ಕನ್ನಡಪ್ರಭ ವಾರ್ತೆ ಸುತ್ತೂರುಸುತ್ತೂರಿನ ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎಸ್ಸಿ, ಎಸ್ಪಿ ಯೋಜನೆಯಡಿಯಲ್ಲಿ ಬಾಳೆ ಬೆಳೆಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಡಾ. ಮಹದೇವಯ್ಯ ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ರೈತರು ವಿಜ್ಞಾನಿಗಳ ಸಲಹೆ ಮೇರಿಗೆ ಕೃಷಿ ಮಾಡಿ, ಉತ್ತಮ ಇಳುವರಿಯ ಬಾಳೆ ಬೆಳೆಯಿರಿ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ. ಎನ್. ಜ್ಞಾನೇಶ್ ಮಾತನಾಡಿ, ಪ್ರಸ್ತುತ ಹವಾಮಾನದ ವೈಪರೀತ್ಯದಿಂದ ಹಲವು ಬೆಳೆಗಳಲ್ಲಿ ಅನೇಕ ರೋಗಗಳು ಮತ್ತು ಕೀಟಗಳು ಬರುತ್ತಿವೆ. ಆದ್ದರಿಂದ ರೈತರು ವಿಜ್ಞಾನಿಗಳಿಂದ ವೈಜ್ಞಾನಿಕ ಸಲಹೆ ಪಡೆದು ಕೃಷಿ ಮಾಡಬೇಕು, ವಿವಿಧ ಬೆಳೆಗಳಿಗೆ ವೈಜ್ಞಾನಿಕ ಮಾಹಿತಿಯನ್ನು ಕೆವಿಕೆಗೆ ಬಂದು ಅಥವಾ ದೂರವಾಣಿ ಮುಖಾಂತರ ಸಲಹೆ ಸೂಚನೆ ಪಡೆದುಕೊಳ್ಳುವುದು ಸೂಕ್ತ ಎಂದು ತಿಳಿಸಿದರು. ಬಾಳೆ ಬೆಳೆಯು ನಮ್ಮ ಮೈಸೂರಿನ ಭೌಗೋಳಿಕ ಬೆಳೆ ಆದ್ದರಿಂದ ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಈ ತರಬೇತಿ ಕಾರ್ಯಕ್ರಮ ಮಾಡುತ್ತಿದ್ದೇವೆ, ರೈತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಷಯ ತಜ್ಞ ಡಾ. ಜಿ.ಎಂ. ವಿನಯ್ ಅವರು ತಾಂತ್ರಿಕ ಅಧಿವೇಶನದಲ್ಲಿ ಮಾತನಾಡಿ, ಬಾಳೆ ಬೆಳೆಯಲ್ಲಿ ಭೂಮಿ ಸಿದ್ಧತೆ, ತಳಿಗಳ ಆಯ್ಕೆ, ನಂಜನಗೂಡು ರಸಬಾಳೆಯ ಪ್ರಾಮುಖ್ಯತೆ, ಕಂದುಗಳ ಆಯ್ಕೆ, ಜೈವಿಕ ಗೊಬ್ಬರಗಳ ಬಳಕೆ, ಟಿಶ್ಯೂ ಬಾಳೆಯ ಬಳಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕಳೆ ನಿರ್ವಹಣೆ, ಬಾಳೆ ಸಮೃದ್ಧಿ ಬಳಕೆ, ಸಸ್ಯ ಪ್ರಚೋದಕಗಳ ಬಳಕೆ ಹಾಗೂ ಬಾಳೆ ಬೆಳೆಯಲ್ಲಿ ಅಧಿಕ ಇಳುವರಿಯನ್ನು ಪಡೆಯುವ ಸುಲಭ ಮಾರ್ಗಗಳನ್ನು ರೈತರಿಗೆ ತಿಳಿಸಿದರು.ಸಸ್ಯಸಂರಕ್ಷಣೆ ವಿಷಯತಜ್ಞ ಡಾ. ವೈ.ಪಿ. ಪ್ರಸಾದ್ ಮಾತನಾಡಿ, ಬಾಳೆ ಬೆಳೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಸೊರಗು ರೋಗ, ಎಲೆ ಚುಕ್ಕೆ ರೋಗ, ಬಂಚಿ ಟಾಪ್ ರೋಗಗಳ ಲಕ್ಷಣಗಳು, ಅವುಗಳ ಗುರುತಿಸುವಿಕೆ ಹಾಗೂ ಸಮಗ್ರ ರೋಗ ನಿರ್ವಹಣೆ ಜೊತೆಗೆ ಬಾಳೆಯಲ್ಲಿ ಹೆಚ್ಚಾಗಿ ಕಾಣುವ ಕಾಂಡ ಹಾಗೂ ಗೆಡ್ಡೆಕೊರೆಯುವ ಹುಳು, ಜಂತು ಹುಳು, ಎಲೆ ತಿನ್ನುವ ರಸ ಹೀರುವ ಕೀಟಗಳ ಲಕ್ಷಣಗಳ, ಗುರುತಿಸುವಿಕೆ ಹಾಗೂ ಸಮಗ್ರ ನಿರ್ವಹಣೆ ಕುರಿತು ಹಾಗೂ ಜೈವಿಕ ಕೀಟ ನಾಶಕ ಬಳಕೆ ಬಗ್ಗೆ ಮಾಹಿತಿ ನೀಡಿದರು.ಗೃಹ ವಿಜ್ಞಾನ ವಿಷಯತಜ್ಞ ಡಾ. ದೀಪಕ ಬಾಳೆಯಲ್ಲಿ ಮೌಲ್ಯವರ್ಧನೆ ಕುರಿತು ಮಾತನಾಡಿ, ಬಾಳೆ ಹಣ್ಣನ್ನು ಉಪಯೋಗಿಸಿಕೊಂಡು ಬಾಳೆ ಹುಡಿ ಹಾಗೂ ಅದರ ಇತರ ಉತ್ಪನ್ನಗಳ ಕುರಿತು, ಬಾಳೆ ಚಿಪ್ಸ್, ಬಾಳೆ ಜಾಮ್, ಬಾಳೆ ಹಣ್ಣಿನಿಂದ ತಯಾರು ಮಾಡಬಹುದಾದ ಇತರ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.ರೈತ ಹಾಗೂ ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು, ಇದರಲ್ಲಿ ರೈತರು ಪ್ರಸ್ತುತ ಬಾಳೆಯಲ್ಲಿ ಬರುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿ ವಿಜ್ಞಾನಿಗಳಿಂದ ಸಲಹೆ ಪಡೆದರು, ಪ್ರಗತಿಪರ ಬಾಳೆ ರೈತರು ತಮ್ಮ ಬಾಳೆ ಬೆಳೆಯ ಅನುಭವಗಳನ್ನು ಇತರೆ ರೈತರೊಂದಿಗೆ ಹಂಚಿಕೊಂಡರು. ನಂತರ ಕೃಷಿ ವಿಜ್ಞಾನ ಕೇಂದ್ರದ ಬಾಳೆಯ ನಿಖರ ಕೃಷಿ ತಾಕಿಗೆ ಭೇಟಿ ನೀಡಿ ಮಾಹಿತಿ ಪಡೆದರು.ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಿಂದ ರೈತರು ಈ ಕಾರ್ಯಕ್ರಮಕ್ಕೆ ಆಗಮಿಸಿ ಸದುಪಯೋಗ ಪಡೆದುಕೊಂಡರು.