ನಿವೃತ್ತ ಶಿರಸ್ತೇದಾರ್‌ ಮಂಜುನಾಥ್‌ಗೆ ಬೀಳ್ಕೊಡುಗೆ

KannadaprabhaNewsNetwork | Published : Jul 6, 2024 12:47 AM

ಸಾರಾಂಶ

ಆಹಾರ ಇಲಾಖೆಯ ನಿವೃತ್ತ ಶಿರಸ್ತೇದಾರ್ ಮಂಜುನಾಥ್.ಟಿ ಅವರನ್ನು ತಾಲೂಕು ಪಡಿತರ ವಿತರಕರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ನಿವೃತ್ತರಾದ ಮಂಜುನಾಥ್‌ರವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ರಂಗೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಹಳೇಬೀಡು ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ತಾಲೂಕು ಪಡಿತರ ವಿತರಕರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ನಿವೃತ್ತ ಶಿರಸ್ತೇದಾರ್ ಮಂಜುನಾಥ್.ಟಿ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ತಹಸೀಲ್ದಾರ್ ಗ್ರೇಡ್ - ೨ ಅಶೋಕ್ ಕುಮಾರ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಆಹಾರ ಶಿರಸ್ತೇದಾರರಾಗಿ ಸುದೀರ್ಘವಾಗಿ ಸೇವೆ ಸಲ್ಲಿಸಿರುವುದು ಸುಲಭದ ಮಾತಲ್ಲ. ಇಂತಹ ಜವಾಬ್ದಾರಿಯುತ ಹುದ್ದೇಯಲ್ಲಿ ಸೇವೆ ಎಷ್ಟು ಕಷ್ಟ ಎಂಬುದು ತಿಳಿದಿದೆ. ಆದರೆ ಮಂಜುನಾಥ್, ನಿಷ್ಠೆಯಿಂದ ಕೆಲಸ ಮಾಡಿ ಜನಾನುರಾಗಿಯಾಗಿದ್ದಾರೆ. ಅವರ ನಿವೃತ್ತ ಜೀವನವು ಸುಖಕರವಾಗಿರಲಿ. ಇಲಾಖೆಯಲ್ಲಿ ಹೇಗೆ ಸೇವೆ ಸಲ್ಲಿಸಿದರೋ ಹಾಗೆ ನಿವೃತ್ತಿ ನಂತರವು ಜನರ ಸೇವೆಯಲ್ಲಿ ತೊಡಗಲಿ ಎಂದರು.

ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ರಂಗೇಗೌಡ ಮಾತನಾಡಿ, ನಿವೃತ್ತರಾದ ಮಂಜುನಾಥ್‌ರವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಆದ್ದರಿಂದಲೇ ಬೇಲೂರಿನಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ. ಅವರ ನಿವೃತ್ತಿ ನಮಗೆ ಬೇಸರವಾಗಿದೆ. ಆದರೂ ನಾವು ಅವರನ್ನು ಸಂತೋಷದಿಂದ ಸನ್ಮಾನಿಸಿ ಬೀಳ್ಕೊಡುತಿದ್ದೇವೆ ಎಂದರು.

ಆಹಾರ ಶಿರಸ್ತೇದಾರ್ ವೀಣಾ ಮಾತನಾಡಿ, ಇಲಾಖೆಗೆ ಸಂಬಂಧಿಸಿದ ಕಡತಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಅವರಲ್ಲಿ ಚರ್ಚಿಸಿ ಮಾರ್ಗೋಪಾಯ ಪಡೆದಿದ್ದು ನನಗೆ ಇಲಾಖೆಯ ಕೆಲಸ ಮಾಡಲು ಸಹಕಾರಿಯಾಗಿದೆ. ಅಲ್ಲದೆ ಅವರು ಸುದೀರ್ಘವಾಗಿ ಇಲಾಖೆಯಲ್ಲಿ ಕೆಲಸ ಮಾಡಿ ಜನರನ್ನು ಸೌಜನ್ಯದಿಂದ ಮಾತನಾಡಿಸಿ ಕೆಲಸ ಮಾಡುತಿದ್ದರು. ಅವರೊಂದಿಗೆ ಕೆಲಸ ಮಾಡಿರುವುದು ನನಗೆ ಹೆಮ್ಮೆ ಎನಿಸುತ್ತದೆ. ಅವರ ನಿವೃತ್ತಿ ಬೇಸರವಾದರೂ ಸರ್ಕಾರಿ ನೌಕರರಿಗೆ ಇದು ಪ್ರಸ್ತುತ. ಆದ್ದರಿಂದ ಅವರ ನಿವೃತ್ತಿ ಜೀವನ ಆರೋಗ್ಯಕರವಾಗಿ ಸುಖವಾಗಿರಲಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿರಸ್ತೇದಾರ್ ಮಂಜುನಾಥ್.ಟಿ, ಆಹಾರ ಇಲಾಖೆ ಬಡವರಿಗೆ ಹತ್ತಿರದ ಇಲಾಖೆ. ಪಡಿತರ ಚೀಟಿಗಾಗಿ ವೃದ್ಧರು, ಅಂಗವಿಕಲರು ಬರುತ್ತಾರೆ. ಅವರೊಂದಿಗೆ ನಾವು ಸೌಜನ್ಯದಿಂದ ಮಾತನಾಡಿಸಿ ಕಾರ್ಡ್ ಇಲ್ಲದವರಿಗೆ ಹಗಲು ರಾತ್ರಿ ಎನ್ನದೆ ಪ್ರಿಂಟ್ ಮಾಡಿಸಿ ವಿತರಿಸಿದ್ದೇವೆ. ಅವರ ಆಶೀರ್ವಾದವೇ ನಾನು ಇಷ್ಟು ವರ್ಷ ಕೆಲಸ ಮಾಡಲು ಸಾಧ್ಯವಾಗಿದೆ. ನಮ್ಮಿಂದ ಬಡವರಿಗೆ, ಯಾವುದೇ ತೊಂದರೆ ಆಗಬಾರದು. ಜತೆಗೆ ಪಡಿತರ ವಿತರಿಸುವವರ ಸೇವೆ ಉತ್ತಮವಾಗಿದ್ದಾಗ ಮಾತ್ರ ನೀವು ಮಾಡುವ ಕೆಲಸದಿಂದ ಇಲಾಖೆ ಮತ್ತು ನಿಮಗೆ ಒಳ್ಳೆ ಹೆಸರು ಬರುತ್ತದೆ ಎಂದರು.

ಆಹಾರ ನಿರೀಕ್ಷಕ ಪುರುಷೋತ್ತಮ್, ಕೆಎಫ್‌ಸಿ ಗೋದಾಮು ವ್ಯವಸ್ಥಾಪಕ ರಾಜು, ತಾಲೂಕು ಪಡಿತರ ವಿತರಕರ ಸಂಘದ ಗೌರವಾಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಎನ್.ಅನಂತು, ನಿರ್ದೇಶಕರಾದ ದಯಾನಂದ್, ಮಂಜೇಗೌಡ, ಎಎಸ್‌ಐ ವಿರೂಪಾಕ್ಷ ಸೇರಿದಂತೆ ಇದ್ದರು.

Share this article