ಹಲವೆಡೆ ಬಿರುಗಾಳಿ ಸಹಿತ ಸುರಿದ ಮಳೆ: ಮನೆ ಮೇಲ್ಚಾವಣಿಗೆ ಹಾನಿ

KannadaprabhaNewsNetwork | Published : May 5, 2024 2:13 AM

ಸಾರಾಂಶ

ಬೆಳೆದು ನಿಂತಿದ್ದ ಬಾಳೆ, ಕಬ್ಬು ನೆಲಕಚ್ಚಿ ರೈತರಿಗೆ ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಗಾಳಿ ರಭಸಕ್ಕೆ ಪೂರ್ವಿಕರು ನಿರ್ಮಿಸಿದ್ದ ಹಳೆ ಮನೆಗಳಲ್ಲಿ ವಾಷಿಸುತ್ತಿರುವ ನಿವಾಸಿಗಳನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. ಬಿಸಿಲಿನ ತಾಪಮಾನಕ್ಕೆ ಬೆಂದು ಹೋಗುತ್ತಿದ್ದ ಜನತೆ ಇದೀಗ ಮಳೆ ಬಂತು ಎಂಬ ಖುಷಿಯಲ್ಲಿದ್ದರೆ, ಮತ್ತೊಂದೆಡೆ ಭಾರೀ ಬಿರುಗಾಳಿಯಿಂದಾಗಿ ಅವಘಢಗಳು ಸಂಭವಿಸಿ ಜೀವ ಭಯದಲ್ಲಿ ಬದುಕುವ ಆತಂಕ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬಿರುಗಾಳಿ ಸಿಹ ಸಹಿತ ಸುರಿದ ಮಳೆಯಿಂದಾಗಿ ಶುಕ್ರವಾರ ಸಂಜೆ ತಾಲೂಕಿನ ಹಲವು ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಸೇರಿದಂತೆ ಕೆಲ ಮನೆಗಳ ಮೇಲ್ಚಾವಣಿಗಳು ಹಾರಿ ಹೋಗಿರುವ ಘಟನೆ ಸಂಭವಿಸಿವೆ.

ಬೆಳೆದು ನಿಂತಿದ್ದ ಬಾಳೆ, ಕಬ್ಬು ನೆಲಕಚ್ಚಿ ರೈತರಿಗೆ ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದೆ. ಗಾಳಿ ರಭಸಕ್ಕೆ ಪೂರ್ವಿಕರು ನಿರ್ಮಿಸಿದ್ದ ಹಳೆ ಮನೆಗಳಲ್ಲಿ ವಾಷಿಸುತ್ತಿರುವ ನಿವಾಸಿಗಳನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.

ಬಿಸಿಲಿನ ತಾಪಮಾನಕ್ಕೆ ಬೆಂದು ಹೋಗುತ್ತಿದ್ದ ಜನತೆ ಇದೀಗ ಮಳೆ ಬಂತು ಎಂಬ ಖುಷಿಯಲ್ಲಿದ್ದರೆ, ಮತ್ತೊಂದೆಡೆ ಭಾರೀ ಬಿರುಗಾಳಿಯಿಂದಾಗಿ ಅವಘಢಗಳು ಸಂಭವಿಸಿ ಜೀವ ಭಯದಲ್ಲಿ ಬದುಕುವ ಆತಂಕ ಎದುರಾಗಿದೆ.

ಶುಕ್ರವಾರ ಸುರಿದ ಬಿರುಗಾಳಿ, ಗುಡುಗು ಸಹಿತ ಮಳೆಯಿಂದಾಗಿ ಶ್ರಿರಂಗಪಟ್ಟಣದ ನ್ಯಾಯಾಲಯದ ಹಿಂಬದಿ ಮಹಾದೇವಿ ಎಂಬುವವರಿಗೆ ಸೇರಿದ ಮನೆ ಮೇಲ್ಛಾವಣಿಯಲ್ಲಿನ ಶೀಟ್‌ಗಳು ಹಾರಿ ಹೋಗಿವೆ. ಅಲ್ಲಾಪಟ್ಟಣ ಗ್ರಾಮದ ಶಂಕರ್ ಅವರಿಗೆ ಸೇರಿದ ಮನೆ ಹೆಂಚಿನ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ಬಿದಿದ್ದು ಅಪಾರ ನಷ್ಟ ಸಂಭವಿಸಿದೆ.

ವಿವಿಧೆಡೆ ಬಿರುಗಾಳಿ ಸಹಿತ ಸುರಿದ ಭಾರೀಮಳೆಯಿಂದ ಜನರದಲ್ಲಿ ಹರ್ಷೋದ್ಘಾರ

ಪಾಂಡವಪುರ:ತಾಲೂಕಿನ ವಿವಿಧಡೆ ಶುಕ್ರವಾರ ಸಂಜೆ ಸುರಿದು ಬಿರುಗಾಳಿ ಸಹಿತ ಮಳೆಯಿಂದಾಗಿ ವರ್ಷದ ಮೊದಲ ಮಳೆಕಂಡು ಜನರಲ್ಲಿ ಮನಸ್ಸಲ್ಲಿ ಹರ್ಷೋದ್ಘಾರ ಮೂಡಿತ್ತು.

ಭೀಕರ ಬರಗಾಲ, ಬಿಸಿಲಿನ ತಾಪಕ್ಕೆ ಕೆರೆಕಟ್ಟೆಗಳು, ನಾಲೆಗಳಲ್ಲಿ ಒಂದು ಹನಿ ನೀರಿಲ್ಲದಂತೆ ಬತ್ತಿಹೋಗಿದ್ದವು. ವರ್ಷದ ಮೊದಲ ಮಳೆ ಧರೆಗಳಿ ಪರಿಣಾಮ ಜನರಲ್ಲಿ ಮಂದಹಾಸ ಮನೆಮಾಡಿದೆ.ಶುಕ್ರವಾರ ಸಂಜೆ ಸುಮಾರು ಒಂದು ಕಾಲುಗಂಟೆಯ ಕಾಲ ಬಿರಿಗಾಳಿ, ಸಿಡಿಲು ಸಹಿತ ಮಳೆ ಸುರಿಯಿತು. ತಾಲೂಕಿನ ಕಸಬಾ ಹೋಬಳಿ, ಚಿನಕುರಳಿ, ಮೇಲುಕೋಟೆಯ ಹೋಬಳಿಯ ಕೆಲವು ಭಾಗದಲ್ಲಿ ಮಳೆಯಾಗಿದೆ. ಉರಿಬಿಸಿಲಿಂದ ಕಾದುನಿಂತಿದ್ದ ಭೂಮಿ ಮಳೆಯಿಂದ ಸ್ವಲ್ಪ ತಂಪಾಗಿ ಬಿಸಿಲಿನ ಕಾವು ತಣ್ಣಗಾಗುವಂತೆ ಮಾಡಿತು.

ಜತೆಗೆ ನೀರಿಲ್ಲದೆ ಒಣಗಿನಿಂತಿದ್ದ ಕಬ್ಬು, ತೆಂಗು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಕುಟುಕು ನೀರುಬಿಟ್ಟಂತಾಗಿದೆ. ಇದೀಗ ಆರಂಭಗೊಂಡಿರುವ ಮಳೆ ಮುಂದಿನ ದಿನಗಳಲ್ಲಾದರೂ ಸ್ವಲ್ಪ ಅಬ್ಬರಿಸಿದರೆ ಕೆರೆಕಟ್ಟೆಗಳು ಭರ್ತಿಯಾಗಿ ರೈತರ ಮೊಗದಲ್ಲಿ ಹರ್ಷ ತಂದಿದೆ.ಆಲಿಕಲ್ಲು ಮಳೆಗೆ ಸೌತೆ ಬೆಳೆ ನಾಶ

ಮಂಡ್ಯ:ಶುಕ್ರವಾರ ಸಂಜೆ ಸುರಿದ ಆಲಿಕಲ್ಲು ಮಳೆಗೆ ಸೌತೆಕಾಯಿ ಬೆಳೆ ನಾಶವಾಗಿರುವ ಘಟನ ತಾಲೂಕಿನ ಪಣಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಪುಟ್ಟರಾಮು ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಸೌತೆಕಾಯಿ ಬೆಳೆಯನ್ನು ಬೆಳೆದಿದ್ದರು. ಇನ್ನು 15 ದಿನಗಳಲ್ಲಿ ಒಳ್ಳೆಯ ಫಸಲು ಬರುತ್ತಿತ್ತು. ಆದರೆ, ನಿನ್ನೆ ಬಿದ್ದ ಮಳೆಯಿಂದ ಸೌತೆಕಾಯಿಯ ಗಿಡದ ಬಳ್ಳಿಗಳು ತುಂಡರಿಸಿದೆ. ಇದರಿಂದ ಸಾವಿರಾರು ರು. ನಷ್ಟವಾಗಿದೆ ಎಂದು ಪುಟ್ಟರಾಮು ತಿಳಿಸಿದರು.

ತೋಟಗಾರಿಕೆ ಇಲಾಖೆಯ ದುದ್ದ ವಲಯದ ಅಧಿಕಾರಿಯದ ಕಿರಣ್ ಅವರು ಗದ್ದೆಗೆ ಭೇಟಿ ನೀಡಿ ಸರ್ಕಾರದಿಂದ ಬರುವ ಪರಿಹಾರ ಧನವನ್ನ ಕೊಡಿಸುವುದಾಗಿ ಭರವಸೆ ನೀಡಿದರು.ಬಿರುಗಾಳಿಯಿಂದ ಬಾಳೆ ಗಿಡ ನಾಶ ಪರಿಹಾರಕ್ಕೆ ಆಗ್ರಹ

ಹಲಗೂರು:ಸಮೀಪದ ಲಿಂಗಪಟ್ಟಣ ಗ್ರಾಮದ ಬೋರೇಗೌಡರ ಪುತ್ರ ಕೃಷ್ಣ ಅವರಿಗೆ ಸೇರಿದ ಬಾಳೆ ತೋಟ ಭಾರೀ ಬಿರುಗಾಳಿ ಮಳೆಯಿಂದಾಗಿ ಶುಕ್ರವಾರ ಸಂಪೂರ್ಣ ನಾಶವಾಗಿದೆ. ಘಟನೆಯಲ್ಲಿ ಒಟ್ಟು 1450 ಬಾಳೆ ಗಿಡನಾಶ ವಾಗಿ ಲಕ್ಷಾಂತರ ರು. ನಷ್ಟ ಉಂಟಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಿಕೊಡುವಂತೆ ಕಂದಾಯ ಅಧಿಕಾರಿಗಳನ್ನು ರೈತ ಕೃಷ್ಣ ಆಗ್ರಹಿಸಿದ್ದಾರೆ.

ರಸ್ತೆಯಲ್ಲಿ ಹರಿದ ಚರಂಡಿ ನೀರು

ಹಲಗೂರು:

ಭಾರೀ ಮಳೆಯಿಂದಾಗಿ ಶುಕ್ರವಾರ ಸಂಜೆ ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗದೆ ರಸ್ತೆಯಲ್ಲಿ ನಿಂತಿದ್ದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

Share this article