ಸೂಕ್ತ ಚಿಕಿತ್ಸೆಯಿಂದ ಸ್ಕಿಝೋಫ್ರೀನಿಯಾ ಕಾಯಿಲೆ ವಾಸಿ ಸಾಧ್ಯ: ಡಾ.ಡೆವೀನ್

KannadaprabhaNewsNetwork | Published : May 30, 2024 12:47 AM

ಸಾರಾಂಶ

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಆಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಸ್ಕಿಝೋಫ್ರೀನಿಯಾ ದಿನಾಚರಣೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮನೋವೈದ್ಯ ಡಾ. ಡೆವೀನ್ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಆರಂಭಿಕ ಹಂತದಲ್ಲೇ ಸ್ಕಿಝೋಫ್ರೀನಿಯಾ ರೋಗ ಗುರುತಿಸಿ ಸೂಕ್ತ ಮಾನಸಿಕ ಆಪ್ತ ಸಮಾಲೋಚಕರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಔಷಧಿಗಳನ್ನು ತೆಗೆದುಕೊಂಡಲ್ಲಿ ಕಾಯಿಲೆಯನ್ನು ಕ್ರಮೇಣ ನಿಯಂತ್ರಣಕ್ಕೆ ತಂದು ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ಮನೋವೈದ್ಯ ಡಾ. ಡೆವೀನ್ ತಿಳಿಸಿದ್ದಾರೆ.

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಆಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವ ಸ್ಕಿಝೋಫ್ರೀನಿಯಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಹದಿಹರೆಯದವರಲ್ಲಿ ಸ್ಕಿಝೋಫ್ರೀನಿಯಾ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು.

ಇದು ತುಂಬಾ ಗಂಭೀರ ಸಮಸ್ಯೆಯಾಗಿದೆ. ಇದೊಂದು ಮಾನಸಿಕ ಸಮಸ್ಯೆಯಾಗಿದ್ದು ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಇತರೊಂದಿಗೆ ಬೆರೆಯಲು ಹಾಗೂ ಮಾತನಾಡಲು ಸಾಕಷ್ಟು ಹೆದರುತ್ತಾರೆ. ಆತನ ನಡವಳಿಕೆಯಲ್ಲಿ ಬಹಳ ಬದಲಾವಣೆ ಕಂಡುಬರುತ್ತದೆ ಎಂದು ವಿವರಿಸಿದರು.

ಈ ಮಾನಸಿಕ ಕಾಯಿಲೆಗೆ ಸ್ಪಷ್ಟವಾದಂತಹ ಕಾರಣವಿಲ್ಲದಿದ್ದರೂ ಅತಿಯಾದ ಡ್ರಗ್ಸ್ ಹಾಗೂ ಮದ್ಯ ಸೇವನೆ, ಹೆಚ್ಚಿನ ಒತ್ತಡ, ಜೆನೆಟಿಕ್ ಸಮಸ್ಯೆಗಳು , ಮೆದುಳು ಸಂಬಂಧಿ ಕಾಯಿಲೆಗಳಿಂದ ಈ ಮಾನಸಿಕ ರೋಗ ಕಂಡುಬರುತ್ತದೆ. ಈ ಕಾಯಿಲೆಗೆ ಒಳಗಾದ ಜನರು ಹೆಚ್ಚಾಗಿ ಒಂಟಿಯಾಗಿ ಬದುಕುವುದು, ಜನಸಂದಣಿಯ ಸ್ಥಳಕ್ಕೆ ಹೋಗಲು ಇಚ್ಚಿಸದಿರುವುದು, ಅತಿಯಾದ ಭಯ, ವಿಚಿತ್ರವಾದ ಭಾವನೆಗಳು, ತೂಕದಲ್ಲಿ ವ್ಯತ್ಯಾಸ, ದಿನನಿತ್ಯದ ಕೆಲಸಗಳನ್ನು ಸರಿಯಾಗಿ ಮಾಡದಿರುವುದು, ಮಾಡಿದಂತಹ ಕೆಲಸಗಳನ್ನು ಪದೇಪದೇ ಮಾಡಲು ಇಚ್ಚಿಸುವಂಥದ್ದು ಈ ರೋಗದ ಪ್ರಮುಖ ಲಕ್ಷಣವಾಗಿದೆ ಎಂದು ವಿವರಿಸಿದರು.

ಈ ರೀತಿಯ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವಂತಹ ಯಾವುದಾದರೂ ರೋಗಿ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿದ್ದರೆ ಟೋಲ್ ಫ್ರೀ ಸಂಖ್ಯೆ ೧೪೪೧೬ ಈ ಸಂಖ್ಯೆಗೆ ಕರೆ ಮಾಡಿ ಆಪ್ತ ಸಮಾಲೋಚಕರೊಂದಿಗೆ ನೇರವಾಗಿ ಮಾತನಾಡಬಹುದು. ಈ ರೀತಿಯ ರೋಗ ಲಕ್ಷಣಗಳಿದ್ದಲ್ಲಿ ಅದನ್ನು ಕಡೆಗಣಿಸದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಬಹಳ ಅವಶ್ಯಕ. ಇಲ್ಲದಿದ್ದಲ್ಲಿ ಅಂತಹ ರೋಗಿಗಳು ಆತ್ಮಹತ್ಯೆಯಂತಹ ಕೆಲಸಗಳಿಗೆ ಮುಂದಾಗುತ್ತಾರೆ ಎಂದರು.

ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್. ಸಲ್ದಾನ ಮಾತನಾಡಿ, ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವಂತಹ ವ್ಯಕ್ತಿಗಳು ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಇದ್ದರೆ ಅವರಿಗೆ ಸೂಕ್ತ ಮಾಹಿತಿ ನೀಡಿ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳಬೇಕು. ಆದಷ್ಟು ಹೆಚ್ಚು ಜನರಿಗೆ ಈ ಮಾನಸಿಕ ಕಾಯಿಲೆ ಬಗ್ಗೆ ತಿಳಿಸುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಹೇಳಿದರು.

Share this article