ಶಾಲಾ ವಾಹನ ಪಲ್ಟಿ: ಪ್ರಾಣಾಪಾಯದಿಂದ ಪಾರಾದ 27 ಮಕ್ಕಳು

KannadaprabhaNewsNetwork | Published : Mar 19, 2024 12:48 AM

ಸಾರಾಂಶ

ಪರೀಕ್ಷೆ ಬರೆಯಲು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಓಮಿನಿ ಕಾರೊಂದು ಪಲ್ಟಿಯಾಗಿ ಮಕ್ಕಳು ಗಾಯಗೊಂಡಿರುವ ಘಟನೆ ಸಮೀಪದ ವಿಠಲಾಪೂರ ಕೆರೆ ಸಮೀಪ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ಪರೀಕ್ಷೆ ಬರೆಯಲು ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಓಮಿನಿ ಕಾರೊಂದು ಪಲ್ಟಿಯಾಗಿ ಮಕ್ಕಳು ಗಾಯಗೊಂಡಿರುವ ಘಟನೆ ಸಮೀಪದ ವಿಠಲಾಪೂರ ಕೆರೆ ಸಮೀಪ ಸೋಮವಾರ ನಡೆದಿದೆ.

ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ, ಹಿರೇಮಾದಿನಾಳ ಗ್ರಾಮಗಳಿಂದ ಮಕ್ಕಳನ್ನು ಓಮಿನಿ ಕಾರಿನಲ್ಲಿ ಕರೆದುಕೊಂಡು ಗಂಗಾವತಿ ತಾಲೂಕಿನ ಗಡ್ಡಿ ಗ್ರಾಮದ ಸದ್ಧರ್ಮ ಗುರುಕುಲ ಶಾಲೆಗೆ ತೆರಳುತ್ತಿರುವಾಗ ವಿಠಲಾಪುರ ಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಭತ್ತದ ಗದ್ದೆಗೆ ವಾಹನ ಬಿದ್ದಿದ್ದು, 27 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಚಾಲಕ ಮೊಬೈಲ್ ನೋಡುತ್ತ ವಾಹನ ಚಲಾಯಿಸುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಗ್ರಾಮಸ್ಥರು, ಪಾಲಕರು ಆರೋಪಿಸಿದ್ದಾರಲ್ಲದೇ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಗಾಯಗೊಂಡಿರುವ ಮಕ್ಕಳನ್ನು ಪಾಲಕರು ಖಾಸಗಿ ಹಾಗೂ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚಿಕ್ಕಮಾದಿನಾಳ ಗ್ರಾಮದಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರ ಜಂಟಿ ಸಭೆ ನಡೆದಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ನಿರ್ಲಕ್ಷ್ಯದ ಚಾಲನೆ, ಬೇಜವಾಬ್ದಾರಿ ವರ್ತನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

೧೧೨ ಪೊಲೀಸ ವಾಹನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ವಿಚಾರ ಕನಕಗಿರಿ ಪೊಲೀಸ್ ಠಾಣಾ ಮೆಟ್ಟಿಲೇರಿದೆಯಾದರೂ ಯಾವುದೇ ಪ್ರಕರಣ ದಾಖಲಾಗಿಲ್ಲ. ವ್ಯಾನ್ ಪಲ್ಟಿಯಾಗಿರುವ ಕುರಿತು ಮಾಹಿತಿ ಬಂದಿದೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನದ ಎಲ್ಲಾ ದಾಖಲಾತಿ ಪರಿಶೀಲಿಸಿ, ಕ್ರಮವಹಿಸಲಾಗುವುದು ಎಂದು ಬಿಇಒ ವೆಂಕಟೇಶ ರಾಮಚಂದ್ರಪ್ಪ ತಿಳಿಸಿದ್ದಾರೆ.ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ:ಕಾರಟಗಿಯ ಹೊರವಲಯದ ಜಮೀನಿನಲ್ಲಿ ಯುವಕನೊಬ್ಬನ ಮೃತದೇಹ ನೇಣು ಹಾಕಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಸಲೀಂ ದಾವಲಸಾಬ್ ಕಳ್ಳಿಮನಿ(೨೬) ಮೃತನು. ಇಲ್ಲಿನ ಜೆಪಿ ನಗರದ ಮದೀನಾ ಮಸೀದಿ ಬಳಿ ವಾಸಿಸುತ್ತಿದ್ದ. ಅದೇ ನಗರದಲ್ಲಿನ ಯುವತಿಯೊಬ್ಬಳ್ಳನ್ನು ಕಳೆದ ಆರೇಳು ತಿಂಗಳ ಹಿಂದೆ ಪ್ರೀತಿಸಿ ಆಕೆಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಹೀಗಾಗಿ ಮನೆಯವರಿಂದ ದೂರ ಇದ್ದ. ಕಳೆದ ಭಾನುವಾರ ರಾತ್ರಿ ತಂದೆ ದಾವಲ್‌ಸಾಬ್ ಕಳ್ಳಿಮನಿಗೆ ಕರೆ ಮಾಡಿ ಇದು ನನ್ನ ಕೊನೆಯ ಕರೆಯೆಂದು ತಿಳಿಸಿ ಫೋನ್ ಸ್ವಿಚ್‌ ಆಫ್ ಮಾಡಿದ್ದ. ಮರುದಿನ ಬೆಳಗ್ಗೆ ಹೊರವಲಯದ ಜಮೀನಿನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ದೊರೆತಿದೆ.ಮಗನ ಸಾವು ಸಂಶಯದಿಂದ ಕೂಡಿದೆ ಎಂದು ಮೃತ ತಾಯಿ ನೂರ್‌ಜಾನ್ ಬೇಗಂ ದೂರಿನಲ್ಲಿ ತಿಳಿಸಿದ್ದಾಳೆ. ಮೃತ ಯುವಕನ ಮುಖ, ಎದೆಯ ಮೇಲೆ ಹೊಡೆದ ಗಾಯಗಳು ಕಂಡುಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article