ಪಶ್ಚಿಮಘಟ್ಟದ ಮಡಿಲಲ್ಲಿ ರಾಮ ಲಕ್ಷ್ಮಣನ ಪ್ರತ್ಯೇಕ ದೇಗುಲಗಳು

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ರಾಮ ಸೀತೆಯೊಂದಿಗೆ ವನವಾಸಕ್ಕೆ ಬಂದ ವೇಳೆ ಇಂದಿನ ಜಾಗಟೆ ಗ್ರಾಮದಲ್ಲಿ ಲಕ್ಷ್ಮಣನ ಕಾಲಿಗೆ ಮುಳ್ಳು ಚುಚ್ಚಿ ನಡೆದಾಡದ ಸ್ಥಿತಿ ತಲುಪಿದ್ದರಿಂದ ಲಕ್ಷ್ಮಣ ಒಂದು ದಿನ ಗ್ರಾಮದಲ್ಲೆ ನೆಲೆ ನಿಂತಿದ್ದ ಎನ್ನಲಾಗುತ್ತದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಶ್ರೀರಾಮನು ಪತ್ನಿ ಸೀತೆ ಹಾಗೂ ಸಹೋದರ ಲಕ್ಷ್ಮಣನ ಜತೆಗೂಡಿ ವನವಾಸದ ವೇಳೆ ತಾಲೂಕಿನಲ್ಲಿ ಸಂಚರಿಸಿದ ಕುರುಹಾಗಿ ಇಂದಿಗೂ ಪಶ್ಚಿಮಘಟ್ಟದ ಸನಿಹದಲ್ಲಿರುವ ಹೊಂಗಡಹಳ್ಳ, ಜಗಾಟ ಗ್ರಾಮದಲ್ಲಿ ರಾಮಲಕ್ಷ್ಮಣನ ಪುರಾತನ ದೇವಸ್ಥಾನಗಳಿದ್ದು ವರ್ಷಕ್ಕೊಮ್ಮೆ ಶಾಸ್ತ್ರ, ಸಂಪ್ರದಾಯಬದ್ಧವಾಗಿ ಇಂದಿಗೂ ಜಾತ್ರೆ,ಸುಗ್ಗಿ ನಡೆಸಿಕೊಂಡು ಬರಲಾಗುತ್ತಿದೆ.

ತಾಲೂಕಿನ ಪಶ್ಚಿಮಘಟ್ಟದಂಚಿನಲ್ಲಿರುವ ಹೊಂಗಡಹಳ್ಳ ಗ್ರಾಮದಲ್ಲಿ ರಾಮನ ದೇವಸ್ಥಾನವಿದ್ದರೆ, ಜಗಾಟ ಗ್ರಾಮದಲ್ಲಿ ಲಕ್ಷ್ಮಣನ ದೇವಸ್ಥಾನವಿದ್ದು ಜಾತ್ರೆ ವೇಳೆ ಎರಡು ದೇವರಿಗೆ ಏಕಕಾಲಕ್ಕೆ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದ್ದು ಸಂಪ್ರದಾಯಬದ್ಧವಾಗಿ ನಡೆದುಕೊಳ್ಳುವವರಿಗೆ ಒಳಿತಾಗಲಿದೆ ಎಂಬ ನಂಬಿಕೆ ಜನಜನಿತವಾಗಿದೆ. ಇತಿಹಾಸ: ಶ್ರೀರಾಮ ಸೀತೆಯೊಂದಿಗೆ ವನವಾಸಕ್ಕೆ ಬಂದ ವೇಳೆ ಇಂದಿನ ಜಾಗಟೆ ಗ್ರಾಮದಲ್ಲಿ ಲಕ್ಷ್ಮಣನ ಕಾಲಿಗೆ ಮುಳ್ಳು ಚುಚ್ಚಿ ನಡೆದಾಡದ ಸ್ಥಿತಿ ತಲುಪಿದ್ದರಿಂದ ಲಕ್ಷ್ಮಣ ಒಂದು ದಿನ ಗ್ರಾಮದಲ್ಲೆ ನೆಲೆ ನಿಂತಿದ್ದ ಎನ್ನಲಾಗುತ್ತಿದ್ದರೆ, ಸೀತೆಯೊಂದಿಗೆ ಸಂಚರಿಸುತ್ತಿದ್ದ ರಾಮ ಲಕ್ಷ್ಮಣ ಆಗಮಿಸುವವರೆಗೂ ಹೊಂಗಡಹಳ್ಳ ಗ್ರಾಮದಲ್ಲಿ ಒಂದು ದಿನ ನೆಲೆಸಿ ತೆರಳಿದ ಎಂಬ ಐತಿಹ್ಯ ಹಿರಿಯರ ಬಾಯಿಂದ ಬಾಯಿಗೆ ಹರಡಿಕೊಂಡು ಬಂದಿದೆ. ಜಾಗಟೆ ಗ್ರಾಮದಲ್ಲಿ ಲಕ್ಷ್ಮಣ ತಂಗಿದ್ದ ಪ್ರದೇಶದಲ್ಲಿ ಪುರಾತನ ಲಕ್ಷ್ಮಣನ ದೇವಸ್ಥಾನ ತಲೆಎತ್ತಿದ್ದರೆ, ಹೊಂಗಡಹಳ್ಳದ ದುದ್ದವಳ್ಳಿ ಪ್ರದೇಶದಲ್ಲಿ ಲಕ್ಷ್ಮಣನಿಗಾಗಿ ಕಾದ ಪ್ರದೇಶದಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ದುದ್ದವಳ್ಳಿ ಬಡಾವಣೆಯಲ್ಲಿರುವ ಮೂಲ ರಾಮನ ದೇವಸ್ಥಾನದಲ್ಲಿ ಕಲ್ಲಿನಲ್ಲಿ ಶ್ರೀರಾಮ,ಲಕ್ಷ್ಮಣ, ಸೀತೆ ಹಾಗೂ ಆಂಜನೇಯನ ಚಿತ್ರಗಳಿದ್ದು ಈ ಕಲ್ಲಿಗೆ ಪೂಜಿಸುವ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ.

ದೇವಸ್ಥಾನ ಜೀರ್ಣೋದ್ಧಾರ: ಹೊಂಗಡಹಳ್ಳ ಗ್ರಾಮದ ದುದ್ದವಳ್ಳಿಯಲ್ಲಿರುವ ಮೂಲ ಶ್ರೀರಾಮ ದೇವಸ್ಥಾನ ಚಿಕ್ಕದಾಗಿದ್ದು ಇಂದಿಗೆ ಮೂರು ಬಾರಿ ಜೀರ್ಣೋದ್ಧಾರಗೊಳಿಸುವ ಮೂಲಕ ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ. ಇದೆ ರೀತಿ ಜಗಾಟ ಗ್ರಾಮದಲ್ಲಿದ್ದ ಚಿಕ್ಕದೇವಸ್ಥಾನವನ್ನು ಜಾಗಟೆ ಗ್ರಾಮದ ಶಿವಕುಮಾರ್‌ ಎಂಬುವವರ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಜೀರ್ಣೋದ್ಧಾರಗೊಳಿಸಲಾಗಿದ್ದು ೨೦೧7ರಲ್ಲಿ ಆದಿಚುಂಚುನಗಿರಿ ಶ್ರೀಗಳಿಂದ ಉದ್ಘಾಟಿಸಲಾಗಿದೆ.

ಜಾತ್ರೆ: ದೀಪಾವಳಿ ಹಬ್ಬಕ್ಕೂ ಒಂದು ವಾರ ಮುನ್ನ ಸಿಗುವ ಗುರುವಾರ ಶ್ರೀರಾಮ, ಲಕ್ಷ್ಮಣನ ಜಾತ್ರೆ ತಲೆತಲಾಂತರದಿಂದ ನಡೆದುಕೊಂಡು ಬರುತ್ತಿದ್ದು ಗ್ರಾಮಸ್ಥರೆಲ್ಲ ಸೇರಿ ದುದ್ದವಳ್ಳಿ ಬಡಾವಣೆಯಲ್ಲಿರುವ ಶ್ರೀರಾಮದೇವರ ವಿಗ್ರಹವನ್ನು ಪೂಜಾವಿಧಿವಿಧಾನದ ಮೂಲಕ ನಸುಕಿನ ವೇಳೆ ಗ್ರಾಮದ ಹೊರವಲಯದ ಹಳೆಕೆರೆ ಬೆಟ್ಟಕ್ಕೆ ಕರೆತಂದು ಪೂಜಿಸಿ ಹಣ್ಣುಕಾಯಿ ಅರ್ಪಿಸುವ ಸಂಪ್ರದಾಯವಿದೆ. ಈ ಆಚರಣೆಯನ್ನು ಲಕ್ಷ್ಮಣ ದೇವರ ಕರೆತರಲು ಶ್ರೀರಾಮ ತೆರಳುತ್ತಾನೆ ಎಂಬ ನಂಬಿಕೆಯಾಗಿದೆ. ಇದೇ ಸಮಯದಲ್ಲಿ ಜಾಗಟ ಗ್ರಾಮಸ್ಥರು ಮೂಲ ದೇವಸ್ಥಾನದಿಂದ ಹೊರಟು ಗ್ರಾಮ ಹೊರವಲಯದ ದೇವರಬೆಟ್ಟಕ್ಕೆ ಪೂಜಾ ಸಮಾಗ್ರಿಗಳೊಂದಿಗೆ ತೆರಳಿ ಅಲ್ಲಿರುವ ಕಲ್ಲಿನ ಗುಡಿಯಲ್ಲಿ ಪೂಜೆ ಸಲ್ಲಿಸಿ ಹಣ್ಣುಕಾಯಿ ಅರ್ಪಿಸಿ ದಡಾಕಿ(ಪಟಾಕಿ,ಗರ್ನಲ್) ಸಿಡಿಸಲಾಗುತ್ತಿದ್ದು, ಈ ಸದ್ದು ಬಂದ ನಂತರ ಹೊಂಗಡಹಳ್ಳ ಗ್ರಾಮಸ್ಥರು ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ದೇವರ ವಿಗ್ರಹವನ್ನು ಊರುಬಾಗಿಲ ಮೂಲಕ ಕರೆತರಲಾಗುತ್ತದೆ. ಈ ವೇಳೆ ಕುಶಲತೋಪು ಹಾಗೂ ನೂರಾರು ಇಡುಗಾಯಿ ಅರ್ಪಿಸಿ ಮತ್ತೆ ದೇವಸ್ಥಾನ ಸಮೀಪ ಕರೆತಂದು ಪ್ರದಕ್ಷಿಣೆ ಹಾಕಿದ ನಂತರ ಜಾತ್ರೆಮಾಳಕ್ಕೆ (ಜಾತ್ರೆನಡೆಯುವ ಸ್ಥಳ) ತಂದು ದೇವರಕಟ್ಟೆಯ ಪ್ರದಕ್ಷಿಣೆಯ ನಂತರ ಪ್ರತಿಷ್ಠಾಪಿಸಿ ಹಣ್ಣುಕಾಯಿ ಸಮರ್ಪಿಸಲಾಗುತ್ತಿದೆ. ಅತ್ತ ಜಗಾಟ ಗ್ರಾಮದಲ್ಲಿ ಪೂಜಾವಿಧಾನಗಳು ನಡೆದ ನಂತರ ಜಗಾಟ ಗ್ರಾಮಸ್ಥರು ಹೊಂಗಡಹಳ್ಳ ಗ್ರಾಮದಲ್ಲಿ ನಡೆಯುವ ಶ್ರೀ ರಾಮದೇವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಗೂ ಮುನ್ನ ಎರಡು ದೇವರನ್ನು ಬೆಟ್ಟಕ್ಕೆ ಕರೆದೊಯ್ಯವುದು ರಾಮಲಕ್ಷ್ಮಣನನ್ನು ಭೇಟಿ ಮಾಡಿಸುವ ಉದ್ದೇಶವಾಗಿದ್ದು ಎರಡು ಬೆಟ್ಟದಿಂದ ದೇವರ ನೇರ ದರ್ಶನ ಲಭ್ಯವಾಗಲಿದೆ ಎನ್ನಲಾಗುತ್ತಿದೆ. ಸುಗ್ಗಿ: ಪ್ರತಿವರ್ಷ ಶ್ರೀರಾಮ, ಲಕ್ಷ್ಮಣ ದೇವರ ಮೂರು ದಿನಗಳ ಸುಗ್ಗಿ ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತಿದ್ದು ಹಲವು ಕಟ್ಟುಪಾಡುಗಳ ನಡುವೆ ನಡೆಯುವ ಸುಗ್ಗಿಗೆ ತನ್ನದೆ ಮಹತ್ವವಿದ್ದು ಸುಗ್ಗಿ ನಡೆಯುವ ಮುನ್ನ ಗ್ರಾಮದಲ್ಲಿ ಹಸಿರು ಕಡಿಯಬಾರದು ಮಾಂಸಮಡ್ಡಿ ಮಾಡಬಾರದು, ಕರಿದ ತಿಂಡಿ ಸಿದ್ಧಪಡಿಸಬಾರದು ಎಂಬ ಷರತ್ತುಗಳನ್ನು ಸಾರು ಹಾಕುವ ಮೂಲಕ ಸುಗ್ಗಿ ವಿಧಿವತ್ತಾಗಿ ಆರಂಭಗೊಳ್ಳುತ್ತಿದ್ದು ಸೂತಕವಿಲ್ಲದ ಕುಟುಂಬಗಳು ಮಾತ್ರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶವಿದ್ದು ತರುಣಿಯರು ಮಾತ್ರ ಸೊಡ್ಲು ಹೊರಲು ಅವಕಾಶವಿದೆ. ದುದ್ದುವಳ್ಳಿ,ಹೆಬ್ಬಾಗಿಲು, ಜಗಾಟ, ಹೊಂಗಡಹಳ್ಳ ಗ್ರಾಮದ ಮದುವೆಯಾಗದ ಹೆಣ್ಣುಮಕ್ಕಳು ಸುಗ್ಗಿಕಟ್ಟೆಗೆ ಸೊಡ್ಲು ಹೊತ್ತು ಬಂದು ಇಡೀ ದಿನ ದೀಪ ಆರದಂತೆ ಕಾಪಾಡಿಕೊಂಡು ಒಳಿತು ಕೇಳಿದರೆ ಮುಂದಿನ ವರ್ಷದ ವೇಳೆ ಬಯಸಿದಂತೆ ನಡೆಯಲಿದೆ ಎಂಬ ಪ್ರತೀತಿ ಇದೆ.

ಮಲ್ಲು ಹೊಡೆದಾಟ: ಸುಗ್ಗಿಯ ಅಂಗವಾಗಿ ಹೊಂಗಡಹಳ್ಳ, ಜಗಾಟ, ಹೆಬ್ಬಾಗಿಲು ಹಾಗೂ ದುದ್ದುವಳ್ಳಿಯಿಂದ ಒಣಗಿದ ಬಾಳೆ ಎಲೆ(ಬಾಳೆಜೋಲ್ಲು)ನಿಂದ ಸಿದ್ಧಪಡಿಸಿದ ತಲಾ ನಾಲ್ಕು ಜೊತೆ ಮಲ್ಲು ಸಿದ್ಧಪಡಿಸಿ ಸುಗ್ಗಿಕಟ್ಟೆಗೆ ತರುವ ಭಕ್ತರು ದೊಡ್ಡಸುಗ್ಗಿಯ ಮರುದಿನ ನಲ್ಯಾಡಿಮಕ್ಕಿ ಎಂಬಲ್ಲಿ ಕೊಂತನಮನೆ ಕುಟುಂಬ ಹಾಗೂ ಕಳಲೆಮನೆ ಕುಟುಂಬಗಳು ಮಲ್ಲುನಲ್ಲಿ ಕಾಳಗ ನಡೆಸುತ್ತಿದ್ದು ಈ ವೇಳೆ ಹೊರಹೊಮ್ಮುವ ಕೆಂದಿಲ್ಲು ನೆಲಕ್ಕೆ ಬೀಳದಂತೆ ಗೋಣಿಚೀಲದಲ್ಲಿ ಹಿಡಿಯುವ ಪದ್ಧತಿ ರೂಢಿಗತವಾಗಿ ಬಂದಿದೆ. ಈ ಕಾಳಗದಲ್ಲಿ ಅನ್ಯ ಕುಟುಂಬಗಳು ಪಾಲ್ಗೊಳ್ಳವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ.

*ಹೇಳಿಕೆ

ಅತ್ಯಂತ ಪುರತಾನ ದೇವಸ್ಥಾನಗಳನ್ನು ಇತ್ತೀಚೆಗೆ ನವೀಕರಿಸಲಾಗಿದ್ದು ಇಂದಿಗೂ ಸಂಪ್ರದಾಯಬದ್ದವಾಗಿ ಜಾತ್ರೆ, ಸುಗ್ಗಿಗಳು ನಡೆಯುತ್ತಿದ್ದು ಅಂದು ಗ್ರಾಮದ ಎಲ್ಲರು ಗ್ರಾಮಕ್ಕೆ ಮರಳಿ ಜಾತ್ರೆ, ಸುಗ್ಗಿಯಲ್ಲಿ ಪಾಲ್ಗೊಳ್ಳುತ್ತಾರೆ. ಚಿದನ್, ಹೊಂಗಡಹಳ್ಳ, ಗ್ರಾಮಸ್ಥ

*ಹೇಳಿಕೆ-2ಜಾತ್ರೆ ನಡೆಯುವ ವೇಳೆ ಇದ್ದ ಹಲವು ಕಠಿಣ ನಿಯಮಗಳನ್ನು ಇಂದಿಗೆ ಹೊಂದಿಕೊಂಡಂತೆ ಮಾರ್ಪಡಿಸಿಕೊಂಡು ಜಾತ್ರೆ ಉತ್ಸವ ನಡೆಸುತ್ತಿದ್ದೇವೆ. ದೇವಸ್ಥಾನದ ನಿಖರ ಇತಿಹಾಸದ ಬಗ್ಗೆ ಯಾರಿಗೂ ತಿಳಿದಿಲ್ಲ. ಸಾಮಾನ್ಯವಾಗಿ ಈ ಎರಡು ಗ್ರಾಮಗಳಲ್ಲಿರುವ ದೇವಸ್ಥಾನಗಳು ಶ್ರೀರಾಮನ ಕಾಲದವು ಎನ್ನಲಾಗುತ್ತದೆ. ಶಿವಕುಮಾರ್, ಜಗಾಟ ಗ್ರಾಮಸ್ಥ

Share this article