ಕನ್ನಡಪ್ರಭ ವಾರ್ತೆ ಮಂಗಳೂರು
ಹಿರಿಯ ಪತ್ರಕರ್ತ ದಿ. ಗುರುವಪ್ಪ ಎನ್.ಟಿ.ಬಾಳೆಪುಣಿ ಅವರ ನೆನಪು ಶಾಶ್ವತವಾಗಿ ಉಳಿಯುವ ದಿಶೆಯಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುವ ಬಗ್ಗೆ ದ.ಕ. ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಬಳಗ ಚಿಂತನೆ ನಡೆಸಿದೆ.ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ದಿ. ಗುರುವಪ್ಪ ಬಾಳೆಪುಣಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ದ.ಕ.ಜಿಲ್ಲಾ ಹಿರಿಯ ವಾರ್ತಾಧಿಕಾರಿ ಖಾದರ್ ಶಾ ಪ್ರಸ್ತಾಪಕ್ಕೆ ದನಿಗೂಡಿಸಿದ ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಬಾಳೆಪುಣಿ ಅವರ ಹೆಸರು ಪತ್ರಿಕಾರಂಗದಲ್ಲಿ ಶಾಶ್ವತವಾಗಿ ಉಳಿಸುವಂತಾಗಲು ವಾರ್ಷಿಕ ಪ್ರಶಸ್ತಿ ಪ್ರದಾನ ಅಥವಾ ಪೂರಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಹಿರಿಯ ಪತ್ರಕರ್ತರ ಹಾಗೂ ಸಂಘದ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.ಸರ್ಕಾರಿ ಇಲಾಖೆಗಳ ಜೊತೆಗಿನ ಬಾಳೆಪುಣಿ ಅವರ ಒಡನಾಟವನ್ನು ಮೆಲುಕು ಹಾಕಿದ ಖಾದರ್ ಶಾ, ಅಧಿಕಾರಿಗಳೊಂದಿಗೆ ಪ್ರತಿರೋಧವನ್ನೂ ಒಡ್ಡುತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ಉತ್ಸವ ಸಮಿತಿ, ಅಬ್ಬಕ್ಕ ರಾಣಿ ಉತ್ಸವ ಸಮಿತಿಗಳಿಗೆ ನಿರ್ದಿಷ್ಟ ಚೌಕಟ್ಟು ವಿಧಿಸುವಲ್ಲಿ ಪತ್ರಕರ್ತನಾಗಿ ಬಾಳೆಪುಣಿಯವರ ಛಲ ಅಪರಿಮಿತ. ಅವರ ಪತ್ರಕರ್ತ ಜೀವನ ಇತರರಿಗೆ ಮಾದರಿಯಾಗಿದ್ದು, ಅದನ್ನು ಶಾಶ್ವತವಾಗಿ ನೆನಪಿನಲ್ಲಿ ಇರಿಸಿಕೊಳ್ಳುವ ಕೆಲಸ ಆಗಬೇಕಾಗಿದೆ ಎಂದರು.
ಪ್ರೇರಣಾದಾಯ ಬದುಕು: ಹೊಸದಿಗಂತ ಪತ್ರಿಕೆ ಸಿಇಒ ಪ್ರಕಾಶ್ ಪಿ.ಎಸ್. ಮಾತನಾಡಿ, ಗುರುವಪ್ಪ ಎನ್.ಟಿ.ಅವರು ನೇರ, ನಡೆನುಡಿಯ ನಿಷ್ಠುರವಾದಿ ಪತ್ರಕರ್ತರಾಗಿದ್ದರು. ಗ್ರಾಮೀಣ ಬದುಕನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಪ್ರೇರಣಾದಾಯಕ ಬದುಕು ಎಲ್ಲರದ್ದಾಗಬೇಕು ಎಂದು ಆಶಿಸಿದರು.ನನ್ನ ಏಳ್ಗೆಯ ಮೂಲ ಬಾಳೆಪುಣಿ:
ಅಕ್ಷರಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮಾತನಾಡಿ, ಕಿತ್ತಳೆ ಮಾರುತ್ತಿದ್ದ ನನ್ನನ್ನು ಮೊದಲ ಬಾರಿಗೆ ಪರಿಚಯಿಸಿದ್ದು, ನಂತರ ಎಲ್ಲರೂ ಪರಿಚಯಿಸುವಂತೆ ಮಾಡಿದ್ದು ಬಾಳೆಪುಣಿ. ಅಂದಿನಿಂದ ಇಲ್ಲಿವರೆಗೆ ನನ್ನ ಎಲ್ಲ ಕಷ್ಟ ಸುಖಗಳಿಗೆ ಬಾಳೆಪುಣಿ ಬೆನ್ನೆಲುಬಾಗಿದ್ದರು ಎಂದರು.ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ, ನಿಷ್ಠುರವಾದಿಯಾದ ಬಾಳೆಪುಣಿಯವರು, ತನ್ನ ಸಂಸ್ಥೆಯ ತತ್ವ ಸಿದ್ಧಾಂತಗಳಿಗೆ ಒಪ್ಪಿಕೊಂಡು ಕೊನೆವರೆಗೂ ಕೆಲಸ ಮಾಡಿದ್ದಾರೆ. ಪ್ರಾಮಾಣಿಕತೆಯಿಂದ ಗೌರವದಿಂದ ದುಡಿದಿದ್ದಾರೆ. ಅವರ ಜೀವನಾದರ್ಶವೇ ಸಮಾಜಕ್ಕೆ ಮಾರ್ಗದರ್ಶನವಾಗಿದೆ ಎಂದರು.
ಹಿರಿಯ ಪತ್ರಕರ್ತ ಆನಂದ ಶೆಟ್ಟಿ ಮಾತನಾಡಿ, ಬಾಳೆಪುಣಿಯವರಲ್ಲಿ ವೃತ್ತಿ ಬದ್ಧತೆ ಇತ್ತು, ಸಾಮಾಜಿಕ ಕಳಕಳಿ ಇತ್ತು. ಕಚೇರಿ ಕೆಲಸದ ಜೊತೆ ಜೊತೆಗೆ ಸಮಾಜದಲ್ಲಿ ಕಷ್ಟದಲ್ಲಿ ಇರುವವರಿಗೆ ನೆರವಾಗುತ್ತಿದ್ದರು. ಬಡತನದಲ್ಲಿ ನಲುಗುತ್ತಿದ್ದರೂ ಹಣಕ್ಕಾಗಿ ಕೈಚಾಚಿದವರಲ್ಲ, ಪತ್ರಕರ್ತರ ಸಂಘದ ಭದ್ರಬುನಾದಿಗೆ ಬಾಳೆಪುಣಿ ಕೊಡುಗೆ ಅಪಾರ ಎಂದರು.ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಪತ್ರಕರ್ತರಾದ ರವಿ ಪೊಸವಣಿಕೆ, ಭಾಸ್ಕರ ರೈ ಕಟ್ಟ, ಬಾಳೆಪುಣಿಯವರ ಅಣ್ಣನ ಮಗ ಸುಧೀರ್ ಮತ್ತಿತತರು ನುಡಿ ನಮನ ಸಲ್ಲಿಸಿದರು. ಪುತ್ರ ಮನೇಶ್ ಹಾಜರಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.