ಕನ್ನಡಪ್ರಭ ವಾರ್ತೆ ಮೈಸೂರು
ರೈತರೇ ಬೆಲೆ ನಿರ್ಧಾರ ಮಾಡುವ ವ್ಯವಸ್ಥೆ ಸೃಷ್ಟಿಯಾಗಬೇಕು. ಇದರ ವಿಚಾರವಾಗಿ ಕಾನೂನು ನಿರ್ಮಾಣ ಆಗಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.ನಗರದ ವಿದ್ಯಾವಿಕಾಸ ಕಾನೂನು ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕೃಷಿ ಉತ್ಪಾದನೆ ಮಾರುಕಟ್ಟೆಯಲ್ಲಿ ಕಾನೂನು ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ತಾವು ಬೆಳೆದ ಬೆಳೆಗೆ ತಾವೇ ದರವನ್ನು ನಿರ್ಧರಿಸುವ ದಿನ ಬಂದಾಗ ರೈತರ ಕಲ್ಯಾಣವಾಗುತ್ತದೆ ಎಂದು ಹೇಳಿದರು.ಬ್ರ್ಯಾಂಡೆಡ್ ಶೂ ಮಾರಾಟ ಮಾಡುವವರೂ ಬೆಲೆಯನ್ನು ತಾವೇ ನಿರ್ಧಾರ ಮಾಡಿರುತ್ತಾರೆ. ಬೊಂಬೆ ಮಾಡುವವರು ಕೂಡ ದರ ನಿಗದಿ ಮಾಡುತ್ತಾರೆ. 10 ರೂ. ಪಾನ್ ಮಾರಾಟ ಮಾಡುವವರು ಬೆಲೆಯನ್ನು ಅವರೇ ನಿಗದಿ ಮಾಡುತ್ತಾರೆ. ಅಂತಹದರಲ್ಲಿ 500 ಚೀಲ ಜೋಳ ಬೆಳೆದ ರೈತ ತನ್ನ ಉತ್ಪನ್ನಕ್ಕೆ ಬೆಲೆ ನಿಗದಿ ಮಾಡುವ ಸಾಮರ್ಥ್ಯ, ಶಕ್ತಿ, ಅಧಿಕಾರ ಇಲ್ಲವೆಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು.ರೈತರು ಬೆಳೆದ ಪದಾರ್ಥಗಳಿಗೆ ಕನಿಷ್ಠ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರ ನಿಗದಿ ಮಾಡುವ ವರ್ತಕರ ಕ್ರಮವನ್ನು ಅಪರಾಧ ಎಂದು ಹೇಳುವಂತಹ ಕಾನೂನುಗಳನ್ನು ರಚಿಸುವ ಅವಶ್ಯಕತೆ ಇದೆ. ರೈತರು ಬೆಳೆದ ಬೆಳೆಯನ್ನು ಖರೀದಿಸುವ ವರ್ತಕರು ಡಿಜಿಟಲ್ ವಿಧಾನದಲ್ಲಿ ರೈತನಿಗೆ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಯಾಗಬೇಕು. ಇದರಿಂದ ವರ್ತಕರು ಕಪ್ಪು ಹಣ ಚಲಾವಣೆ ಮಾಡುವುದು ತಪ್ಪುತ್ತದೆ ಎಂದು ಅವರು ತಿಳಿಸಿದರು.ರೈತನಿಗೆ 1000 ರೂ. ನೀಡಿ ವರ್ತಕರು ತಮ್ಮ ಬಿಲ್ ಬುಕ್ ನಲ್ಲಿ ತಮಗೆ ಬೇಕಾದಷ್ಟು ಬೆಲೆಯನ್ನು ನಮೂದಿಸುವ ಅವಕಾಶಗಳೂ ಇರುತ್ತವೆ. ಹೀಗಾಗಿ, ಡಿಜಿಟಲ್ ಪೇಮೆಂಟ್ ಗೆ ಒತ್ತು ನೀಡಬೇಕು. ಆಗ ರೈತರಿಗೂ ತಮಗೆ ಎಷ್ಟು ಹಣ ದೊರೆಯಿತು ಎಂದು ತಿಳಿಯುತ್ತದೆ. ವರ್ತಕರಿಂದ ವಂಚನೆಗೆ ಒಳಗಾಗುವುದು ತಪ್ಪುತ್ತದೆ ಎಂದರು.ರೈತ ಉತ್ಪಾದನಾ ಮಾರುಕಟ್ಟೆ ಎನ್ನುವುದು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕ್ಷೇತ್ರವಾಗಿದೆ. ಆರ್ ಬಿಐ ಅಧ್ಯಯನದ ವರದಿಯ ಪ್ರಕಾರ ರೈತರು ಬೆಳೆದ ಬೆಳೆಯು ಕೊನೆಯ ಗ್ರಾಹಕನಿಗೆ ಮುಟ್ಟಿದಾಗ ಇರುವ ಬೆಲೆಗೂ ರೈತ ನೀಡಿದಾಗ ಬೆಲೆಗೂ ಅಜಗಜಾಂತರ ವ್ಯತ್ಯಾಸ ಇದೆ. ರೈತನಿಗೆ ಶೇ.33 ರಷ್ಟು ಮಾತ್ರ ಬೆಲೆ ಸಿಗುತ್ತಿದೆ. ಇನ್ನು ಮಿಕ್ಕದು ವರ್ತಕರು, ಮಾರಾಟಗಾರರ ಪಾಲಾಗುತ್ತಿದೆ. ಇನ್ನೂ ಕೊಳೆತು ಹೋಗುವ ತರಕಾರಿ, ಪದಾರ್ಥಗಳಿಗೆ ಇದಕ್ಕಿಂತಲೂ ಕಡಿಮೆ ಸಿಗುವ ಸಂಭವವೇ ಜಾಸ್ತಿ ಇರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಮಾನವ ಹಕ್ಕು ಆಗಬೇಕುರೈತರು ಬೆಳೆದ ಪದಾರ್ಥಗಳಿಗೆ ಸೂಕ್ತ ಬೆಲೆ ದೊರಕಬೇಕಾಗಿರುವುದು ಮಾನವ ಹಕ್ಕು ಆಗಬೇಕು. ವಿದೇಶದಲ್ಲಿ ಸಮರ್ಪಕ ರಸ್ತೆಗಳು, ಪ್ರವಾಸೋದ್ಯಮ, ವೀಸಾ ಕೂಡ ಮಾನವ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಅಂತಹದರಲ್ಲಿ ನಮ್ಮ ದೇಶದಲ್ಲಿ ರೈತ ಬೆಳೆದ ಬೆಳೆಗೆ ಬೆಲೆ ಬರಲಿಲ್ಲ ಎಂದರೆ ಅದು ಹಕ್ಕಿಗೆ ಚ್ಯುತಿ ತಂದಂತೆ ಎಂದರು.ನಮ್ಮ ರೈತ ಮಾರುಕಟ್ಟೆ ಕಾನೂನುಗಳು ಸಮಸ್ಯೆಯ ಬೇರುಗಳನ್ನು ಸ್ಪರ್ಶಿಸುವಂತೆ ಇಲ್ಲ. ಶ್ರೀಮಂತರನ್ನು ರಕ್ಷಿಸುತ್ತವೆ. ದೇಶದ ಆಸ್ತಿಯನ್ನು ರಕ್ಷಿಸುವ ರೈತನಿಗೆ ಅನುಕೂಲವಾಗುವಂತೆ ರೂಪಿತವಾಗಿಲ್ಲ. ವಿರುದ್ಧ ದಿಕ್ಕಿನಲ್ಲಿ ಸಾಗುತ್ತಾ ವ್ಯಾಪಾರಸ್ಥರಿಗೆ ಬೇಕಾದಂತೆ ಇವೆ ಎಂದು ಅವರು ಹೇಳಿದರು.ಎಪಿಎಂಸಿಯಲ್ಲಿ ಸರ್ಕಾರವು ಸ್ವಲ್ಪ ನಿಯಂತ್ರಣ ಇರಿಸಿಕೊಂಡು ರೈತರಿಗೆ ವರ್ತಕರಿಂದ ಸಕಾಲದಲ್ಲಿ ಹಣ ಪಾವತಿ ಮಾಡಿಸಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮೂರು ಕಾಯ್ದೆಗಳು ಮಾರುಕಟ್ಟೆ ವ್ಯವಸ್ಥೆಯನ್ನು ನೆಲಸಮ ಮಾಡಲು ಹೊರಟ್ಟಿತ್ತು. ದೊಡ್ಡ ಹೋರಾಟಗಳು ನಡೆದ ಮೇಲೆ ಸರ್ಕಾರ ಬಗ್ಗಿತು ಎಂದು ಅವರು ತಿಳಿಸಿದರು.ಕಿಲ್ಪರ್ ಸಂಸ್ಥೆಯ ವತಿಯಿಂದ ಈಗಾಗಲೇ ನೂರು ಮಸೂದೆಯನ್ನು ತಯಾರಿಸಲಾಗುತ್ತಿದೆ. ಪ್ರಸ್ತುತ ನಡೆದಿರುವ ವಿಚಾರ ಸಂಕಿರಣದ ವಿಷಯವಾಗಿಯೂ ಮಸೂದೆಯನ್ನು ತಯಾರು ಮಾಡಿದರೆ, ಅಗತ್ಯ ಮುಂದಿನ ಕ್ರಮ ತಗೆದುಕೊಳ್ಳಬಹುದು ಎಂದರು.ಸಂಸ್ಥೆಯ ಕಾನೂನು ಶಿಕ್ಷಣ ಸಲಹೆಗಾರ ಪ್ರೊ.ಪಿ. ಈಶ್ವರ್ ಭಟ್ ದಿಕ್ಸೂಚಿ ಭಾಷಣ ಮಾಡಿದರು. ವಿವಿಇಟಿ ಕಾರ್ಯದರ್ಶಿ ವಿ. ಕವೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಿಲ್ಪರ್ ನಿರ್ದೇಶಕ ಡಾ.ಸಿ.ಎಸ್. ಪಾಟೀಲ್, ಸಂಶೋಧನಾ ಮುಖ್ಯಸ್ಥ ಡಾ. ರೇವಯ್ಯ ಒಡೆಯರ್, ನಿರ್ದೇಶಕ ಡಾ.ಎಸ್. ನಟರಾಜು ಇದ್ದರು.----ಕೋಟ್...ಶ್ರೀಮಂತ ವರ್ಗದವರು, ಹಣ ಉಳ್ಳವರು ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಪದಾರ್ಥಗಳ ಗರಿಷ್ಠ ಮಾರಾಟ ದರಕ್ಕಿಂತ ಒಂದೆರೆಡು ರೂಪಾಯಿ ಹೆಚ್ಚಿಗೆ ತಗೆದುಕೊಂಡರೂ ಅದನ್ನು ಅಪರಾಧ ಎಂದು ಹೇಳಿ ಕ್ರಮ ತಗೆದುಕೊಳ್ಳುವ ವ್ಯವಸ್ಥೆ ನಮ್ಮಲ್ಲಿ ಇರುವಾಗ, ರೈತರು ಬೆಳೆದ ಉತ್ಪನ್ನಗಳ ವಿಚಾರದಲ್ಲೂ ಇಂತಹ ಕಾನೂನು ರಚನೆಯಾಗಬೇಕು.- ಎಚ್.ಕೆ. ಪಾಟೀಲ್, ಕಾನೂನು ಸಚಿವ