ಕನ್ನಡಪ್ರಭ ವಾರ್ತೆ ತುಮಕೂರು
ಒಂದು ಅವಕಾಶ ಕೈತಪ್ಪಿದರೆ ಅದಕ್ಕೆ ಪರಿತಪಿಸದೆ, ಹಲವು ಅವಕಾಶಗಳನ್ನು ಹುಡುಕಿ ಸ್ವಯಂ ಪರಿಶ್ರಮ ಹಾಗೂ ಪ್ರತಿಭೆಯಿಂದ ಅದರಲ್ಲಿ ಸಾಧನೆ ಮಾಡುವ ಮನೋಸ್ಥೈರ್ಯ ವಿಪ್ರ ಸಮುದಾಯಕ್ಕಿದೆ ಎಂದು ಬೆಂಗಳೂರಿನ ಖ್ಯಾತ ಕಿರುತೆರೆ ಹಾಗೂ ರಂಗಭೂಮಿ ಕಲಾವಿದ ಡಾ. ಕೆ.ಎನ್. ಬಾಬು ಹಿರಣ್ಣಯ್ಯ ಅಭಿಪ್ರಾಯಪಟ್ಟರು.ತುಮಕೂರಿನ ಶಂಕರಮಠದಲ್ಲಿ ತುಮಕೂರು ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಏರ್ಪಡಿಸಿದ್ದ 14 ನೇ ವರ್ಷದ ಸಮಾವೇಶ ಹಾಗೂ ಹೊಯ್ಸಳ ಹಬ್ಬದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಈ ಹಿಂದೆ ಪೌರೋಹಿತ್ಯ, ಅರ್ಚಕ ವೃತ್ತಿಗೆ ಬಹುಪಾಲು ಸೀಮಿತವಾಗಿದ್ದ ಬ್ರಾಹ್ಮಣ ಸಮುದಾಯ, ಆ ನಂತರದಲ್ಲಿ ಸ್ವಯಂ ಪರಿಶ್ರಮದಿಂದ ಮಾಹಿತಿ ತಂತ್ರಜ್ಞಾನ, ವೈದ್ಯಕೀಯ, ವೈಜ್ಞಾನಿಕ, ಕೈಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು ಹಾಗೂ ಸಮಾಜಮುಖಿಯಾದ ಅನೇಕ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದು ಹಲವಾರು ನಿದರ್ಶನಗಳೊಂದಿಗೆ ವಿವರಿಸಿದರು.ಇಂದಿನ ಯುವ ಪೀಳಿಗೆಗೆ ಗಾಯತ್ರಿ ಮಂತ್ರ, ನಮ್ಮ ಪರಂಪರೆ, ಸಂಸ್ಕೃತಿಯ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು.
ಬ್ರಾಹ್ಮಣಿಕೆ, ಬ್ರಾಹ್ಮಣತ್ವಕ್ಕೆ ಚ್ಯುತಿ ಉಂಟಾದಾಗ, ಬ್ರಾಹ್ಮಣರ ಅವಹೇಳನವಾದಾಗ ತ್ರಿಮತಸ್ಥರು ಹಾಗೂ ಒಳಪಂಗಡದವರು ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿತರಾಗಿ ಅದರ ವಿರುದ್ಧ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಸಮುದಾಯಕ್ಕೆ ನಷ್ಟವುಂಟಾಗುತ್ತದೆ. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಂಘಟನೆಗಳು ಹೆಚ್ಚಿನ ರೀತಿಯಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಬಾಬು ಹಿರಣ್ಣಯ್ಯ ಆಶಿಸಿದರು.ಬೆಂಗಳೂರಿನ ಇಸ್ರೋದ ಹಿರಿಯ ವಿಜ್ಞಾನಿ ಡಾ. ಸಿ.ಎಸ್. ಮಧುಸೂದನ್ ಮಾತನಾಡಿ, ಆಧುನಿಕ ಆವಿಷ್ಕಾರಗಳ ಹಿಂದೆ ಪ್ರಾಚೀನರ ಕೊಡುಗೆ ಅಪಾರವಾಗಿದೆ. ತಂತ್ರಜ್ಞಾನ ಅಭಿವೃದ್ಧಿಯಾಗಿ ದೈನಂದಿನ ಕಾರ್ಯಗಳೆಲ್ಲ ಇಂದು ಉಪಗ್ರಹ ಆಧಾರಿತ ಸೇವೆ ಆಧಾರಿತವಾಗಿವೆ. ಇಸ್ರೋದಿಂದ ಈಗಾಗಲೇ ಚಂದ್ರಯಾನ, ಆದಿತ್ಯಯಾನ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ಇದೀಗ ಬಾಹ್ಯಾಕಾಶ ಯೋಜನೆ ರೂಪುಗೊಳ್ಳುತ್ತಿದೆ. ಮುಂದೊಂದು ದಿನ ಭಾರತೀಯ ಬಾಹ್ಯಾಕಾಶ ಕೇಂದ್ರ ನಿರ್ಮಾಣವಾಗುವುದು ಖಚಿತ ಎಂದು ಅನೇಕ ನಿದರ್ಶನಗಳೊಂದಿಗೆ ವಿವರಿಸಿದರು.
ಜಿಲ್ಲಾ ಸಂಘದ ಅಧ್ಯಕ್ಷ ಕೆ. ಹಿರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ತಜ್ಞರಾದ ಡಾ.ಎನ್. ನಾಗಭೂಷಣ್, ಸಿ.ವಿ. ಕೇಶವಮೂರ್ತಿ, ಜಿ.ವಿ. ವಿದ್ಯಾಶಂಕರ್, ಡಾ. ನಿಖಿಲ್ ರಾಮಶೇಷ ಹಾಗೂ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ನೂತನ ನಿವೇಶನಕ್ಕೆ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು. ಮೈಸೂರು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ, ತಿಪಟೂರು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ರವಿಶಾಸ್ತ್ರಿ, ಕಾರ್ಪೊರೇಟರ್ ಸಿ.ಎನ್. ರಮೇಶ್, ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಎಚ್.ಎನ್. ಚಂದ್ರಶೇಖರ್, ಮಹಿಳಾ ವಿಭಾಗದ ಅಧ್ಯಕ್ಷೆ ಶ್ಯಾಮಲಾ ವಿದ್ಯಾಶಂಕರ್ ವೇದಿಕೆಯಲ್ಲಿ ಇದ್ದರು. ತುಮಕೂರು, ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಹೊಯ್ಸಳ ಕರ್ನಾಟಕ ಸಮುದಾಯದವರು ಪಾಲ್ಗೊಂಡಿದ್ದರು.