ಸೀಮಿನಾಗನಾಥ ದೇವಳ : ₹49 ಲಕ್ಷ ವೆಚ್ಚದ ಪುಷ್ಕರಣಿ ನಿರುಪಯುಕ್ತ

KannadaprabhaNewsNetwork | Published : Dec 19, 2024 12:32 AM

ಸಾರಾಂಶ

ಭಕ್ತರ ಸಕಲ ಅನುಕೂಲಕ್ಕೆಂದು 49 ಲಕ್ಷ ರು. ವೆಚ್ಚದ ಪುಷ್ಕರಣಿ ನಿರ್ಮಾಣ ಕಾಮಗಾರಿಯು ಗುತ್ತಿಗೆದಾರರ ಇಚ್ಛಾಶಕ್ತಿ ಸಂಬಂಧಿತ ಇಲಾಖೆಯ ನಿರ್ಲಕ್ಷ್ಯದಿಂದ ನಿರುಪಯುಕ್ತವಾಗಿದೆ.

ಕನ್ನಡಪ್ರಭ ವಾರ್ತೆ, ಹುಮನಾಬಾದ್‌

ಭಕ್ತರ ಸಕಲ ಅನುಕೂಲಕ್ಕೆಂದು 49 ಲಕ್ಷ ರು. ವೆಚ್ಚದ ಪುಷ್ಕರಣಿ ನಿರ್ಮಾಣ ಕಾಮಗಾರಿಯು ಗುತ್ತಿಗೆದಾರರ ಇಚ್ಛಾಶಕ್ತಿ ಸಂಬಂಧಿತ ಇಲಾಖೆಯ ನಿರ್ಲಕ್ಷ್ಯದಿಂದ ನಿರುಪಯುಕ್ತವಾಗಿದೆ.ಹುಮನಾಬಾದ್‌ ತಾಲೂಕಿನ ಕ್ಷೇತ್ರದ ಪಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಹಳ್ಳಿಖೇಡ (ಬಿ) ಪಟ್ಟಣದ ಹೊರ ವಲಯದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಸೀಮಿ ನಾಗನಾಥ ದೇವಸ್ಥಾನಕ್ಕೆ ಪ್ರತಿ ಶನಿವಾರ ನಾಗದೋಷ, ಕಾಳಸರ್ಪ ದೋಷ, ರಾಹು ದೋಷದಂತಹ ಅನೇಕವುಗಳಿಗೆ ನಾಗೇಶ್ವರನಿಗೆ ದೇವಸ್ಥಾನದಲ್ಲಿ ವಿವಿಧ ರೀತಿಯ ವಿಶೇಷ ಪೂಜೆ, ಅರ್ಚನೆ ಜರಗುತ್ತದೆ. ಈ ಪೂಜೆಗೆ ಬೀದರ್‌, ಕಲಬುರಗಿ, ಯಾದಗಿರಿ ಸೇರಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.ಪ್ರತಿ ವರ್ಷ ನಾಗಪಂಚಮಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಒಂದು ವಾರ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ. ದೇವಸ್ಥಾನಕ್ಕೆ ಪ್ರತಿ ಶನಿವಾರ ನಾಗದೋಷ, ಕಾಳಸರ್ಪ ದೋಷ, ರಾಹು ದೋಷದಂತಹ ನಾಗೇಶ್ವರನಿಗೆ ದೇವಸ್ಥಾನದಲ್ಲಿ ವಿವಿಧ ರೀತಿಯ ವಿಶೇಷ ಪೂಜೆ, ಬೆಳಿಗ್ಗೆ 7 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿ ಇಲ್ಲೇ ಸ್ನಾನ ಮಾಡಿಕೊಂಡು ಹಸಿಬಟ್ಟೆಯ ಮೇಲೆ ಪೂಜೆ ಸಲ್ಲಿಸುವ ರೂಢಿ ಇದೆ. ಮಹಿಳೆಯರಿಗೆ ಸ್ನಾನ ಹಾಗೂ ಪ್ರತ್ಯೇಕ ಬಟ್ಟೆ ಬದಲಾವಣೆಗಾಗಿ ಭಕ್ತರ ಸಕಲ ಅನುಕೂಲಕ್ಕೆ ಎಂದು 49 ಲಕ್ಷ ರು. ವೆಚ್ಚದ ಪುಷ್ಕರಣಿ (ಸ್ಥಾನ ಗುಂಡ) ನಿರ್ಮಾಣ ಮಾಡಿಸಿದ್ದರು. ಇದರಲ್ಲಿ ಸ್ನಾನ ಮಾಡುವ ಭಕ್ತರ ಅನುಕೂಲಕ್ಕಾಗಿ ಸುತ್ತ ಕೋಣೆಗಳನ್ನು ನಿರ್ಮಿಸಲಾಗಿದೆ. ಆದರೆ ಗುತ್ತಿಗೆ ಪಡೆದ ಗುತ್ತಿಗೆದಾರ ಇಚ್ಛಾಶಕ್ತಿ ಹಾಗೂ ಸಂಬಂಧಿತ ಇಲಾಖೆಯ ನಿರ್ಲಕ್ಷದಿಂದ ಕಾಮಗಾರಿ ಕಳಪೆಯಾಗಿದ್ದು ಪುಷ್ಕರಣಿಯಲ್ಲಿ ಇರುವ ಮೆಟ್ಟಿಲುಗಳು ಬೀಳುತ್ತಿವೆ. ನೀರು ಶೇಖರಣೆ ಸರಿಯಾಗಿ ಆಗುತ್ತಿಲ್ಲ ಇದರಿಂದ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಲಾದ ಪುಷ್ಕರಣಿ ಭಕ್ತರ ಪಾಲಿಗೆ ನಿರುಪಯುಕ್ತವಾಗಿದೆ.

ದೇವಸ್ಥಾನ ಇದೀಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಪ್ರತಿದಿನ ಅದರಲ್ಲೂ ವಿಶೇಷವಾಗಿ ಶನಿವಾರ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ಶನಿವಾರ ನಾಗದೋಷ ಪೂಜೆ ಇಲ್ಲಿನ ವಿಶೇಷ. ಆದರೆ ದೂರದಿಂದ ಬರುವ ಭಕ್ತರಿಗೆ ತಂಗಲು ಸೂಕ್ತ ವ್ಯವಸ್ಥೆ ಇಲ್ಲ. ಈ ನಿಟ್ಟಿನತ್ತ ಸರ್ಕಾರ ಗಮನಹರಿಸುವ ಅಗತ್ಯವಿದೆ ಎಂದು ಹೇಳುತ್ತಾರೆ ಹಳ್ಳಿಖೇಡ (ಬಿ) ಗ್ರಾಮದ ಮುಖಂಡ ಪ್ರಕಾಶ ತಿಬ್ಬಶಟ್ಟಿ.

Share this article