ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಸ್ಯಶಾಸ್ತ್ರದಲ್ಲಿ ವಿಶೇಷ ಆಸಕ್ತಿ, ಪರಿಸರ ಕಾಳಜಿ, ನೂರಾರು ಅಭಿರುಚಿ, ಆಳ ಅಭ್ಯಾಸದಿಂದ ತನ್ನ ಯೋಚನೆ, ಯೋಜನೆಗಳನ್ನು ಅನುಷ್ಠಾನಗೊಳಿಸಿದವರು ಡಾ. ಯಶೋವರ್ಮ ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದ್ದಾರೆ.ಉಜಿರೆಯ ಎಸ್. ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗು ಶಿಕ್ಷಣ ತಜ್ಞ ದಿ. ಡಾ. ಬಿ.ಯಶೋವರ್ಮ ಅವರ ಸ್ಮರಣಾರ್ಥ ಶನಿವಾರ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಎಸ್ ಡಿ.ಎಂ.ಕಾಲೇಜಿನ ಸಸ್ಯೋದ್ಯಾನ ಆರ್ಬೊರೇಟಮ್ ಗೆ ‘ಯಶೋವನ’ ಎಂದು ಮರುನಾಮಕರಣಗೊಳಿಸಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಇಂಡೋನೇಷ್ಯಾ ಪ್ರವಾಸದ ವೇಳೆ ಕಂಡ ‘ಗೇಟ್ ಓಫ್ ಹೆವನ್’ ದ್ವಾರದ ಪ್ರೇರಣೆಯಿಂದ ಸ್ವರ್ಗದ ಬಾಗಿಲು ಪರಿಕಲ್ಪನೆಯಲ್ಲಿ ‘ಯಶೋವನ’ದ ಮಹಾದ್ವಾರವನ್ನು ಆಕರ್ಷಕವಾಗಿ ರಚಿಸಲಾಗಿದೆ. ಸಸ್ಯಗಳ ರಕ್ಷಣೆಯ ಪ್ರಾಮುಖ್ಯತೆಯಿಂದ ಅದರ ಬಗ್ಗೆ ವಿಶೇಷ ಆಸಕ್ತಿ, ಕುತೂಹಲ ಯಶೋವರ್ಮರಿಗಿತ್ತು. ಅವರು ಶಿಕ್ಷಣ ಸಂಸ್ಥೆಯಲ್ಲಿ ಅನೇಕ ಪರಿವರ್ತನೆಗಳಿಗೆ ಕಾರಣರಾಗಿದ್ದಾರೆ ಎಂದರುಡಾ. ಹೇಮಾವತಿ ಹೆಗ್ಗಡೆ ಆಯ್ದ ಹಲವರಿಗೆ ಸಸ್ಯಗಳನ್ನು ವಿತರಿಸಿದರು. ಮಂಗಳೂರು ವಿ.ವಿ. ಉಪಕುಲಪತಿ ಪ್ರೊ. ಪಿ. ಎಲ್. ಧರ್ಮ, ಎಸ್ ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ಚಂದ್ರ ಎಸ್, ಸೋನಿಯಾ ವರ್ಮ, ಎಸ್ ಡಿ.ಎಂ.ಐ. ಟಿ. ವಿಭಾಗದ ಸಿ ಇ ಓ ಪೂರಣ್ ವರ್ಮ ಹಾಜರಿದ್ದರು. ಕಾಲೇಜು ಪ್ರಾಚಾರ್ಯ ಡಾ. ಕುಮಾರ ಹೆಗ್ದೆ ಸ್ವಾಗತಿಸಿದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕೇಯೂರು ವರ್ಮ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ, ಕಾಲೇಜು ಡೀನ್ ಡಾ. ವಿಶ್ವನಾಥ್, ಡಾ. ಚಿನ್ನಪ್ಪ ಗೌಡ, ಕೆ. ಎನ್ ಜನಾರ್ದನ್, ಬಿ.ಕೆ.ಧನಂಜಯ ರಾವ್, ಕೆ.ಮೋಹನ್ ಕುಮಾರ್ , ಕಾವೇರಪ್ಪ, ರಾಜೇಶ್ ಪೈ, ಅರುಣಕುಮಾರ್ , ಗಣ್ಯ ನಾಗರಿಕರು, ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಇದ್ದರು.ಯಶೋವನದಲ್ಲಿ ಏನಿದೆ ?
1999 ರಲ್ಲಿ ಡಾ. ಬಿ.ಯಶೋವರ್ಮ ಅವರ ವಿಶೇಷ ಕಾಳಜಿ ಹಾಗು ಮುತುವರ್ಜಿಯಿಂದ ಆರಂಭಗೊಂಡ ಅಪರೂಪದ ಸಸ್ಯ ಪ್ರಭೇದಗಳ ಸಸ್ಯೋದ್ಯಾನವೇ ಇಂದಿನ ಯಶೋವನ. ಪಶ್ಚಿಮ ಘಟ್ಟದ ಅಪರೂಪದ ಸಸ್ಯ ಸಂಕುಲ, ಔಷಧೀಯ ಗುಣಗಳ ತಳಿಗಳನ್ನು ಸಂರಕ್ಷಿಸಿ ದಾಖಲಿಸುವ ಪ್ರಯತ್ನವಾಗಿ ಉಜಿರೆಯ ಸಿದ್ದವನ ಬಳಿ ಸುಮಾರು 8 ಎಕ್ರೆ ಪ್ರದೇಶದಲ್ಲಿ ಸಸ್ಯ ಸಂರಕ್ಷಣಾ ವನ ಪ್ರಾರಂಭಿಸಲಾಗಿತ್ತು.ಇದರಲ್ಲಿ ಸುಮಾರು 1116 ಮರಗಳಿದ್ದು ಅವುಗಳನ್ನು ಪವಿತ್ರವನ , ನಕ್ಷತ್ರವನ, ನವಗ್ರಹ ವನ, ತೀರ್ಥಂಕರ ವನ, ಅಶೋಕವನ, ಪಂಪವನ, ಕುವೆಂಪು ವನ, ಅಂಬಿಕಾವನ, ಗಣೇಶವನ, ಶಿವಪಂಚಾಯತವನ, ಸತ್ಯನಾರಾಯಣ ಪೂಜಾವನಗಳೆಂದು ಹೆಸರಿಸಲಾಗಿದ್ದು ತೋಟಗಾರಿಕಾ ಸಸ್ಯಗಳ ವನ, ಮನೆಮದ್ದು ಗಿಡಗಳ ವನ, ದೇಶೀ ಹಾಗು ವಿದೇಶಿ ಹಣ್ಣಿನ ಗಿಡಗಳ ವನ, ತ್ರಿಫಲಾ ವನ, ಸಪ್ತವರ್ಣಿ ವೃಕ್ಷಗಳ ಸಾಲುಮರಗಳು, ತೂಗುವ ಉದ್ಯಾನ, 500ಕ್ಕೂ ಮಿಕ್ಕಿ ವಿವಿಧ ಜಾತಿಯ ಸಸ್ಯ ಪ್ರಭೇದಗಳು, 850 ಮೀಟರ್ ಉದ್ದದ ಪಾದಚಾರಿ ಮಾರ್ಗ, ಅಲ್ಲಲ್ಲಿ ಮಾಹಿತಿ ಫಲಕಗಳು , ಹೊಸ ಹೊಸ ಸಸ್ಯಗಳ ಸೇರ್ಪಡೆಗೊಂಡಿವೆ.
ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಅಧ್ಯಯನ, ಸಂಶೋಧ ನೆಗಳಿಗೆ ವಿಫುಲ ಅವಕಾಶ ಕಲ್ಪಿಸಲಾಗಿದೆ. ಡಾ.ಯಶೋವರ್ಮರ ಪರಿಸರ ಕಾಳಜಿಯ ದ್ಯೋತಕವಾಗಿ ಸಸ್ಯೋದ್ಯಾನ ಕ್ಕೆ ‘ಯಶೋವನ’ ಮರುನಾಮಕರಣ ಗೊಳಿಸಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಿದೆ.