ಆರ್ಥಿಕ ಸುಧಾರಣೆಗೆ ಸ್ವ-ಸಹಾಯ ಸಂಘಗಳು ಸಹಕಾರಿ: ಡಾ.ಶರಣು ಗದ್ದುಗೆ

KannadaprabhaNewsNetwork | Published : Oct 10, 2024 2:30 AM

ಸಾರಾಂಶ

ಶಹಾಪುರ ನಗರದ ಫಕಿರೇಶ್ವರ ಮಠದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆಯಿಂದ ನಡೆದ ಸ್ವ-ಸಹಾಯ ಸಂಘಗಳ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಕರವೇ ಉತ್ತರ ಕರ್ನಾಟಕ ಅಧ್ಯಕ್ಚ ಶರಣು ಗದ್ದುಗೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಕುಟುಂಬ ನಿರ್ವಹಣೆ, ಕೃಷಿ ಅಭಿವೃದ್ಧಿ ಇತರೆ ಉದ್ದೇಶಗಳಿಗೆ ಹಿಂದೆ ಸಾಲ ಪಡೆಯುವುದು ಪ್ರತಿಯೊಬ್ಬರಿಗೂ ಕಷ್ಟವಾಗಿತ್ತು. ಆದರೆ, ಸ್ವ-ಸಹಾಯ ಸಂಘಗಳ ಸ್ಥಾಪನೆಯಿಂದ ಸುಲಭವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿದೆ. ಇದರಿಂದ ಸದಸ್ಯ ವೈಯಕ್ತಿಕ ಮತ್ತು ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಗೆ ಸಹಕಾರಿಯಾಗಿದೆ ಎಂದು ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಡಾ.ಶರಣು ಬಿ. ಗದ್ದುಗೆ ಹೇಳಿದರು.

ನಗರದ ಫಕಿರೇಶ್ವರ ಮಠದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆಯಿಂದ ನಡೆದ ಸ್ವ-ಸಹಾಯ ಸಂಘಗಳ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸ್ವ-ಸಹಾಯ ಸಂಘದಿಂದ ಸದಸ್ಯರು ಆರ್ಥಿಕವಾಗಿ ಸಬಲರಾಗುವ ಜತೆಗೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ವಿಚಾರ. ಗ್ರಾಮೀಣ ಭಾಗದಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಂತ ವ್ಯಕ್ತಿ, ಕುಟುಂಬಗಳನ್ನು ಮುನ್ನೆಲೆಗೆ ತರುವಂತ ಕೆಲಸವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಎಂದರು.

ಸಂಸ್ಥೆ ಹಲವಾರು ಯೋಜನೆಗಳು ಜನಪರ ಏಳಿಗೆಗೆ ಮೀಸಲಿವೆ. ಇಂತಹ ಸಂಸ್ಥೆ ವಿರುದ್ಧ ಯಾವುದೋ ಅತೃಪ್ತ ಆತ್ಮ ಆರೋಪ ಮಾಡಿದೆ ಎಂದರೆ ಅದಕ್ಕೆ ಕಿವಿಗೊಡವ ಅಗತ್ಯವಿಲ್ಲ. ಪೂಜ್ಯ ಧರ್ಮಸ್ಥಳದ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀಮಂಜುನಾಥ ಸ್ವಾಮಿ ಆಶೀರ್ವಾದದಿಂದ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸುತ್ತಿರುವ ಸಂಸ್ಥೆ ಸೇವೆ ಅಪಾರ ಎಂದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿ, ಯಾವುದೇ ಸರ್ಕಾರ ಮಾಡದ ಕೆಲಸಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆ ಮಾಡುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಬೌದ್ಧಿಕವಾಗಿ, ರಾಜಕೀಯವಾಗಿ ಮಹಿಳಾ ಸಬಲೀಕರಣದಲ್ಲಿ ಸರ್ಕಾರಿ ಯೋಜನೆಗಳು, ಮೀಸಲಾತಿಗಳು ಪ್ರಮುಖ ಪಾತ್ರ ವಹಿಸಿರುವಂತೆ, ಗ್ರಾಮೀಣರ ಬದುಕಿನ ದಿಕ್ಕನ್ನು ಬದಲಾಯಿಸುವಲ್ಲಿ ಸ್ವ-ಸಹಾಯ ಸಂಘಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.

ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ, ಕರ್ನಾಟಕ ಬ್ಯಾಂಕ್ ಯಾದಗಿರಿ ಶಾಖೆಯ ಹಿರಿಯ ಪ್ರಬಂಧಕ ಶ್ರೀನಿವಾಸ, ಜಿಲ್ಲಾ ಯೋಜನಾಧಿಕಾರಿ ಕಮಲಾಕ್ಷ ಮಾತನಾಡಿದರು. ದೋರನಹಳ್ಳಿ ಶಾಖಾ ಪ್ರಬಂಧಕ ಅಯ್ಯಪ್ಪ, ತಾಲೂಕು ಶಾಖಾ ಯೋಜನಾಧಿಕಾರಿ ಕಲ್ಲಪ್ಪ ಯಾವಗಲ್ ಇತರರಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಒಕ್ಕೂಟದ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Share this article