ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಿಸಿದ ಡಾ.ಸಿದ್ದೇಶ್ವರ
ಕನ್ನಡಪ್ರಭ ವಾರ್ತೆ ದಾವಣಗೆರೆಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿರುವುದರಿಂದ ದೇಶದ 13 ಕೋಟಿಗೂ ಅಧಿಕ ಜನರು ಬಡತನ ರೇಖೆಗಿಂತ ಹೊರ ಬಂದಿದ್ದಾರೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ತಾಲೂಕಿನ ನೇರ್ಲಿಗೆ ಗ್ರಾಮದಲ್ಲಿ ಗುರುವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಏಳು ತಿಂಗಳಾದರೂ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಆದರೆ, ಕೇಂದ್ರದ ಯೋಜನೆಗಳು ಸಮರ್ಪಕವಾಗಿ ದೇಶದ ಜನರಿಗೆ ತಲುಪುತ್ತಿದೆ ಎಂದರು.ಪಿಎಂ ವಿಶ್ವಕರ್ಮ, ಜನಧನ್, ಸ್ವನಿಧಿ, ಮುದ್ರಾ, ಆಯುಷ್ಮಾನ್ ಸೇರಿ ಸುಮಾರು 70 ಯೋಜನೆಗಳನ್ನು ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಗಳಿಂದ ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೌಲಭ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಯೋಜನೆಯಿಂದ ಹೊರಗಿರುವ ಜನರ ಯೋಜನೆಗಳ ವ್ಯಾಪ್ತಿಗೆ ತರುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ದೇಶಾದ್ಯಂತ 15 ಸಾವಿರ ಡ್ರೋಣ್‌ಗಳ ಶೇ.80 ಸಹಾಯಧನದೊಂದಿಗೆ ಮಹಿಳಾ ಸಂಘಗಳಿಗೆ ನೀಡಲಾಗುತ್ತಿದೆ. ಈ ಯೋಜನೆಗೆ ನಮೋ ಡ್ರೋಣ್ ದೀದಿ ಎಂಬುದಾಗಿ ಹೆಸರಿಡಲಾಗಿದೆ. ಈ ಮೂಲಕ ಡ್ರೋಣ್ ಮೂಲಕ ಯೂರಿಯಾ ಸಿಂಪಡಣೆಯಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುತ್ತಿದೆ. ನೇರ್ಲಿಗೆಯಲ್ಲೂ ಡ್ರೋಣ್ ಪ್ರಾತ್ಯಕ್ಷಿಕೆ ಹಾಗೂ ಎನ್ಆರ್‌ಎಂಎಲ್ ಮತ್ತು ಉಜ್ವಲ ಯೋಜನೆ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ನೇರ್ಲಿಗೆ ಗ್ರಾಪಂ ಅಧ್ಯಕ್ಷರಾದ ರಶ್ಮಿ ರೇಖಾ, ನಬಾರ್ಡ್ ಅಧಿಕಾರಿಗಳು, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ, ಗ್ರಾಮದ ಮುಖಂಡರು, ಗ್ರಾಮಸ್ಥರು, ಫಲಾನುಭವಿಗಳು ಇದ್ದರು.
ಮೋದಿ ಆಡಳಿತದಲ್ಲಿ ದೇಶ ಅಭಿವೃದ್ಧಿ ಪಥದತ್ತ2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭಾರೀ ಬಹುಮತದೊಂದಿಗೆ ಗೆದ್ದು ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಮೋದಿ ಆಳ್ವಿಕೆಯಲ್ಲಿ ದೇಶದ ಚಿತ್ರಣ ಬದಲಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಮೋದಿ ಆಡಳಿತದಲ್ಲಿ ದೇಶ ಸದೃಢವಾಗಿದೆ.
ಡಾ.ಜಿ.ಎಂ.ಸಿದ್ದೇಶ್ವರ, ಸಂಸದ