ನಿಸ್ವಾರ್ಥ ಸೇವೆ ಸಲ್ಲಿಸಿದರೆ ಜೀವನ ಸಾರ್ಥಕ: ಎನ್.ಟಿ.ಹನುಮಂತಪ್ಪ

KannadaprabhaNewsNetwork | Published : Jul 1, 2024 1:50 AM

ಸಾರಾಂಶ

ಬೀರೂರು, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ನಿಸ್ವಾರ್ಥ, ತ್ಯಾಗ ಮನೋಭಾವದಿಂದ ಸೇವೆ ಸಲ್ಲಿಸಿದರೇ ಜೀವನ ಸಾರ್ಥಕ ವಾಗುತ್ತದೆ ಎಂದು ಜೋಡಿತಿಮ್ಮಾಪುರ ಗ್ರಾಮದ ಮುಖಂಡ ಎನ್.ಟಿ.ಹನುಮಂತಪ್ಪ ಅಭಿಪ್ರಾಯಪಟ್ಟರು.

ಜೋಡಿತಿಮ್ಮಾಪುರ ಗ್ರಾಮದಲ್ಲಿ ನಡೆದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ಬೀರೂರು

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ನಿಸ್ವಾರ್ಥ, ತ್ಯಾಗ ಮನೋಭಾವದಿಂದ ಸೇವೆ ಸಲ್ಲಿಸಿದರೇ ಜೀವನ ಸಾರ್ಥಕ ವಾಗುತ್ತದೆ ಎಂದು ಜೋಡಿತಿಮ್ಮಾಪುರ ಗ್ರಾಮದ ಮುಖಂಡ ಎನ್.ಟಿ.ಹನುಮಂತಪ್ಪ ಅಭಿಪ್ರಾಯಪಟ್ಟರು. ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾಮದಲ್ಲಿ ಕಡೂರು ಸ.ಪ.ಪೂರ್ವಕಾಲೇಜಿನಿಂದ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾಯೋಜನೆ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಎನ್.ಎಸ್.ಎಸ್ ಶಿಬಿರ ಸೇವಾ ಮನೋಭಾವ ಬೆಳೆಸಿಕೊಳ್ಳುವ ವೇದಿಕೆಯಾಗಿದೆ. ಇಲ್ಲಿ ಕಲಿತ ತತ್ವಗಳನ್ನು ಜೀವನ ದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದ ಅವರು, ಶಿಬಿರಾರ್ಥಿಗಳು ಸಮಯ ಪಾಲನೆ, ಶಿಸ್ತು, ಹೊಂದಿಕೊಂಡು ಬದುಕುವ ರೀತಿ, ಸ್ವತಂತ್ರವಾಗಿ ಕಾರ್ಯಕ್ರಮ ನಿರ್ವಹಿಸಿ ಸಭಾ ಕಂಪನದಿಂದ ವಿಮೋಚನೆ, ಹೀಗೆ ವ್ಯಕ್ತಿತ್ವ ವಿಕಸನದಂತಹ ಗುಣಗಳನ್ನು ಕಲಿಯುತ್ತೀರಿ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರದ ಉತ್ತಮ ಪ್ರಜೆ ಗಳಾಗಬೇಕು ಎಂದರು.ತಾಪಂಮಾಜಿ ಸದಸ್ಯ ಎನ್.ಗೋವಿಂದಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ಭಾರತದ ನಿರ್ಮಾತೃ ಗಳಾಗಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯ. ವಿದ್ಯಾರ್ಥಿ ದೆಸೆಯಲ್ಲಿಯೇ ಮುಂದಿನ ಜೀವನ ಹೇಗಿರಬೇಕು ಎಂಬುದನ್ನು ನಿರ್ಧರಿಸಿ ರೂಪಿಸಿಕೊಳ್ಳಬೇಕು. ಮುಂದಿನ ಜೀನವದ ಬಗ್ಗೆ ಸ್ಪಷ್ಟ ಗುರಿ ಇರಲಿ ಎಂದರು.ಸಮಾಜ ಗೌರವ, ಅಂತಸ್ತು, ಎಲ್ಲವನ್ನು ನಮಗೆ ಕೊಟ್ಟಿದೆ. ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು? ಎಂಬುದನ್ನು ಒಂದು ಕ್ಷಣ ಯೋಚಿಸಿ, ಪದವಿ ಶಿಕ್ಷಣ ಪಡೆದು ಹೊರಹೊಮ್ಮವ ನೀವು ಸಮಾಜ ಮುನ್ನಡೆಸುವ ಜವಾಬ್ದಾರಿ ಹೊತ್ತ ಸಮ ಸಮಾಜದ ರಾಯಬಾರಿಗಳಾಗಬೇಕು. ಸಮಾಜ ಸೇವೆ ಮನೋಭಾವ ಕೇವಲ ಮಾತಿನಲ್ಲಿ ಬೆಳೆಸಿಕೊಳ್ಳದೆ ಸಾಧನೆ ಮೂಲಕ ಧೃಡಪಡಿಸಿಸಬೇಕಿದೆ ಎಂದರು.ಕಳೆದ ೭ದಿನದ ಶಿಬಿರ ಮುಗಿಸಿ ಮರಳಿ ಹೋಗುವ ಸಂದರ್ಭದಲ್ಲಿ ಎಲ್ಲರ ಮುಖದಲ್ಲಿ ಆವರಿಸಿರುವ ಬೇಸರ, ದುಃಖ ಗಮನಿ ಸಿದ್ದೇನೆ. ನೀವೆಲ್ಲರು ಒಂದೆ ತಾಯಿ ಮಕ್ಕಳಂತೆ ಇಲ್ಲಿ ಅನ್ಯೋನ್ಯವಾಗಿ ನಡೆದುಕೊಂಡು ಶ್ರಮದಾನದಲ್ಲಿ ತೊಡಗಿ ಕೊಂಡಿದ್ದ ಕಾರಣದಿಂದ ಈ ಭಾವನೆ ಮೂಡಿದೆ. ಆದರೆ ಇಂತಹ ಅವಕಾಶವನ್ನು ನೀವೆಲ್ಲ ಮತ್ತೆ ಮತ್ತೆ ಸೃಷ್ಠಿಸುವ ಮೂಲಕ ಈ ಶಿಬಿರದಲ್ಲಿ ಪಡೆದ ಮೌಲ್ಯ ಜೀವನದುದ್ದಕ್ಕೂ ಬೆಳೆಸಿಕೊಂಡು ಹೋಗಲು ಅವಕಾಶವಿದೆ ಎಂದರು. ಮುಖಂಡ ಬಿ.ಜಿ.ಬಸಪ್ಪ ಮಾತನಾಡಿ, ಜೀವನದಲ್ಲಿ ಶಿಕ್ಷಣದಷ್ಟೆ ಆರೋಗ್ಯವೂ ಅಷ್ಟೆ ಮುಖ್ಯ . ಶೈಕ್ಷಣಿಕವಾಗಿ ಸಬಲೀಕರಣ ಗೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣವಾಗಿ ಆರ್ಥಿಕ ಸ್ಥಿತಿಸುಧಾರಣೆಯಾಗುತ್ತದೆ. ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿ ಯಾಗದಂತೆ, ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳಲು ಭ್ರಾತೃತ್ವ ಭಾವನೆ ಬೆಳೆಸಿಕೊಳ್ಳಬೇಕು. ಸಮಾಜ ದಲ್ಲಿರುವ ಅನೇಕ ಅಡೆ-ತಡೆ ತೊಡೆದು ಹಾಕಲು ಪಣತೊಡಬೇಕು. ಹೆಣ್ಣು ಕೀಳರಿಮೆ ಬಿಟ್ಟು ಆತ್ಮಸ್ಥೈರ್ಯ ಮೈಗೂಡಿಸಿ ಕೊಂಡಾಗ ಸಮಾಜದ ಎಲ್ಲ ದುಷ್ಟ ಶಕ್ತಿಗಳನ್ನು ಎದುರಿಸಬಹುದು ಎಂದರು.ಡಾ.ಕೆ.ಎ.ರಾಜಣ್ಣ ಮಾತನಾಡಿ, ಗಳಿಸಿದ ಜ್ಞಾನವನ್ನು ರಾಷ್ಟ್ರದ ಸೇವೆಗೆ ಬಳಸಿಕೊಳ್ಳಲು ಸ್ವಯಂಸೇವಕರನ್ನು ಪ್ರೇರೇಪಿಸಿದರು. ಶಿಬಿರದಲ್ಲಿ ಅವರ ಗಮನಾರ್ಹ ಪಾಲ್ಗೊಳ್ಳುವಿಕೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಜೋಡಿತಿಮ್ಮಾಪುರ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ರಾಜಪ್ಪ, ಉಪಾಧ್ಯಕ್ಷೆ ನೀಲಮ್ಮ ಚಂದ್ರಪ್ಪ, ಐಡಿಎಸ್ ಜಿ ಕಾಲೇಜಿನ ಉಪನ್ಯಾಸಕ ಮಹೇಶ್, ಎಲ್.ಟಿ.ಹನುಮಂತಪ್ಪ, ಕಾಲೇಜಿನ ಅಧ್ಯಾಪಕರಾದ ಮಂಜುನಾಥ ಎಸ್ ಬಿ, ಈರಣ್ಣ ಜೆ, ಹರೀಶ್‌ಡಿ.ಎಲ್, ಕುಮಾರ್.ಎಸ್, ತಿಮ್ಮೇಗೌಡ ಟಿ.ಕೆ, ಲೋಕಪಾವನ, ಮಮತ ಕೆ ಎಂ, ಡಾ.ನವೀನ್ ಕುಮಾರ್ ವೈ ಎನ್, ಹಾಗೂ ಕಾರ್ಯಕ್ರಮಾಧಿಕಾರಿ ಕುಮಾರ ಎಚ್.ಎಂ ಮತ್ತು ಅಶೋಕ್ ಕುಮಾರ್ ಜಿ.ಎಸ್, ವಿದ್ಯಾರ್ಥಿಗಳು ಹಾಜರಿದ್ದರು.೩೦ ಬೀರೂರು ೧ಬೀರೂರು ಸಮೀಪದ ಜೋಡಿತಿಮ್ಮಾಪುರದಲ್ಲಿ ಕಡೂರು ಸ.ಪ.ಪೂರ್ವಕಾಲೇಜಿನಿಂದ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾಯೋಜನೆ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

Share this article