ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ, ಪಾಲಕರಲ್ಲಿ ಭೀತಿ

KannadaprabhaNewsNetwork | Published : Aug 4, 2024 1:26 AM

ಸಾರಾಂಶ

ಕಮಲಾಪುರ ತಾಲೂಕಿನ ರಾಜನಾಳ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಶಾಲೆ ತೇವ ಹಿಡಿದಿದೆ, ಕಾಮಗಾರಿ ಕಳಪೆಯಾಗಿದೆ, ಚಾವಣಿ ಶೀಥಿಲವಾಗಿದೆ.

ಕನ್ನಡಪ್ರಭ ವಾರ್ತೆ ಕಮಲಾಪುರ

ತಾಲೂಕಿನ ರಾಜನಾಳ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಶಾಲೆ ತೇವ ಹಿಡಿದಿದೆ, ಕಾಮಗಾರಿ ಕಳಪೆಯಾಗಿದೆ, ಚಾವಣಿ ಶೀಥಿಲವಾಗಿದೆ. ಶಾಲೆ ಯಾವಾಗ ಬೇಕಾದರೂ ಕುಸಿಯಬಹುದು ಎಂಬ ಭಯದಲ್ಲಿರುವ ಪೋಷಕರು ಇಲ್ಲಿಂದ ತಮ್ಮ ಮಕ್ಕಳನ್ನು ಬೇರೆ ಊರಿನ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಶಿಥಿಲ ಶಾಲೆಯಲ್ಲಿ ಮಕ್ಕಳನ್ನು ಬಿಡೋದಾದರೂ ಹೇಗೆಂದು ಪ್ರಶ್ನಿಸುತ್ತಿದ್ದಾರೆ.

ಗೋಡೆ ಸೇರಿದಂತೆ ಶಾಲಾ ಕಟ್ಟಡ ತೇವಾಂಶಗೊಂಡಿರುವುದರಿಂದ ಹಾಗೂ ಕಳೆದ 3 ವರ್ಷಗಳ ಹಿಂದೆ ಕಟ್ಟಡ ಡೆಮಾಲಿಶ್‌ ಮಾಡಿ ಅರ್ಧಕ್ಕೆ ಬಿಟ್ಟಿರುವುದರಿಂದ ಯಾವಾಗ ಕಳಚಿ ಬೀಳುತ್ತಿದೆ ಎಂಬ ಭೀತಿ ಶುರುವಾಗಿದೆ ಎಂದು ಮಕ್ಕಳ ಪಾಲಕರು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲಾ ಕಟ್ಟಡ ನಿರ್ಮಿಸಿ 5 ವರ್ಷಗಳು ಕಳೆದಿವೆ. ಕಳಪೆ ಕಾಮಗಾರಿಯಿಂದ ಕಟ್ಟಡದ ಶೀಥಿಲಗೊಂಡಿರುವುದರಿಂದ ನಾಲ್ಕು ಹೊಸ ಕೋಣೆಗಳು ತೇವಗೊಂಡಿದ್ದು ಇನ್ನು ಉಳಿದ ನಾಲ್ಕು ಕೋಣೆಗಳು ಅರ್ಧಕ್ಕೆ ಕೆಡವಿ ನಿಲ್ಲಿಸಲಾಗಿದೆ. ಇವು ಯಾವ ಹೊತ್ತಲ್ಲಿ, ಅದ್ಯಾವ ಸ್ಥಿತಿಯಲ್ಲಿ ಕಳಚಿ ಬೀಳುತ್ತವೋ ಎಂಬುದು ವಿದ್ಯಾರ್ಥಿಗಳಿಗೆ ಗಾಬರಿ ಮೂಡಿಸಿದೆ.

ಇಲ್ಲಿ ವ್ಯಾಸಂಗ ಮಾಡಲು ತೊಂದರೆಯಾಗುತ್ತದೆ. ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ವಿಳಂಬವಾದರೆ ಯಾವ ಸ್ಥಿತಿಯಲ್ಲೂ ಕಟ್ಟಡ ಮಕ್ಕಳ ಮೇಲೆ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಆತಂಕದಲ್ಲಿ ಪಾಲಕರು ಬೇರೆ ಗ್ರಾಮಗಳ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

ಕಳೆದ 3 ವರ್ಷದ ಹಿಂದೆ ಈ ಶಾಲೆಯಲ್ಲಿ ದಾಖಲೆಯಂತೆ 48 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಕಳೆದ ವರ್ಷ ಮಕ್ಕಳ ಸಂಖ್ಯೆ 30ಕ್ಕೆ ಕುಸಿಯಿತು. ಪ್ರಸಕ್ತ ವರ್ಷ 21 ಮಕ್ಕಳು ಮಾತ್ರ ಶಾಲೆಯಲ್ಲಿ ದಾಖಲಾಗಿದ್ದಾರೆ. ಇವರಿಗೆ ನಾಲ್ವರು ಶಿಕ್ಷಕರು 8 ಕೋಣೆಗಳಿವೆ.

ಸರ್ಕಾರ ಗ್ರಾಮೀಣ ಭಾಗದಲ್ಲಿ ಶಾಲಾ ಆರಂಭಿಸಿದ್ದು ಮಕ್ಕಳ ಉತ್ತಮ ಶಿಕ್ಷಣ ಸಿಗಲೆಂದು ಆರಂಬಿಸಿದರೆ ಜನಪ್ರತಿನಿಧಿಗಳು ಅಧಿಕಾರಿಗಳು ನಿರ್ಲಕ್ಷ್ಯದಿಂದ ಶಾಳೆ ಶಿಥಿಲವಾಗಿದೆ, ಪಾಲಕರು ಆತಂಕದಲ್ಲಿ ಮಕ್ಕಳನ್ನು ಬೇರೆಡೆ ಕರೆದೊಯ್ಯುತ್ತಿದ್ದಾರೆ. ಹೀಗಾಗಿ ಶಾಲಾ ದಾಖಲಾತಿ ಕಡಿಮೆಯಾಗುತ್ತಿದೆ.

ಹಳೆಯ ಕಟ್ಟಡ ಅರೆಬರೆ ಬೀಳಿಸಲಾಗಿದ್ದರಿಂದ ಅತ್ತ ಅಪಾಯವಿದೆ ಎಂದು ಸಾರುವ ಫಲಕ ನೇತು ಹಾಕಲಾಗಿದೆಯೇ ಹೊರತು ಹೊಸ ಕಟ್ಟಡ ನಿರ್ಮಾಣವೇ ಆಗುತ್ತಿಲ್ಲ, ಅರೆಬರೆ ಕಟ್ಟಡದಿಂದಾಗಿ ಮಕ್ಕಳಿಗೆ ಅತ್ತಿತ್ತ ಸುಳಿಯದಂತೆ ಹಿಡಿದು ಇಡುವುದೇ ಇಲ್ಲಿನ ಶಿಕ್ಷಕರಿಗೆ ನಿತ್ಯದ ಕೆಲಸವಾಗಿದೆ.ಶಾಲಾ ಕಟ್ಟಡ ಅರೆಬರೆಯಾಗಿ ಬೀಳಿಸಲಾಗಿದ್ದು, ಕಳಪೆ ಕಾಮಗಾರಿ, ತೇವ ಹಿಡಿದ ಸಂಗತಿಗಳನ್ನೆಲ್ಲ ಮೇಲಾಧಿಕಾರಿಗಳಿಗೆ ತಿಳಿಸಿರುವೆ. ನಮಗೆ ಇಲ್ಲಿ ಮಕ್ಕಳನ್ನು ಅತ್ತಿತ್ತ ಹೋಗದಂತೆ ಹಡಿಯೋದೇ ಆಗಿದೆ. ಪೋಷಕರು ಗಾಬರಿಯಲ್ಲಿ ಮಕ್ಕಳನ್ನು ಬೇರೆ ಶಾಲೆಗಳಿಗೆ ಕರೆದೊಯ್ಯುತ್ತಿದ್ದಾರೆ.

- ಸೀತಾರಾಮ್ ಕುಲಕರ್ಣಿ, ಶಾಲಾ ಮುಖ್ಯಶಿಕ್ಷಕ

Share this article