಗಲಕೋಟೆ ಜಿಲ್ಲಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ, ನೈತಿಕತೆ ಹಾಗೂ ಮಾನವ ಹಕ್ಕುಗಳ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ದೇಶ ಸ್ವಾತಂತ್ರ್ಯಗೊಂಡಾಗ ಮೊಟ್ಟ ಮೊದಲ ಬಾರಿಗೆ 1950ರಲ್ಲಿ ಸೇನೆಯ ಜೀಪ್‌ ಖರೀದಿ ಹಗರಣ ನಡೆಯಿತು. ಅದರಲ್ಲಿ ₹ 52 ಲಕ್ಷ ಲೆಕ್ಕವಿಲ್ಲದೆ ಹೊರಟು ಹೋಯಿತು. 1960ರ ದಶಕದಲ್ಲಿ ಬೋಫೋರ್ಸ್‌ ಹಗರಣ ನಡೆಯಿತು. ಬಳಿಕ ಕಾಮನ್‌ ವೆಲ್ತ್‌ ಹಗರಣದದಲ್ಲಿ ₹ 76 ಸಾವಿರ ಕೋಟಿ, 2010 ದಶಕದಲ್ಲಿ 2ಜಿ ಹಗರಣದಲ್ಲಿ ₹ 1.76 ಸಾವಿರ ಕೋಟಿ ಕೊಳ್ಳೆ ಹೊಡೆಲಾಯಿತು. ಕಲ್ಲಿದಲು ಹಗರಣದಲ್ಲಿ ₹ 1.86 ಸಾವಿರ ಕೋಟಿ ಲೂಟಿ ಮಾಡಲಾಯಿತು. ಹೀಗೆ ಪ್ರತಿಯೊಂದು ದಶಕದಲ್ಲಿ ₹ 500 ರಿಂದ 600 ಹಗರಣ ನಡೆಯುತ್ತಲೆ ಇವೆ. ಅದರಲ್ಲಿ ಕೆಲುವು ಬೆಳಕಿಗೆ ಬರುತ್ತವೆ. ಹಲವು ಕಣ್ಮರೆಯಾಗುತ್ತವೆ. ದೆಹಲಿಯಿಂದ ₹ 1 ಬಿಡುಗಡೆ ಮಾಡಿದರೆ ತಲುಪುವುದು ₹ 10 ಪೈಸೆ ಮಾತ್ರ ಎಂದು 1985ರಲ್ಲಿ ಪ್ರಧಾನಿ ರಾಜೀವ ಗಾಂಧಿಯವರೇ ಸ್ಪಷ್ಟವಾಗಿ ಹೇಳಿದ್ದರು. ಹೀಗಿರುವಾಗ ಸಮೃದ್ಧ ಭಾರತ ಕಾಣಲು ಹೇಗೆ ಸಾಧ್ಯ ಎಂದು ತಿಳಿಸಿದರು.

ಮಕ್ಕಳಿಗೆ ಮನೆ ಹಾಗೂ ಶಾಲೆಗಳಲ್ಲಿ ಮೌಲ್ಯಗಳ ಪಾಠ ಹೇಳುತ್ತಿಲ್ಲ. ತೃಪ್ತಿಯ ಮೌಲ್ಯಗಳನ್ನು ಬಿತ್ತುವಲ್ಲಿ ವಿಫಲರಾಗಿದ್ದೇವೆ. ಬಾಂಬ್‌ ಹೇಗೆ ತಯಾರಿ ಮಾಡಬೇಕು ಎಂದು ಹೇಳಿಕೊಡುತ್ತಿದ್ದೇವೆ. ಅದನ್ನು ಹೇಗೆ ಬಳಸಬೇಕು ಎನ್ನುವ ಚಿಂತನೆ ಬಿತ್ತುತ್ತಿಲ್ಲ. ಮಾನವೀಯತೆ ಹುಟ್ಟಿನಿಂದ ಬರುವುದಿಲ್ಲ. ಅದು ಬದುಕಿನ ಭಾಗವಾಗಬೇಕು ಎಂದರು.

ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ಸಂತೋಷ ಹೆಗಡೆ ಜಿಲ್ಲೆಗೆ ಆಗಮಿಸಿರುವುದು ನಮ್ಮ ಸೌಭಾಗ್ಯ. ಗಣಿ ಹಗರಣದಲ್ಲಿ ರಾಜ್ಯದ ಮೂರು ಪಕ್ಷದ ಮೂರು ಸಿಎಂಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ವರದಿ ನೀಡಿದ ಏಕೈಕ ಲೋಕಾಯುಕ್ತ ನ್ಯಾಯಮುರ್ತಿ ಇವರು. 1828 ವಿದ್ಯಾಸಂಸ್ಥೆಗಳಿಗೆ ಭೇಟಿ ನೀಡಿ ಉಪನ್ಯಾಸ ನೀಡಿದ್ದಾರೆ. ಸಮೃದ್ಧ ಭಾರತ ಪರಿಕಲ್ಪನೆ ಜಾರಿಯಾಗಬೇಕು ಎನ್ನುವುದು ಅವರ ಆಶಯ. ದಕ್ಷಿಣದಲ್ಲಿ ಕಾವೇರಿಗೆ ಸಿಕ್ಕಷ್ಟೆ, ಉತ್ತರದ ಕೃಷ್ಣೆಗೂ ಸಮಾನ ಅನುದಾನ, ಅವಕಾಶ ದೊರಯಬೇಕು. ಅಂದಾಗ ಮಾತ್ರ ಸಮೃದ್ಧ ಕರ್ನಾಟಕ ಆಗಲು ಸಾಧ್ಯ ಎಂದು ಹೇಳಿದರು.

ಶಾಸಕ, ಬಿಡಿಟಿಎ ಅಧ್ಯಕ್ಷ ಎಚ್.ವೈ.ಮೇಟಿ, ಜೆ.ಟಿ. ಪಾಟೀಲ, ಮುಖಂಡರಾದ ಎಸ್.ಡಿ .ಜೋಗಿನ, ರಮೇಶ ಬದ್ನೂರ, ಮುತ್ತಪ್ಪ ಕೋಮಾರ, ಸಂತೋಷ ಹೊಕ್ರಾಣಿ, ಎ.ಎ. ದಂಡಿಯಾ, ರಕ್ಷಿತಾ ಭರತಕುಮಾರ ಈಟಿ, ರಾಜು ಮನ್ನಿಕೇರಿ, ವೈ.ವೈ. ತಿಮ್ಮಾಪುರ ಇತರರು ಇದ್ದರು.

ಸರಿ ಇರೋದನ್ನು ಒಪ್ಪಿಕೊಳ್ಳಿ

ಸಂವಿಧಾನ ಜಾರಿಗೆ ಬಂದು 70 ವರ್ಷಗಳು ಗತಿಸಿದರೂ ಅನೇಕ ಕಾಯ್ದೆಗಳು ಸಮರ್ಪವಾಗಿ ಅನುಷ್ಠಾನಗೊಂಡಿಲ್ಲ. ಸಂವಿಧಾನ ಕರಡು ರಚನಾ ಸಮಿತಿ ಸಾಕಷ್ಟು ಚರ್ಚೆ, ಸಭೆ, ಚಿಂತನೆ ನಡೆಸಿ ಕಾಯ್ದೆ ಕಾನೂನು ರೂಪಿಸಿದೆ. ವಿಶ್ವದಲ್ಲಿ ಹಲವು ರಾಜನೀತಿಗಳು ಇದ್ದವು. ಯಾವುದನ್ನು ಸ್ವೀಕರಿಸಬೇಕು ಎನ್ನುವ ಚಿಂತನೆ ನಡೆದು ಕೊನೆಗೆ ಪ್ರಜಾಪ್ರಭುತ್ವ ಅಳವಡಿಸಿಕೊಳ್ಳಲು ನಿರ್ಧರಿಸಲಾಯಿತು. ಮೊದಲು ವಿದ್ಯಾವಂತರಿಗೆ ಮಾತ್ರ ಮತದಾನ ಎನ್ನುವ ಕೂಗು ಕೇಳಿ ಬಂತು. ಅಂದು ಭಾರತದಲ್ಲಿ ಶೇ.20ರಷ್ಟು ಜನ ಮಾತ್ರ ವಿದ್ಯಾವಂತರಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿ ಒಂದು ವರ್ಗ, ಗುಂಪಿಗೆ ಸಿಮೀತವಾಗಬಾರದು ಎನ್ನುವ ಉದ್ದೇಶದಿಂದ ಎಲ್ಲರಿಗೂ ಸಮಾನ ಅವಕಾಶ ನೀಡಲಾಯಿತು. ಸರಿ ಇರುವುದನ್ನು ನಾವು ಒಪ್ಪಿಕೊಳ್ಳಬೇಕು.

Share this article