ಸ್ವ ಉದ್ಯೋಗದಿಂದ ಸ್ವಾವಲಂಬಿ ಜೀವನ ಸಾಧ್ಯ

KannadaprabhaNewsNetwork | Published : Apr 4, 2025 12:51 AM

ಸಾರಾಂಶ

ಮಹಿಳೆಯರು ಸ್ವ ಉದ್ಯೋಗಗಳನ್ನು ಕಂಡುಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬಹುದಾಗಿದ್ದು, ಇದರಿಂದ ಕುಟುಂಬ ನಿರ್ವಹಣೆಯ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂದು ಬಿಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಮಹಿಳೆಯರು ಸ್ವ ಉದ್ಯೋಗಗಳನ್ನು ಕಂಡುಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬಹುದಾಗಿದ್ದು, ಇದರಿಂದ ಕುಟುಂಬ ನಿರ್ವಹಣೆಯ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂದು ಬಿಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು. ನಗರದ ಶಿಕ್ಷಕರ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಭೋವಿ ಮಹಾಸಭಾ, ಕಾರ್ಮಿಕ ರತ್ನ ರೋರಲ್ ಡೆವಲಪ್ಮೆಂಟ್ ಫೌಂಡೇಶನ್ ಇವರ ವತಿಯಿಂದ ಆಯೋಜಿಸಿದ್ದ ೬ನೇ ವರ್ಷದ ಉಚಿತ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಮಹಿಳಾ ಸಬಲೀಕರಣಗಳದಂತಹ ಕಾರ್ಯಕ್ರಮಗಳು ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಸಂಘಟನೆಗಳು ಸಹ ಶ್ರಮಿಸುತ್ತಿವೆ. ಮಹಿಳೆಯರು ಮನೆಗೆಲಸದ ಜೊತೆಗೆ ಬಿಡುವಿನ ಸಮಯದಲ್ಲಿ ಕರಕುಶಲ ಕೆಲಸಗಳನ್ನು ಮಾಡುವುದರಿಂದ ತನ್ನ ಖರ್ಚನ್ನು ತಾನೇ ನಿಭಾಯಿಸಿಕೊಳ್ಳಬಹುದು. ಇಂತಹ ತರಬೇತಿ ಕೇಂದ್ರಗಳಲ್ಲಿ ಕೊಡುವ ಉಚಿತ ತರಬೇತಿಯನ್ನು ಪಡೆದುಕೊಂಡು ಮನೆಯಲ್ಲಿಯೇ ಉದ್ಯೋಗ ಮಾಡಬಹುದು. ಅಲ್ಲದೆ ತರಬೇತಿ ಪಡೆದ ನೀವು ಬೇರೆಯವರಿಗೂ ಮಾರ್ಗದರ್ಶನ ನೀಡಿದರೆ ಅವರು ಸಹ ಸ್ವವಲಂಬಿಗಳಾಗಬಹುದು. ಮಹಿಳೆಯರು ಮನೆಯಲ್ಲಿ ಕಾಲಕಳೆಯಲು ಕಷ್ಟಸಾಧ್ಯ. ಇಂತಹ ಕಸುಬುಗಳನ್ನು ಕಲಿತುಕೊಂಡರೆ ನಿಮಗೂ ಅನುಕೂಲವಾಗಲಿದೆ ಎಂದರು. ಕರವೇ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಹಾಗೂ ಭೋವಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಅಯ್ಯನಬಾವಿ ಮಾತನಾಡಿ ಮಹಿಳೆಯರು ಇಂತಹ ಕೌಶಲ್ಯ ತರಬೇತಿಯನ್ನು ಪಡೆದು ಮನೆಯಲ್ಲೇ ಕುಳಿತು ದುಡಿಮೆ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸ ಕುಟುಂಬದ ಸಣ್ಣಪುಟ್ಟ ಖರ್ಚುಗಳು ತಾವೇ ನಿಭಾಯಿಸಬಹುದು. ಬೇರೆಯವರ ಬಳಿ ಹಣ ಕೇಳುವುದು ತಪ್ಪುತ್ತದೆ. ಇದರಿಂದ ಸಂಸಾರ ನಡೆಸಲು ಸಹಕಾರಿಯಾಗುತ್ತದೆ. ಇದುವರೆಗೂ ಸಂಸ್ಥೆಯಿಂದ ಸುಮಾರು ಮೂರು ಸಾವಿರ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಅದರಲ್ಲಿ ಹಲವು ಮಹಿಳೆಯರು ಬ್ಯಾಂಕ್‌ನಿಂದ ಸಬ್ಸಿಡಿಯಲ್ಲಿ ಸಾಲನ ಪಡೆದು ಸ್ವಂತ ಉದ್ಯಮ ಆರಂಭಿಸಿ ಉದ್ಯಮಿಗಳಾಗಿದ್ದಾರೆ. ಇಂತಹ ಅವಕಾಶಗಳನ್ನು ಮಹಿಳೆಯರು ಉಪಯೋಗಿಸಿಕೊಳ್ಳಬೇಕು ಎಂದ ಅವರು ಶಿಬಿರದಲ್ಲಿ ಟೈಲರಿಂಗ್, ಬ್ಯೂಟಿ ಪಾರ್ಲರ್, ಹ್ಯಾಂಡ್ ಎಂಬ್ರಾಯ್ಡರಿ, ಸೀರೆ ಕುಚ್ಚು ಹಾಕುವ ತರಬೇತಿಯನ್ನು ನೀಡಲಾಗಿದ್ದು ತರಬೇತಿಗೆ ಸಂಬಂಧಪಟ್ಟ ಸಾಮಗ್ರಿಗಳನ್ನು ಸಹ ನೀಡಲಾಗಿತ್ತು ಎಂದರು. ಈ ಸಂದರ್ಭದಲ್ಲಿ ಸುಮಾರು ೩೫೦ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ತರಬೇತಿ ಪಡೆದುಕೊಂಡಿದ್ದು ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಸಂಸ್ಥೆಯ ಅಧ್ಯಕ್ಷೆ ಚೈತ್ರ ಸೇರಿದಂತೆ ತರಬೇತುದಾರರು ಉಪಸ್ಥಿತರಿದ್ದರು.

Share this article