ಗ್ಯಾರಂಟಿಗೆ ಪರಿಶಿಷ್ಟರ ₹25 ಸಾವಿರ ಕೋಟಿ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್

KannadaprabhaNewsNetwork | Published : Mar 5, 2025 12:32 AM

ಸಾರಾಂಶ

ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಉಪ ಯೋಜನೆಯ ಸುಮಾರು 25 ಸಾವಿರ ಕೋಟಿ ರು. ಅನುದಾನವನ್ನೂ ತನ್ನ ಗ್ಯಾರಂಟಿ ಯೋಜನೆಗೆ ಬಳಸುವ ಮೂಲಕ ಪರಿಶಿಷ್ಟರಿಗೆ ಕಾಂಗ್ರೆಸ್ ಸರ್ಕಾರವು ಬಹುದೊಡ್ಡ ದ್ರೋಹ ಬಗೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.

ಎಸ್‌ಸಿಪಿ-ಟಿಎಸ್‌ಪಿ ಅನುದಾನಕ್ಕೂ ಕನ್ನ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಉಪ ಯೋಜನೆಯ ಸುಮಾರು 25 ಸಾವಿರ ಕೋಟಿ ರು. ಅನುದಾನವನ್ನೂ ತನ್ನ ಗ್ಯಾರಂಟಿ ಯೋಜನೆಗೆ ಬಳಸುವ ಮೂಲಕ ಪರಿಶಿಷ್ಟರಿಗೆ ಕಾಂಗ್ರೆಸ್ ಸರ್ಕಾರವು ಬಹುದೊಡ್ಡ ದ್ರೋಹ ಬಗೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ಸಿನ ಮಹತ್ವಕಾಂಕ್ಷೆಯ ಮುಖ್ಯ ಯೋಜನೆಗಳಾದ ಗ್ಯಾರಂಟಿ ಯೋಜನೆಗೆ ಎಸ್‌ಸಿಪಿ-ಟಿಎಸ್‌ಸಿ ಉಪ ಯೋಜನೆ ಅನುದಾನವನ್ನು ಬಳಸಿಕೊಂಡಿದ್ದು ಅಕ್ಷಮ್ಯ ಎಂದರು.

ಗ್ಯಾರಂಟಿಗೆ ಹಣ ಹೊಂದಿಸಬೇಕಾದ್ದು ಗ್ಯಾರಂಟಿ ಯೋಜನೆಗಳ ವಾಗ್ದಾನ ಮಾಡಿದ್ದ ಸಿಎಂ ಸಿದ್ದರಾಮಯ್ಯ ಕೆಲಸ. ಆದರೆ, ಪರಿಶಿಷ್ಟರಿಗೆ ಬಳಕೆಯಾಗಿದ್ದ ಹಣವನ್ನು ತನ್ನ ಗ್ಯಾರಂಟಿಗಳಿಗೆ ಬಳಸಿದ್ದನ್ನು ನೋಡಿದರೆ ಪರಿಶಿಷ್ಟರ ಅನ್ನ, ಅವಕಾಶ ಕಸಿಯುವ ಕೆಲಸ ಮಾಡಿದಂತಾಗಿದೆ. ರೈತರು, ಪರಿಶಿಷ್ಟರಿಗೆ ಸಿದ್ದರಾಮಯ್ಯ ಸಿಎಂ ಆದ ನಂತರ ಘೋರ ಅನ್ಯಾಯ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಅದೇ ವರ್ಗ ಜನರಿಗೆ ಸಿದ್ದರಾಮಯ್ಯ ಬಹುದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಇಂತಹ ಯೋಜನೆ ತರದಿರಬಹುದು. ಆದರೆ, ಪರಿಶಿಷ್ಟರ ಕಾಲೋನಿಗೆ ಸಿಮೆಂಟ್ ರಸ್ತೆ, ಸಮುದಾಯ ಭವನ, ವಿದ್ಯಾರ್ಥಿ ವೇತನ ಸೇರಿದಂತೆ ಪರಿಶಿಷ್ಟರ ಅಭ್ಯುದಯಕ್ಕೆ ಸಾಕಷ್ಟು ಅನುದಾನ ನೀಡಿ, ಸ್ಪಂದಿಸಿದ್ದರು ಎಂದು ಹೇಳಿದರು.

ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟರ 25500 ಕೋಟಿ ರು.ಗಳನ್ನು ಗ್ಯಾರಂಟಿಗೆ ಬಳಸಿಕೊಂಡು ಅಕ್ಷಮ್ಯ ಅಪರಾಧ ಎಸಗಿದ್ದು ಸಿದ್ದರಾಮಯ್ಯ. ಇನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಗ್ಯಾರಂಟಿಗೆ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನ ಬಳಸಿದರೆ ತಪ್ಪೇನೆಂದು ಪ್ರಶ್ನಿಸುತ್ತಾರೆ ಎಂದು ಕಿಡಿಕಾರಿದರು.

ಪರಿಶಿಷ್ಟರ ಎಸ್‌ಸಿಪಿ-ಟಿಎಸ್‌ಪಿ ಅನುದಾನ ಸಚಿವ ಎಚ್.ಸಿ.ಮಹದೇವಪ್ಪ ನೀಡದಿದ್ದರೆ ತನ್ನ ಹಣೆಗೆ ಹಚ್ಚಿಕೊಂಡು ಸುತ್ತಾಡಲಿ. ಮಾ.7ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಪರಿಶಿಷ್ಟರ ಅಭಿವೃದ್ಧಿಗೆ ಪ್ರತ್ಯೇಕವಾಗಿ ಅನುದಾನ ಮೀಸಲಿಡದಿದ್ದರೆ ತೀವ್ರ ಹೋರಾಟ ನಡೆಸಬೇಕಾದುತ್ತದೆ ಎಂದು ಎಚ್ಚರಿಸಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಂ.ಬಸವರಾಜ ನಾಯ್ಕ, ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಐರಣಿ ಅಣ್ಣೇಶ, ಅನಿಲಕುಮಾರ, ಧನಂಜಯ ಕಡ್ಲೇಬಾಳು, ಬಿ.ಎಂ.ಸತೀಶ ಕೊಳೇನಹಳ್ಳಿ, ಪಿ.ಸಿ.ಶ್ರೀನಿವಾಸ ಭಟ್, ಎಲ್.ಎನ್.ಕಲ್ಲೇಶ ಇತರರು ಇದ್ದರು.

ಗ್ಯಾರಂಟಿಗೆ ಹಣ ಕೊಟ್ಟು, ವೇತನಕ್ಕೂ ಸಾಲ ಮಾಡುವ ಸ್ಥಿತಿ

ಗ್ಯಾರಂಟಿಗೆ ಹಣ ಹೊಂದಿಸಲಾಗದ, ನೌಕರರಿಗೆ ವೇತನ ನೀಡುವುದಕ್ಕೂ ಸಾಲ ಮಾಡುವ ಸ್ಥಿತಿಗೆ ತಲುಪಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವು ಆರ್ಥಿಕವಾಗಿ ಸದೃಢವಾಗಿರುವುದಾಗಿ ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯರ್ಶಿ ಪಿ.ರಾಜೀವ್‌ ಆರೋಪಿಸಿದರು.

ಯಾವುದೇ ಸರ್ಕಾರ ವಿತ್ತೀಯ ಹೊಣೆಗಾರಿಕೆ ಅಧಿನಿಯವನ್ನು ಅನುಸರಿಸುತ್ತದೆಂದರೆ ಅಂತಹ ಸರ್ಕಾರ ಆರ್ಥಿಕ ಸದೃಢ ಅನ್ನಬಹುದು. ಆದರೆ, ಸಿದ್ದರಾಮಯ್ಯ ಸರ್ಕಾರ ವೇತನ ನೀಡುವುದಕ್ಕೂ ಸಾಲ ಮಾಡುತ್ತಿದೆ. ನೌಕರರ ವೇತನ ಕೊಡುವುದಕ್ಕೂ ಸಾಲ ಮಾಡುತ್ತಿದೆಯೆಂದರೆ ಆರ್ಥಿಕವಾಗಿ ಅಂತಹ ಸರ್ಕಾರ ದಿವಾಳಿಯಾಗಿದೆ ಅಂತಲೇ ಅರ್ಥ ಎಂದು ಕುಟುಕಿದರು.

ರಾಜ್ಯದಲ್ಲಿ ಬಿಜೆಪಿ ಗಟ್ಟಿ ಹೋರಾಟದಿಂದಾಗಿಯೇ ಸಿದ್ದರಾಮಯ್ಯ ಮೂಡಾದಿಂದ ಪಡೆದಿದ್ದ 14 ನಿವೇಶನ ಬೇಷರತ್ ವಾಪಸ್‌ ಕೊಡುವಂತಾಯಿತು. ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು ಎಂದರು.

Share this article