ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸೋಮವಾರಪೇಟೆಯ ಅಕ್ಷಯ್ ಮುರುಳೀಧರ್, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಯಡೂರು ಗ್ರಾಮದ ಧನ್ಯಾ ಸತೀಶ್, ಪುಷ್ಪಾಂಜಲಿ ನಾಗೇಶ್, ಹಿರಿಕರ ಗ್ರಾಮದ ಜೀವಿತ ರಮೇಶ್, ಸೋಮವಾರಪೇಟೆಯ ಲಿಖಿತ್ ಕೃಪಾಲ್ ಅವರನ್ನು ಅವರ ಪೋಷಕರೇ ಸನ್ಮಾನಿಸಿ ಹಾರೈಸಿದರು.ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಅಕ್ಷಯ್ ಅವರು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಧನ್ಯಾ, ಪುಷ್ಪಾಂಜಲಿ ಹಾಗೂ ಜೀವಿತಾ ಅವರು ಅ.೧೫ರಂದು ಮೈಸೂರು ಮಾನಸ ಗಂಗೋತ್ರಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ತಂಡವನ್ನು ಪ್ರತಿನಿಧಿಸಲಿದ್ದಾರೆ. ಲಿಖಿತ್ ಮಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಕೋಚ್ ಗೌತಮ್ ಕಿರಗಂದೂರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಅವರು ಸೌಲಭ್ಯಗಳ ಕೊರತೆಯಿಂದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬ್ಯಾಡ್ಮಿಂಟನ್‌ಗೆ ಸಂಬಂಧಿಸಿದಂತೆ ಸೋಮವಾರಪೇಟೆ ಪಟ್ಟಣದಲ್ಲಿ ಸರ್ಕಾರಕ್ಕೆ ಸೇರಿದ ಒಳಾಂಗಣ ಕ್ರೀಡಾಂಗಣವಿಲ್ಲ. ಹಲವು ಪ್ರತಿಭಾವಂತ ಕ್ರೀಡಾಪಟುಗಳು ಅಕಾಡೆಮಿಗಳಲ್ಲಿ ಹಣ ಕೊಟ್ಟು ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಆಟಗಾರರಿಗೆ ಸರಿಯಾದ ತರಬೇತಿ ಸಿಗದ ಕಾರಣ, ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ತಂಡ ಸೋಲು ಅನುಭವಿಸುವಂತಹ ದುಸ್ಥಿತಿ ಇದೆ ಎಂದು ಗೌತಮ್ ಕಿರಗಂದೂರು ನೋವು ತೋಡಿಕೊಂಡರು.ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯೂ ಮಾತನಾಡಿ, ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಇದು ಕಲಿಕೆಗೆ ಪೂರಕವಾಗಿದೆ ಎಂದರು.