ಮಳೆಯ ಚೆಲ್ಲಾಟ: ಅಡಕೆ ಬೆಳೆಗಾರರಿಗೆ ಸಂಕಷ್ಟ

KannadaprabhaNewsNetwork | Published : Oct 22, 2024 12:06 AM

ಸಾರಾಂಶ

ಚಿಕ್ಕಮಗಳೂರು, ವರುಣನ ಆರ್ಭಟಕ್ಕೆ ಜಿಲ್ಲೆ ತತ್ತರಿಸಿ ಹೋಗಿದೆ. ಬಯಲುಸೀಮೆಯ ರೈತರು ಈರುಳ್ಳಿ, ತರಕಾರಿ ಫಸಲು ಕಳೆದುಕೊಂಡಿದ್ದರೆ, ಮಲೆನಾಡಿನ ರೈತರು ಕೊಳೆ ರೋಗದಿಂದ ತಮ್ಮ ಅಡಕೆ ತೋಟಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮಳೆ ಇದೇ ರೀತಿಯಲ್ಲಿ ಮುಂದುವರಿದರೆ ಕಾಫಿ, ಮೆಣಸು, ಏಲಕ್ಕಿ ಫಸಲಿಗೂ ದೊಡ್ಡ ಮಟ್ಟದಲ್ಲಿ ಪೆಟ್ಟು ಬೀಳಲಿದೆ.

25 ಸಾವಿರ ಹೆಕ್ಟೇರ್‌ ಅಡಕೆಗೆ ಬೆಳೆಗೆ ಕೊಳೆ ರೋಗ । ಬೋಡೋ ದ್ರಾವಣ ಸಿಂಪಡಣೆಗೆ ಮಳೆ ಅಡ್ಡಿ,

ಆರ್‌.ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವರುಣನ ಆರ್ಭಟಕ್ಕೆ ಜಿಲ್ಲೆ ತತ್ತರಿಸಿ ಹೋಗಿದೆ. ಬಯಲುಸೀಮೆಯ ರೈತರು ಈರುಳ್ಳಿ, ತರಕಾರಿ ಫಸಲು ಕಳೆದುಕೊಂಡಿದ್ದರೆ, ಮಲೆನಾಡಿನ ರೈತರು ಕೊಳೆ ರೋಗದಿಂದ ತಮ್ಮ ಅಡಕೆ ತೋಟಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮಳೆ ಇದೇ ರೀತಿಯಲ್ಲಿ ಮುಂದುವರಿದರೆ ಕಾಫಿ, ಮೆಣಸು, ಏಲಕ್ಕಿ ಫಸಲಿಗೂ ದೊಡ್ಡ ಮಟ್ಟದಲ್ಲಿ ಪೆಟ್ಟು ಬೀಳಲಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಮಳೆಯ ಸರಾಸರಿ ವಾಡಿಕೆ 5.9 ಮಿ.ಮೀ. ಆದರೆ, ಇದೇ ಅವಧಿಯಲ್ಲಿ ಬಂದಿರುವ ಮಳೆ 18 ಮಿ.ಮೀ. ಅಂದರೆ ಶೇ.205 ರಷ್ಟು ಒಂದೇ ದಿನದಲ್ಲಿ ಮಳೆ ಬಂದಿದೆ. ಅಕ್ಟೋಬರ್‌ ಮಾಹೆಯಲ್ಲಿ ಈವರೆಗೆ ಶೇ. 87 ರಷ್ಟು ಹೆಚ್ಚುವರಿ ಮಳೆಯಾಗಿದೆ.

ಜೂನ್‌ ಮಾಹೆಯಲ್ಲಿ ಮುಂಗಾರು ಮಳೆ ಆರಂಭವಾದರೆ ಸೆಪ್ಟಂಬರ್‌ ತಿಂಗಳ ಕೊನೆಯಲ್ಲಿ ತನ್ನ ಅವಧಿಯನ್ನು ಪೂರ್ಣಗೊಳಿಸುವುದು ಈವರೆಗೆ ನಡೆದುಕೊಂಡುಬಂದ ವಾಡಿಕೆ. ಆದರೆ, ಈ ಬಾರಿ ಜೂನ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬರಲಿಲ್ಲ, ಜುಲೈ ತಿಂಗಳಲ್ಲಿ ಆರಂಭವಾದ ಮಳೆ ಈವರೆಗೆ ಬರುತ್ತಲೇ ಇದೆ. ಅಂದರೆ, ಮಳೆಯ ಅವಧಿ ಒಂದು ತಿಂಗಳು ಮುಂದಕ್ಕೆ ಹೋಗಿದಿಯಾ ಎಂಬ ಸಂಶಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

ಈ ರೀತಿಯ ಮಳೆಯ ಏರುಪೇರಿನಿಂದಾಗಿ ರೈತರು ಫಸಲು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಬಗ್ಗೆ ಆತಂಕ ಎದುರಾಗಿದೆ. ಕಾರಣ, ಮಳೆ ಸಕಾಲಕ್ಕೆ ಬರದೆ ಇದ್ದರಿಂದ, ನಂತರದ ದಿನಗಳಲ್ಲಿ ದಿಢೀರನೆ ಬಂದ ಮಳೆ ಪರಿಣಾಮ ಅಜ್ಜಂಪುರ, ಕಡೂರು ತಾಲೂಕುಗಳಲ್ಲಿ ರೈತರು ಈರುಳ್ಳಿ ಫಸಲನ್ನು ಕಳೆದುಕೊಂಡರು. ತೋಟಗಾರಿಕೆ ಇಲಾಖೆ ಅಂದಾಜು ಮಾಡಿರುವ ಪ್ರಕಾರ, ಈ ಎರಡು ತಾಲೂಕುಗಳಲ್ಲಿ 1812 ಹೆಕ್ಟೇರ್‌ ಪ್ರದೇಶದಲ್ಲಿನ ಈರುಳ್ಳಿಗೆ ಹಾನಿಯಾಗಿದ್ದು, 2434 ಮಂದಿ ರೈತರಿಗೆ ನಷ್ಟವಾಗಿದೆ.

ಮುಂದಿನ ಸರದಿ:

ಈಗಾಗಲೇ ಬಯಲುಸೀಮೆಯ ರೈತರು ಈರುಳ್ಳಿ ಹಾಗೂ ತರಕಾರಿ ಬೆಳೆಯನ್ನು ಭಾರೀ ಮಳೆಯಿಂದಾಗಿ ಕಳೆದುಕೊಂಡಿದ್ದಾರೆ. ಇದೀಗ ಮುಂದಿನ ಸರದಿ ಅಡಕೆ ಬೆಳೆಯದ್ದಾಗಿದೆ. ಕೊಪ್ಪ, ಕಳಸ, ಮೂಡಿಗೆರೆ, ಎನ್‌.ಆರ್‌.ಪುರ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ವಾಡಿಕೆಗೂ ಮೀರಿ ಮಳೆ ಬಂದಿದ್ದರಿಂದ ಈ ಐದು ತಾಲೂಕುಗಳಲ್ಲಿ ಸುಮಾರು 25 ಸಾವಿರ ಹೆಕ್ಟೇರ್‌ ಅಡಕೆ ತೋಟಗಳು ಕೊಳೆ ರೋಗಕ್ಕೆ ತುತ್ತಾಗಿವೆ. ಕೊಪ್ಪ ತಾಲೂಕು ಒಂದರಲ್ಲೇ 8150 ಹೆಕ್ಟೇರ್‌ ಪ್ರದೇಶದಲ್ಲಿ ಕೊಳೆ ರೋಗ ವ್ಯಾಪಿಸಿಕೊಂಡಿದೆ. ದಿನೇ ದಿನೇ ಇದರ ವ್ಯಾಪ್ತಿ ವಿಸ್ತಾರವಾಗುತ್ತಿದೆ.

ಕೊಯ್ಲು ಸಮಯ:

ಮಲೆನಾಡಿನಲ್ಲಿ ಅಡಕೆ ಕೊಯ್ಲು ಆರಂಭಗೊಂಡಿದೆ. ಆದರೆ, ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಕೊಯ್ಲು ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಮಳೆ ಬಿಡುವು ನೀಡುವುದನ್ನು ಎದುರು ನೋಡುತ್ತಿದ್ದಾರೆ. ಆದರೆ, ಸದ್ಯ ಅಂದುಕೊಂಡಂತೆ ಪರಿಸ್ಥಿತಿ ಇಲ್ಲ, ಗುಡುಗು ಸಹಿತ ಪ್ರತಿ ದಿನ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅಡಕೆಗೆ ಔಷಧಿ ಸಿಂಪಡಣೆ ಮಾಡದೆ ಹೋದರೆ ಕೊಳೆ ರೋಗ ಬಂದಿರುವ ಅಡಕೆಗಳು ಉದುರುವ ಸಾಧ್ಯತೆ ಹೆಚ್ಚಿದೆ. ಆದರೆ, ಔಷಧಿ ಸಿಂಪಡಣೆಗೆ ಮಳೆ ಬಿಡುವು ನೀಡುತ್ತಿಲ್ಲ. ಅದ್ದರಿಂದಾಗಿ ಮುಂದಿನ ದಿನಗಳಲ್ಲಿ ಬೆಳೆ ಹಾನಿ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.

--- ಬಾಕ್ಸ್‌ ----

ನಿರಂತರ ಮಳೆಯಿಂದಾಗಿ ಅಡಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ಗಿಡಗಳ ಸಂರಕ್ಷಣೆಗಾಗಿ ಔಷಧಿ ಸಿಂಪಡಣೆಗೆ ₹10 ಕೋಟಿ ಯನ್ನು ಸರ್ಕಾರಕ್ಕೆ ಕೇಳಲಾಗಿದೆ. ಹವಾಮಾನ ವೈಪರೀತ್ಯದಡಿ ಬೆಳೆ ವಿಮೆಗಾಗಿ 2024-25ನೇ ಸಾಲಿನಲ್ಲಿ ಅಡಕೆ ಸೇರಿದಂತೆ ಇತರೆ ಬೆಳೆಗಳಿಗೆ 21520 ಹೆಕ್ಟೇರ್‌ ಪ್ರದೇಶಕ್ಕೆ 45913 ಮಂದಿ ಬೆಳೆ ವಿಮೆ ಪಾವತಿ ಮಾಡಿದ್ದಾರೆ.

- ಪೂರ್ಣಿಮಾ

ಉಪ ನಿರ್ದೇಶಕರು,

ತೋಟಗಾರಿಕೆ ಇಲಾಖೆ

-

21 ಕೆಸಿಕೆಎಂ 5

ಕಡೂರು ತಾಲೂಕಿನಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಅಡಕೆ ತೋಟದಲ್ಲಿ ನಿಂತಿರುವ ಮಳೆ ನೀರು.

Share this article