ಎಸ್. ನಾರಾಯಣ್
ಕನ್ನಡಪ್ರಭ ವಾರ್ತೆ ಮುನಿರಾಬಾದ್ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದ 123 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು ಅದರಲ್ಲಿ ಕಲಬುರ್ಗಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಬೀದರ ದ್ವಿತೀಯ, ವಿಜಯಪುರ ಹಾಗೂ ತುಮಕೂರು ತೃತೀಯ ಸ್ಥಾನ ಪಡೆದುಕೊಂಡಿವೆ. ರಾಜ್ಯದ 90 ಅನುದಾನ ರಹಿತ ಕಾಲೇಜುಗಳು ಶೂನ್ಯ ಫಲಿತಾಂಶ ಸಾಧಿಸುವ ಮೂಲಕ ಅಗ್ರ ಸ್ಥಾನದಲ್ಲಿವೆ. ಇದರಲ್ಲಿ ಹಲವು ಪ್ರತಿಷ್ಠಿತ ಕಾಲೇಜುಗಳಿವೆ. 8 ಸರ್ಕಾರಿ, 20 ಅನುದಾನಿತ, 5 ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಕಾಲೇಜುಗಳು ಸೇರಿವೆ. ಕಲಬುರ್ಗಿ ಜಿಲ್ಲೆಯ 22, ಬೀದರ ಜಿಲ್ಲೆಯ 16, ವಿಜಯಪುರ ಹಾಗೂ ತುಮಕೂರು ಜಿಲ್ಲೆಯ ತಲಾ 12 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ.
ಕಲ್ಯಾಣ ಕರ್ನಾಟಕಕ್ಕೆ ಸಿಂಹಪಾಲು:ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ 53 ಕಾಲೇಜುಗಳು ಶೂನ್ಯ ಫಲಿತಾಂಶ ಸಾಧಿಸಿವೆ. ಕಲಬುರ್ಗಿ 22, ಬೀದರ 16, ಯಾದಗಿರಿ 6, ಬಳ್ಳಾರಿ 5, ಕೊಪ್ಪಳ ಹಾಗೂ ರಾಯಚೂರು ತಲಾ 2 ಕಾಲೇಜು ಈ ಸಾಧನೆ ಮಾಡಿದರೆ, ಕಿತ್ತೂರು ಕರ್ನಾಟಕದ ಜಿಲ್ಲೆಗಳ ಪೈಕಿ ವಿಜಯಪುರ 12, ವಿದ್ಯಾಕಾಶಿ ಎಂದು ಪ್ರಸಿದ್ಧಿ ಪಡೆದ ಧಾರವಾಡ 5, ಬೆಳಗಾವಿ 4, ಬಾಗಲಕೋಟೆ 3, ಹಾವೇರಿ 2 ಹಾಗೂ ಗದಗ 1, ದಾವಣಗರೆ 7, ಶಿವಮೊಗ್ಗ 1, ಚಿಕ್ಕಮಂಗಳೂರ 2, ಮಂಡ್ಯ 3, ಹಾಸನ 3, ಕೋಲಾರ 4, ರಾಮನಗರ 1, ಬೆಂಗಳೂರ ನಗರ 6, ಮ್ಯೆಸೂರು ಜಿಲ್ಲೆಯ 4 ಕಾಲೇಜುಗಳು ಶೂನ್ಯ ಫಲಿತಾಂಶ ಸಾಧಿಸಿವೆ.
ಅನುದಾನಿತ ಹಾಗೂ ಸರ್ಕಾರಿ ಕಾಲೇಜುಗಳಲ್ಲಿಯೇ ಫಲಿತಾಂಶ ಶೂನ್ಯ ಬಂದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣ ಗುಣಮಟ್ಟ ಯಾವ ರೀತಿ ಇದೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರ ತಕ್ಷಣ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು. ವರ್ಷವಿಡಿ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಸರ್ಕಾರ ಕಡಿಮೆ ಫಲಿತಾಂಶ ಪಡೆಯುವ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಮುಖ್ಯಸ್ಥರನ್ನು ಹೊಣೆ ಮಾಡತ್ತದೆ. ಆದರೆ, ಖಾಸಗಿ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಟೋಷನ್ ನೀಡುತ್ತೇವೆ ಎಂದು ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಫೀ ಪಡೆದರೂ ಏಕೆ ವಿದ್ಯಾರ್ಥಿಗಳು ತೇರ್ಗಡೆಯಾಗಿಲ್ಲ. ಇವುಗಳ ವಿರುದ್ಧ ಸರ್ಕಾರ ಏಕೆ ಕ್ರಮಕೈಗೊಳ್ಳಬಾರದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿತ್ರದುರ್ಗ ಹಾಗೂ ದೊಡ್ಡಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳ ಯಾವ ಪಿಯು ಕಾಲೇಜೂ ಶೂನ್ಯ ಫಲಿತಾಂಶ ಹೊಂದಿಲ್ಲದೇ ಸಾಧನೆ ಮಾಡಿದೆ.ಸರ್ಕಾರಿ ಕಾಲೇಜುಗಳಲ್ಲಿ ಬೋಧಕರ ಪರಿಶ್ರಮದಿಂದ ವರ್ಷದಿಂದ ವರ್ಷಕ್ಕೆ ಫಲಿತಾಂಶದಲ್ಲಿ ಹೆಚ್ಚಳವಾಗುತ್ತಿದೆ. ರಾಜ್ಯದ 8 ಸರ್ಕಾರಿ ಪಿಯು ಕಾಲೇಜಿನಲ್ಲಿ ಮಾತ್ರ ಶೂನ್ಯ ಫಲಿತಾಂಶ ಬಂದಿದೆ. 90 ಅನುದಾನ ರಹಿತ ಕಾಲೇಜುಗಳ ಫಲಿತಾಂಶ ಶೂನ್ಯ ಬಂದಿದೆ. ನಮ್ಮ ಕಾಲೇಜುಗಳಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಜಗದೀಶ್ ಡಿಡಿಪಿಐ, ಕೊಪ್ಪಳ