ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮೀಪದ ರನ್ನ ಬೆಳಗಲಿಯ ಕೋಡಿಹಳ್ಳ ತೋಟದ ಶ್ರೀ ಚಕ್ರಪುರವಾಸಿನಿ ಚಕ್ರೇಶ್ವರಿ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ, ಪುಣ್ಯಕೋಟಿ ಸಿದ್ಧಾಶ್ರಮದಲ್ಲಿ ಆದಿಶಕ್ತಿ ಭುವನೇಶ್ವರಿ ಬೆಟ್ಟದ ಭುವನೋತ್ಸವ, ಬೃಹತ್ ಕುಂಭಮೇಳ ಮತ್ತು ನವರಾತ್ರಿ ಉತ್ಸವ ನಾಡಿನ ಪಂಚಪೀಠ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಜರುಗಿತು.ಉಜ್ಜಯಿನಿ ಪೀಠದ ಜಗದ್ಗುರು ಡಾ.ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಮಾತನಾಡಿ, ಯಾವುದೇ ಪಲಾಫಲ ಬಯಸಿದೆ ನಿಸ್ವಾರ್ಥ ದಿಂದ ಸರ್ವರಿಗೂ ಒಳಿತಾಗುವಂತೆ ಮಾಡುವ ಪೂಜೆ ಪುನಸ್ಕಾರಗಳಿಂದ ಫಲ ಬೇಗ ದೊರೆಯುತ್ತದೆ ಎಂದು ಹೇಳಿದರು.
ಶ್ರೀಶೈಲಂ ಪೀಠದ ಜಗದ್ಗುರು ಡಾ.ಚನ್ನಾಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಮನಸ್ಸನ್ನು ಧರ್ಮದ ನಿಯಮಗಳಿಂದ ಹದ್ದುಬಂದಿ ಮಾಡಿ ಉತ್ತಮ ವಿಚಾರಗಳೆಂಬ ಬೀಜವನ್ನು ಬಿತ್ತಿ ದೇವಿಯ ಧ್ಯಾನ ಮಾಡುತ್ತಾ ಸ್ಥಾಪನೆ ಮಾಡುವುದೇ ಘಟಸ್ಥಾಪನೆ. ದೇವಿ ಪುರಾಣದ ಜೊತೆಗೆ ದೇಹದ ಒಳಗೆ ಅಡಗಿದ ಕುಂಡಲನೀಯ ಶಕ್ತಿಯನ್ನು ಅರಿಯುವುದೇ ನವರಾತ್ರಿ ಉತ್ಸವ ಎಂದು ತಿಳಿಸಿದರು.ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಸನಾತನ ಧರ್ಮ ವಿಶ್ವ ವ್ಯಾಪಿ ಹಬ್ಬಿದೆ. ಸನಾತನ ಧರ್ಮಕ್ಕೆ ಅಂತ್ಯವಿಲ್ಲ. ಎಲ್ಲಾ ಧರ್ಮಗಳ ಉಗಮಕ್ಕೆ ಸನಾತನ ಧರ್ಮವೇ ಮೂಲವಾಗಿದೆ. ಯುವ ಸಮುದಾಯ ಸನಾತನ ಧರ್ಮದ ರಕ್ಷಕರಾಗಬೇಕು ಎಂದರು.
ಜ್ಯೋತಿಷಿ ಆನಂದ ಗುರೂಜಿ ಮಾತನಾಡಿ, ಮನುಕುಲದ ಉದ್ಧಾರಕ್ಕೆ ಪ್ರತಿಯೊಬ್ಬರೂ ಸಂಸ್ಕಾರ ಮತ್ತು ಸಂಸ್ಕೃತಿ ಅಳವಡಿಸಿಕೊಳ್ಳಬೇಕು. ಪೂಜೆ, ಪುನಸ್ಕಾರಗಳಲ್ಲಿ ಭಾಗಿ ಆಗುವುದರಿಂದ ಸಂಸ್ಕೃತಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.ಸಿದ್ದುಗೌಡ ಪಾಟೀಲ ಅಧ್ಯಕ್ಷತೆ, ಕೇಂದ್ರದ ಜೋತಿಷ್ಯ ರತ್ನ ಡಾ. ರಮೇಶಕುಮಾರ ಶಾಸ್ತ್ರಿಗಳು ನೇತೃತ್ವ ವಹಿಸಿದ್ದರು. ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ದಿಗೇವಾಡಿಯ ಕಾಡಯ್ಯ ಶಾಸ್ತ್ರಿ, ಅಮರೇಶ್ವರದ ಗಂಗಾಧರಯ್ಯ ಶಾಸ್ತ್ರಿ, ಲೋಟಗೇರಿಯ ಗುರುಮೂರ್ತಿ ದೇವರ ಕಣಕಾಲಮಠ, ಬೆಳಗಾವಿಯ ಚಂದ್ರಶೇಖರ ಶಾಸ್ತ್ರಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬುಡರಕಟ್ಟೆಯ ಶಿವಪಂಚಾಕ್ಷರಿ ಸ್ವಾಮೀಜಿ, ಗಡಹಿಂಗ್ಲಜ್‌ನ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಅಭಿನವ ಮಂಜುನಾಥ ಮಹಾರಾಜರು, ರನ್ನ ಬೆಳಗಲಿ ಸಿದ್ದರಾಮ ಶಿವಯೋಗಿಗಳು, ಮಹಾಲಿಂಗಪುರದ ಶ್ರೀಶೈಲ ಸ್ವಾಮೀಜಿ, ರಂಗಾಪುರದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಕೊಣ್ಣೂರಿನ ಡಾ.ವಿಶ್ವ ಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ನಿಡಸೋಸಿ ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ರಮೇಶ ಕೆಸರಗೋಪ್ಪ, ಸಿದ್ದಪ್ಪ ಬಿದರಿ, ಪದ್ಮಶ್ರೀ ಪುರಸ್ಕೃತೆ ಮಾತಾಬಿ ಮಂಜಮ್ಮ ಜೋಗತಿ, ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ಇತರರು ಇದ್ದರು.