ಕನ್ನಡಪ್ರಭ ವಾರ್ತೆ ಬ್ಯಾಡಗಿ
ನಾವೆಲ್ಲರೂ ಪ್ರಕೃತಿಯ ಭಾಗವಾಗಿದ್ದೇವೆ. ತ್ಯಾಜ್ಯ ನಿರ್ವಹಣೆ ಸಮಸ್ಯೆ ಪೆಡಂಭೂತವಾಗಿ ನಮ್ಮನ್ನು ಕಾಡುತ್ತಿದ್ದು, ಬೃಹತ್ ನಗರಗಳಿಗೆ ಸೀಮಿತವಾಗಿದ್ದ ಸಮಸ್ಯೆ ಜನಸಂಖ್ಯೆ ಹೆಚ್ಚಾದಂತೆ ಗ್ರಾಮೀಣ ಪ್ರದೇಶಗಳಿಗೂ ಆವರಿಸಿದೆ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಮ್ಮೆಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದ್ದು ವೈಜ್ಞಾನಿಕ ನಿರ್ವಹಣೆ ಅನಿವಾರ್ಯ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ಕೆಂಗೊಂಡ ಗ್ರಾಮದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ಉದ್ಘಾಟನೆ ಹಾಗೂ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಘನತ್ಯಾಜ್ಯ ನಿರ್ವಹಣೆ ನಿರ್ಲಕ್ಷ್ಯದಿಂದಾಗಿ ಬಹಳಷ್ಟು ರೋಗಗಳನ್ನು ನಾವೆಲ್ಲರೂ ಆಹ್ವಾನಿಸುತ್ತಿದ್ದೇವೆ. ಅದರಿಂದಾಗುವ ಅಡ್ಡ ಪರಿಣಾಮಗಳು ಹಿಂದೆಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ವೇಗವನ್ನು ಹೆಚ್ಚಿಸಿಕೊಂಡಿದ್ದು ಅದನ್ನು ತಡೆಗಟ್ಟಲು ನಾವೆಲ್ಲರೂ ಸಾಮೂಹಿಕ ಹೊಣೆಗಾರಿಕೆ ತೋರಬೇಕಾಗಿದೆ ಎಂದರು.ಹೆಚ್ಚುತ್ತಿರುವ ಜನಸಂಖ್ಯೆಯಿಂದ ಹೆಚ್ಚಿದ ತ್ಯಾಜ್ಯ ಎಲ್ಲೆಂದರಲ್ಲಿ ಸಂಗ್ರಹವಾಗುತ್ತಿದೆ. ವೈಜ್ಞಾನಿಕ ನಿರ್ವಹಣೆಯಿಂದ ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿರಿಸಬಹುದು. ಅಷ್ಟೇ ಏಕೆ ಕಾಂಪೋಸ್ಟಿಂಗ್ ಲ್ಯಾಂಡ್ ಫಿಲ್‌ಗಳಲ್ಲಿ ಮರುಬಳಕೆಗೆ ಅವಕಾಶ ಸಿಗಲಿದ್ದು, ಇದರಿಂದ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತನೆ ಮಾಡಬಹುದಾಗಿದ್ದು ತ್ಯಾಜ್ಯವನ್ನು ಸಂಗ್ರಹಿಸುವ ಸಾಗಿಸುವ ಮತ್ತು ಸಂಸ್ಕರಣೆ ಮಾಡುವ ಹೊಣೆಗಾರಿಕೆ ಗ್ರಾಪಂಗಳ ಮೇಲಿದೆ ಎಂದರು.
ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಾವೆಲ್ಲರೂ ನಿರ್ದಿಷ್ಟವಾದ ಗುರಿ ಇಟ್ಟುಕೊಳ್ಳಬೇಕಾಗಿದೆ. ಸಾರ್ವಜನಿಕ ಪ್ರದೇಶಗಳಿಂದ ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲು ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದ್ದು ಅದನ್ನು ಸಂಗ್ರಹಿಸಲು ಪ್ರತ್ಯೇಕ ಘಟಕ ಆರಂಭಿಸಬೇಕಾಗಿದೆ. ಸರ್ಕಾರದ ಅನುದಾನದಲ್ಲಿ ಇವೆಲ್ಲವನ್ನೂ ಮಾಡಿಕೊಳ್ಳಬಹುದಾಗಿದ್ದರೂ ಸಹ ಅದಕ್ಕಾಗಿ ಗ್ರಾಮಸ್ಥರು ಅತಿಕಡಿಮೆ ಹಣವನ್ನು ಪಂಚಾಯಿತಿಗೆ ಸಲ್ಲಿಸಬೇಕಾಗಿದ್ದು ಯಾರೂ ಸಹ ಪ್ರಶ್ನಿಸದೇ ಹಣ ನೀಡುವಂತೆ ಮನವಿ ಮಾಡಿದರು. ಗ್ರಾಮಸ್ಥರು ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ತಮ್ಮಲ್ಲೇ ಸಂಗ್ರಹಿಸಿಟ್ಟುಕೊಂಡು ಪಂಚಾಯಿತಿ ವಾಹನದಲ್ಲಿ ವಿಲೇವಾರಿ ಮಾಡಬೇಕು. ಅಂದಾಗ ಮಾತ್ರ ಸದರಿ ಯೋಜನೆ ಅತ್ಯಂತ ಯಶಸ್ವಿಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ದಾನಪ್ಪ ಚೂರಿ, ನಾಗರಾಜ ಆನ್ವೇರಿ, ಬಸವರಾಜ ಕೋಣನವರ, ಶಿವಪುತ್ರಪ್ಪ ಅಗಡಿ, ಚಂದ್ರು ಕೆಂಗೊಂಡ, ಕಲ್ಲೇದೇವರ ಗ್ರಾಮ ಪಂಚಾಯಿತಿ ಪಿಡಿಒ ಮಲ್ಲೇಶ ಮೋಟೆನವರ ಅಧ್ಯಕ್ಷರು, ಸದಸ್ಯರು ಮತ್ತು ಕೆಂಗೊಂಡ ಗ್ರಾಮಸ್ಥರು ಉಪಸ್ಥಿತರಿದ್ದರು.