ಕನ್ನಡಪ್ರಭ ವಾರ್ತೆ ಕಲಬುರಗಿ
ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟದ ಬಾಂಬರ್ ಬಳ್ಳಾರಿಯಿಂದ ಬಸ್ ಹತ್ತಿ ಕಲಬುರಗಿಗೆ ಬಂದಿದ್ದನೆಂಬ ಬಲವಾದಂತಹ ಶಂಕೆಗಳ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡ ಶನಿವಾರ ಕಲಬುರಗಿಗೆ ಬಂದು ಇಡೀ ದಿನ ಸ್ಥಳೀಯ ಪೊಲೀಸರ ನೆರವಿನಿಂದ ತೀವ್ರ ಶೋಧ ನಡೆಸಿದೆ.
ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಕೆಲವು ಲಾಡ್ಜ್ ಗಳಲ್ಲಿ ಎನ್‍ಐಎ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ನಡೆಸಿದೆ.ಇದೇ ವೇಳೆ ಬಸ್‌ನಿಲ್ದಾಣದಲ್ಲಿರುವ 15 ಕ್ಕೂ ಹೆಚ್ಚು ಹಾಗೂ ರೇಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿರುವ 20 ಕ್ಕೂ ಹೆಚ್ಚು ಸೀಸೀಟೀವಿ ಕೆಮೆರೆ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡಿದೆಯಲ್ಲದೆ, ಇದರಲ್ಲೆ ಮಹತ್ವದ್ದೆನ್ನಬಹುದಾದ ದೃಶ್ಯಾವಳಿಗಳನ್ನೆಲ್ಲ ಜಪ್ತಿ ಮಾಡಿಕೊಂಡಿದೆ.
ಇಲ್ಲಿನ ರೈಲ್ವೆ ನಿಲ್ದಾಣದಲ್ಲಿನ ಎಲ್ಲಾ ಸಿಸಿಟಿವಿ ದೃಶ್ಯಾವಳಿ ಗಳನ್ನು ಎನ್ ಐ ಎ ಅಧಿಕಾರಿಗಳ ತಂಡ ಪರಿಶೀಲಿಸುತ್ತಿದ್ದಾರೆ. ಜೊತೆಗೆ ಸ್ಟೇಷನ್ ಬಜಾರ್ ಎಲ್ಲಾ ಲಾಡ್ಜ್ ಗಳನ್ನು ಸಹ ಎನ್‌ಐಎ ತಂಡ ಒಂದು ಸುತ್ತು ಪರಿಶೀಲಿಸಿದೆ.
ಮೂಲಗಳ ಪ್ರಕಾರ ರೇಲ್ವೆ ನಿಲ್ದಾಣದ ಮುಂದಿರುವ ರೇಲ್ವೆ ಪ್ರೊಟೆಕ್ಷನ್ ಫೋರ್ಸ್‌ನ ಕಚೇರಿಯಲ್ಲಿರುವ ಎಲ್ಲಾ ಸೀಸಿಟೀವಿಗಳ ಮುಖ್ಯ ನಿಯಂತ್ರಣ ಪ್ಯಾನಲ್‌ನಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನೆಲ್ಲ ತಂಡ ವೀಕ್ಷಣೆ ಮಾಡಿದೆ.
ಕಲಬುರಗಿಯಲ್ಲಿನ ಸೀಸೀಟೀವಿ ದೃಶ್ಯಾವಳಿಗಳಲ್ಲಿ ಕ್ಯಾಪ್ ಧರಿಸಿರುವ, ನೇರಳೆ ಬಣ್ಣದ ಟೀ ಶರ್ಟ್ ಹಾಕಿಕೊಂಡಿರುವ ವ್ಯಕ್ತಿಯು ಗೋಚರಿಸಿದ್ದಾನೆ. ಈ ವ್ಯಕ್ತಿಯೇ ಕೆಫೆ ಬಾಂಬರ್ ಆಗಿರುವ ಸಾಧ್ಯತೆಗಳಿರೋದರಿಂದ ಎನ್‌ಐ ತಂಡದ ಅಧಿಕಾರಿಗಳು ಬಾಂಬರ್‌ನ ರೂಟ್ ಮ್ಯಾಪಿಂಗ್ ಮಾಡುವಲ್ಲಿ ತಲ್ಲೀನರಾಗಿದ್ದಾರೆ.
ಕಲಬುರಗಿಯಲ್ಲಂತೂ ಕೇಂದ್ರ ಬಸ್ ನಿಲ್ದಾಣದಲ್ಲಿ ಎನ್‌ಐಎ ತಂಡದ ಅಧಿಕಾರಿಗಳು ಬಾಂಬರ್ ಬಳ್ಳಾರಿಯಿಂದ ಬಸ್ ಹತ್ತಿ ಕಲಬರಗಿಗೆ ಬಂದಿರಬಹುದಾದ ಶಂಕಿತ ಬಸ್‌ನ ಚಾಲಕ, ನಿಹ್ವಾಕರನನ್ನೂ ವಿಚಾರಣೆಗೊಳಪಡಿಸಿದ್ದಾರೆ.
ಟಿಕೆಟ್ ನೀಡುವಾಗ, ಬಸ್‌ನಲ್ಲಿ ನೇರಳಿ ಬಣ್ಣದ ಟೀ ಶರ್ಟ್ ಧಾರಿ, ತಲೆ ಮೇಲೆಕ್ಯಾಪ್ ಹಾಕೊಂಡ ವ್ಯಕ್ತಿಯನ್ನು ಗಮನಿಸಿದ್ದೀರಾ? ಎಂದೆಲ್ಲಾ ಅಧಿಕಾರಿಗಳು ವಿಚಾರಣೆ ಕಾಲದಲ್ಲಿ ಪ್ರಶ್ನಿಸಿ ಮಾಹಿತಿ ಪಡೆದಿದ್ದಾರೆಂದು ಗೊತ್ತಾಗಿದೆ.
ಎನ್‌ಐ ತಂಡದ ಇನ್ನೊಂದು ಅಧಕಾರಿ ತಂಡದವರು ಬಾಂಬರ್ ಬಲ್ಳಾರಿಯಿಂದ ಹುಬ್ಬಳ್ಳಿಗೆ ಹೋಗಿ ಅಲ್ಲಿಂದ ರೈಲಿನ ಮೂಲಕ ಕಲಬುರಗಿಗೆ ಬಂದಿರುವ ಶಂಕೆ ವ್ಯಕ್ತಪಡಿಸಿರೋದರಿಂದ ರೈಲ್ವೇ ನಿಲ್ದಾಣದಲ್ಲಿಯೂ ಇಂದು ಸೀಸೀಟೀವಿ ಫೂಟೇಜ್‌ಗಳನ್ನೆಲ್ಲ ಅಮಲಾಗ್ರವಾಗಿ ಎನ್‌ಐ ತಂಡದವರು ವೀಕ್ಷಣೆ ಮಾಡಿದ್ದಾರೆ.
ಬಾಂಬರ್ ಜಾಡು ಹಿಡಿದು ಕಲಬುರಗಿ ಬಸ್ ನಿಲ್ದಾಣ ಒಂದರಲ್ಲೇ ಎನ್‌ಐಎ ತಂಡದವರು 18 ರಿಂದ 30 ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿ, ಅವನ್ನು ಎಲ್ಲಾ ವಶಕ್ಕೆ ಪಡೆದಿದ್ದಾರೆಂದು ಗೊತ್ತಾಗಿದೆ. ಇನ್ನು ರಲ್ವೆ ನಿಲ್ದಾಣದಲ್ಲಿಯೂ 15ಕ್ಕೂ ಹೆಚ್ಚು ಸೀಸಿಟೀವಿ ದೃಶ್ಯಗಳನ್ನು ಪರಿಶೀಲಿಸಲಾಗಿದ್ದು ಅಲ್ಲಿಯೂ ಕೆಲವನ್ನು ವಶಕ್ಕೆ ಪಡೆದಿದ್ದಾರೆ.
ಮಾರ್ಚ್ ಒಂದರಂದು ಬೆಂಗಳೂರಿನ ವೈಟ್‍ಫಿಲ್ಡ್ ಪ್ರದೇಶದಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ನಡೆದಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದನ್ನು ಇಲ್ಲಿ ಸ್ಮರಿಸಬಹುದು.