ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರದಂದು ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಯ 2 ಪ್ರತ್ಯೇಕ ಪ್ರಕರಣಗಳು ವರದಿಯಾಗಿದ್ದು, ಓರ್ವ ಪುರುಷ ಮತ್ತು ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ನೀರುಗಂಟಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ 7ನೇ ಹೊಸಕೋಟೆ ಅಂದಗೋವೆ ಪೈಸಾರಿಯಲ್ಲಿ ಶನಿವಾರ ನಡೆದಿದೆ.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಅಂದಗೋವೆ ಪೈಸಾರಿ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹುಸೇನ್ ಎಂಬವರು ಎಂದಿನಂತೆ ನೀರು ಸರಬರಾಜು ಕರ್ತವ್ಯಕ್ಕೆಂದು ತೆರಳುತ್ತಿದ್ದ, ಸಂದರ್ಭ ತೋಟದಿಂದ ಪ್ರತ್ಯಕ್ಷವಾದ ಕಾಡಾನೆ ದಾಳಿಗೆ ಮುಂದಾಗಿದೆ. ಕೂಡಲೇ ಜಾಗೃತರಾದ ಹುಸೈನ್ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲಿದ್ದ ಚರಂಡಿ ಮೋರಿ ಪೈಪ್‌ನೊಳಕ್ಕೆ ನುಸುಳಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಕಾಡಾನೆ ಪೈಪ್‌ಗೆ ಕೋರೆಯಿಂದ ತಿವಿದಿದ್ದು, ಕಾಂಕ್ರೀಟ್ ಪೈಪ್ ತೂತಾಗಿ, ಹುಸೈನ್ ಅವರ ಕೈ ಮುರಿದಿದೆ.ಆನೆ ಅಲ್ಲಿಂದ ತೆರಳಿದ ಬಳಿಕ ಸ್ಥಳೀಯರು ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.
2ನೇ ಪ್ರಕರಣ:ಇನ್ನೊಂದು ಪ್ರಕರಣದಲ್ಲಿ ಕಂಬಿಬಾಣೆ ಅತ್ತೂರು ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ಲೂರು ತೋಟದಲ್ಲಿ ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿದೆ. ಕಾರ್ಮಿಕರು ತೋಟದ ಕೆಲಸಕ್ಕೆ ತಯಾರಾಗಿ ನಿಂತಿದ್ದ ವೇಳೆ ಏಕಾಏಕಿ ಆ ಗುಂಪಿನತ್ತ ನುಗ್ಗಿದ ಕಾಡಾನೆ ಮಹಾದೇವಮ್ಮ (57) ಎಂಬುವವರ ಮೇಲೆ ದಾಳಿ ನಡೆಸಿದೆ. ಮಹಿಳೆಯ ತೊಡೆಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೂಡಲೇ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿ ದೇವಯ್ಯ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.