ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಸ್ಥಳೀಯ ಸಂಸ್ಥೆಗಳಿಂದ ಹಿಡಿದು ಸಂಸತ್ ಚುನಾವಣೆವರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಲೇ ಬಂದಿದ್ದವು. ಆದರೀಗ ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಇಲ್ಲದೆ ಚುನಾವಣೆಗೆ ಅಖಾಡ ಸಜ್ಜುಗೊಳ್ಳುತ್ತಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಸಾಧಿಸಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಬಿಜೆಪಿ ಪಾಳಯಕ್ಕೆ ಬಿಟ್ಟುಕೊಟ್ಟಿದೆ. ಮಾಜಿ ಪ್ರಧಾನಿ ದೇವೇಗೌಡರವರ ಅಳಿಯ, ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್ .ಮಂಜುನಾಥ್ ತೆನೆ ಭಾರ ಹೊರದೆ ಕಮಲ ಹಿಡಿದು ರಣರಂಗ ಪ್ರವೇಶಿಸಿದ್ದಾರೆ.ಜಿಲ್ಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿಯ ಹೋರಾಟ ನಡೆಸುತ್ತಾ ಬಂದಿದ್ದ ಜೆಡಿಎಸ್ - ಕಾಂಗ್ರೆಸ್ ಪಕ್ಷಗಳ ಮೈತ್ರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ತಂದುಕೊಟ್ಟಿತ್ತು. ಆದರೆ, ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಮೈತ್ರಿಕೂಟ ಸೇರಿ ಕೊಂಡಿದ್ದು, ಕಾಂಗ್ರೆಸ್ ಒಂಟಿಯಾಗಿ ಚುನಾವಣೆ ಎದುರಿಸುತ್ತಿದೆ.
ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಜೆಡಿಎಸ್‌ಗೆ ಹೆಚ್ಚೇನು ನಷ್ಟವಾದಂತೆ ತೋರುತ್ತಿಲ್ಲ. ಏಕೆಂದರೆ ಕಳೆದ ಎರಡು ಚುನಾವಣೆಗಳಲ್ಲಿ ಇಲ್ಲಿ ಪಕ್ಷದ ಹಿಡಿತ ಸಡಿಲಗೊಳ್ಳುತ್ತಲೇ ಬಂದಿದೆ.2008ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವು ರಚನೆಯಾದ ಬಳಿಕ ನಡೆಯುತ್ತಿರುವ 5ನೇ ಲೋಕಸಭಾ ಚುನಾವಣೆಯು ಇದಾಗಿದೆ. ಈ ಹಿಂದೆ ಇಲ್ಲಿ ಮೂರು ಸಾರ್ವತ್ರಿಕ ಚುನಾವಣೆಗಳು ಹಾಗೂ ಒಂದು ಉಪ ಚುನಾವಣೆ ನಡೆದಿತ್ತು. ಮೊದಲ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದರೆ, ಇನ್ನೆರಡು ಚುನಾವಣೆಗಳಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ್ದರು. ಆ ಚುನಾವಣೆಯಲ್ಲಿ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಹಾಗೂ ಕಾಂಗ್ರೆಸ್ ನ ತೇಜಸ್ವಿನಿ ಗೌಡ ಎದುರಾಳಿಯಾಗಿದ್ದರು. ಕುಮಾರಸ್ವಾಮಿ ಅವರು ಬರೋಬ್ಬರಿ 1.30 ಲಕ್ಷ ಮತಗಳ ಅಂತರದಿಂದ ಗೆದ್ದು ಎರಡನೇ ಬಾರಿಗೆ ಸಂಸದರಾದರು.ಕುಮಾರಸ್ವಾಮಿ 2013ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಕಾರಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗಾಗಿ ಉಪ ಚುನಾವಣೆ ಎದುರಾಯಿತು. ಈ ಚುನಾವಣೆಯಲ್ಲಿ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಅವರನ್ನೇ ಕಣಕ್ಕೆ ಇಳಿಸಿದರು. ಕೇವಲ ಆರು ತಿಂಗಳ ಆಡಳಿತಾವಧಿಗಾಗಿ ನಡೆದ ಚುನಾವಣೆಯಾದ್ದರಿಂದ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಹೀಗಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಕೆ. ಸುರೇಶ್ 1,37,007 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಸಂಸದರಾದರು. ಜೆಡಿಎಸ್ ಎರಡನೇ ಸ್ಥಾನಕ್ಕೆ ಕುಸಿಯಿತು.
2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಮತ್ತೊಮ್ಮೆ ಕೈ ಪಾಳಯದ ಅಭ್ಯರ್ಥಿಯಾದರು. ಬಿಜೆಪಿಯಿಂದ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್‌ನಿಂದ ಪ್ರಭಾಕರ ರೆಡ್ಡಿ ಸ್ಪರ್ಧೆ ಒಡ್ಡಿದ್ದರು. ಸುರೇಶ್ ಈ ಚುನಾವಣೆಯಲ್ಲಿ ತಮ್ಮ ಗೆಲುವಿನ ಅಂತರವನ್ನು 2,31,480 ಕ್ಕೆ ಏರಿಸಿಕೊಂಡರು. ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿಯಿತು.2019ರ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ರವರು 8,78,258 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣಗೌಡರವರು (ಪಡೆದ ಮತ - 6,71,388) 2,06,870 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಕನಕಪುರದಲ್ಲೂ ಜನತಾ ಪರಿವಾರದ ಛಾಪು :ಈ ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದಲ್ಲೂ ಕೆಲ ಚುನಾವಣೆಗಳಲ್ಲಿ ಜನತಾದಳ/ಜೆಡಿಎಸ್ ತನ್ನ ಛಾಪು ಮೂಡಿಸಿತ್ತು. ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಒಂದೊಂದು ಬಾರಿ ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿದ್ದರು.
1980 ರ ಚುನಾವಣೆಯಲ್ಲಿ ಜನತಾ ಪಾರ್ಟಿಯಿಂದ ಎಂ.ವಿ.ರಾಜಶೇಖರನ್ , ಜನತಾ ಪಾರ್ಟಿ (ಎಸ್ ) ಎಂ.ಪಿ.ಕೃಷ್ಣಪ್ಪ, 1984 ರಲ್ಲಿ ಜನತಾ ಪಾರ್ಟಿಯಿಂದ ಪಿಜಿಆರ್ ಸಿಂಧ್ಯಾ, 1989 ರಲ್ಲಿ ಜನತಾ ದಳದಿಂದ ಸಿ.ನಾರಾಯಣಸ್ವಾಮಿ, ಜನತಾ ಪಾರ್ಟಿ (ಜೆಪಿ)ಯಿಂದ ಲಕ್ಕೆಗೌಡ, 1991 ರಲ್ಲಿ ಜನತಾ ದಳದಿಂದ ಪಿಜಿಆರ್ ಸಿಂಧ್ಯಾ ಸ್ಪರ್ಧಿಸಿ ಸೋತಿದ್ದರು.1996ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಎಚ್.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಈ ಮೂಲಕ ಕಾಂಗ್ರೆಸ್‌ನ ಭದ್ರಕೋಟೆಯನ್ನು ಛಿದ್ರ ಮಾಡಿದ್ದರು. ಆದರೆ, ನಂತರದ ಚುನಾವಣೆಯಲ್ಲಿ ಅವರು ಠೇವಣಿ ಕಳೆದುಕೊಳ್ಳಬೇಕಾಯಿತು.
2002 ರ ಉಪ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರವರು ಡಿ.ಕೆ. ಶಿವಕುಮಾರ್ ವಿರುದ್ಧ ಗೆಲುವು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ ಬಾವುಟ ಹಾರಿಸಿದರು. ಆದರೆ, ಈ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. 2004ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ ದೇವೇಗೌಡರು ತೇಜಸ್ವಿನಿ ರಮೇಶ್ ಎದುರು ಮುಖಭಂಗ ಅನುಭವಿಸಿದರು.