ಜೀತದಾಳು ಪ್ರಕರಣ ಮರು ತನಿಖೆಗೆ ನಿರ್ಧಾರ

KannadaprabhaNewsNetwork | Published : Mar 8, 2024 1:47 AM

ಸಾರಾಂಶ

2023ರ ಡಿಸೆಂಬರ್‌ ನಲ್ಲಿ ಎಚ್.ಡಿ. ಕೋಟೆ ತಾಲೂಕಿನ ಭೀಮನಹಳ್ಳಿ ಸಮೀಪದ ಕೈಲಾಸಪುರದ ಈರೇಗೌಡರ ತೋಟದ ಮನೆಯಲ್ಲಿ ನೇಪಾಳ ಮೂಲದ ನಿರ್ಮಲಾ-ಗೋಪಾಲ ದಂಪತಿಯನ್ನು ಕರೆತಂದು ಜೀತದಾಳಾಗಿರಿಸಿಕೊಂಡು ಹಿಂಸೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ಎಚ್.ಡಿ. ಕೋಟೆ ತಾಲೂಕು ಆಡಳಿತ ಸ್ಥಳಕ್ಕೆ ಧಾವಿಸಿ ನಿರ್ಮಲಾ ಮತ್ತವರ ಇಬ್ಬರು ಅಪ್ರಾಪ್ತ ಮಕ್ಕಳನ್ನು ರಕ್ಷಿಸಿತ್ತು. ಪತಿ ಗೋಪಾಲ ಮಾಲೀಕನ ಹಿಂಸೆ ತಾಳದೇ ಕೊಡಗು ಜಿಲ್ಲೆಗೆ ತೆರಳಿದ್ದನೆಂದು ತಿಳಿಸಲಾಗಿತ್ತು. ನೇಪಾಳ ದಂಪತಿ ಜೀತದಾಳುಗಳಾಗಿ ದುಡಿಯುತ್ತಿದ್ದರೆ ಎಂಬ ಕುರಿತು ಅಂದಿನ ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ತನಿಖೆ ನಡೆಸಿದ್ದರು.

- ಹುಣಸೂರು ಉಪವಿಭಾಗ ಮಟ್ಟದ ಜೀತದಾಳು ವಿಮುಕ್ತರ ಜಾಗೃತಿ ಸಮಿತಿ ಸಭೆಯಲ್ಲಿ ತೀರ್ಮಾನ--------

ಕನ್ನಡಪ್ರಭ ವಾರ್ತೆ ಹುಣಸೂರು

ಹುಣಸೂರು ಉಪವಿಭಾಗ ವ್ಯಾಪ್ತಿಯ ಎಚ್.ಡಿ. ಕೋಟೆ ತಾಲೂಕಿನ ಕೈಲಾಸಪುರದಲ್ಲಿ ನೇಪಾಳದ ದಂಪತಿಯನ್ನು ಜೀತದಾಳುಗಳನ್ನಾಗಿ ಇರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆ ನಡೆಸಲು ಹುಣಸೂರು ಉಪವಿಭಾಗ ಮಟ್ಟದ ಜೀತದಾಳು ವಿಮುಕ್ತರ ಜಾಗೃತಿ ಸಮಿತಿ ಸಭೆಯಲ್ಲಿ ತೀರ್ಮಾನಿಸಿತು.

ಗುರುವಾರ ಸಮಿತಿ ಅಧ್ಯಕ್ಷ ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ಪ್ರಸ್ತಾಪಿಸಿದ ಜೀವಿಕ ಸಂಸ್ಥೆಯ ಜಿಲ್ಲಾ ಸಂಚಾಲಕ ಬಸವರಾಜು, 2023ರ ಡಿಸೆಂಬರ್‌ ನಲ್ಲಿ ಎಚ್.ಡಿ. ಕೋಟೆ ತಾಲೂಕಿನ ಭೀಮನಹಳ್ಳಿ ಸಮೀಪದ ಕೈಲಾಸಪುರದ ಈರೇಗೌಡರ ತೋಟದ ಮನೆಯಲ್ಲಿ ನೇಪಾಳ ಮೂಲದ ನಿರ್ಮಲಾ-ಗೋಪಾಲ ದಂಪತಿಯನ್ನು ಕರೆತಂದು ಜೀತದಾಳಾಗಿರಿಸಿಕೊಂಡು ಹಿಂಸೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ಎಚ್.ಡಿ. ಕೋಟೆ ತಾಲೂಕು ಆಡಳಿತ ಸ್ಥಳಕ್ಕೆ ಧಾವಿಸಿ ನಿರ್ಮಲಾ ಮತ್ತವರ ಇಬ್ಬರು ಅಪ್ರಾಪ್ತ ಮಕ್ಕಳನ್ನು ರಕ್ಷಿಸಿತ್ತು. ಪತಿ ಗೋಪಾಲ ಮಾಲೀಕನ ಹಿಂಸೆ ತಾಳದೇ ಕೊಡಗು ಜಿಲ್ಲೆಗೆ ತೆರಳಿದ್ದನೆಂದು ತಿಳಿಸಲಾಗಿತ್ತು. ನೇಪಾಳ ದಂಪತಿ ಜೀತದಾಳುಗಳಾಗಿ ದುಡಿಯುತ್ತಿದ್ದರೆ ಎಂಬ ಕುರಿತು ಅಂದಿನ ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ತನಿಖೆ ನಡೆಸಿದ್ದರು. ಆದರೆ ತನಿಖಾ ವರದಿಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದಾರೆಂದು ಖಚಿತತೆ ಸಿಗದ ಕಾರಣ ದಂಪತಿ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ. ಆದರೆ ನಿರ್ಮಲ ದಂಪತಿಯನ್ನು ಜೀತದಾಳಾಗಿ ದುಡಿಸಿಕೊಂಡಿದ್ದಾರೆ ಎಂದು ಸಮಿತಿ ನಂಬುತ್ತದೆ.

ಜೀತದಾಳು ಎನಿಸಿಕೊಳ್ಳಲು ಮುಂಗಡವಾಗಿ ಹಣ ಪಡೆಯುವುದು, ಬೇರೆ ಕಡೆ ಕೆಲಸ ಮಾಡದಂತೆ ತಡೆಯುವುದು, ಅವಧಿ ಮೀರಿ ದುಡಿಸಿಕೊಳ್ಳುವುದು ಮುಂತಾದವುಗಳನ್ನು ಪರಿಗಣಿಸಲಾಗುವುದು. ಈ ಪ್ರಕರಣದಲ್ಲಿ ದಂಪತಿಯನ್ನು ಬೇರೆಕಡೆ ದುಡಿಯಲು ಅವಕಾಶ ನೀಡದೇ ಇರುವುದು ಕಂಡುಬಂದಿದೆ ಎಂದರು.

ನಿರ್ಮಲಾ ಮೃತಪಟ್ಟಿದ್ದಾರೆಯೇ?

ಗುರುವಾರ ತಮಗೆ ಮಾಹಿತಿ ದೊರೆತಿದ್ದು, ನಿರ್ಮಲಾ ತನ್ನ ಪುಟ್ಟಮಕ್ಕಳನ್ನು ಮೆಜಿಸ್ಟಿಕ್‌ ನಲ್ಲಿ ಬಿಟ್ಟು ಇದೀಗ ಮೃತಪಟ್ಟಿದ್ದಾರೆಂದು ಕೆಲ ಮೂಲಗಳು ತಿಳಿಸಿವೆ. ಖಚಿತತೆ ಇನ್ನೂ ಸಿಕ್ಕಿಲ್ಲ. ಒಟ್ಟಿನಲ್ಲಿ ಜೀತದಾಳುಗಳಾಗಿ ಕುಟುಂಬ ದುಡಿದಿರುವ ಅನುಮಾನ ನಮಗಿದೆ. ಹಾಗಾಗಿ ಪ್ರಕರಣವನ್ನು ಮರುತನಿಖೆ ಮಾಡಬೇಕೆಂದು ಆಗ್ರಹಿಸಿದರು. ಇದಕ್ಕೆ ಸಮಿತಿ ಸದಸ್ಯರು ದನಿಗೂಡಿಸಿದರು.

ಉಪವಿಭಾಗಾಧಿಕಾರಿ ಮಾತನಾಡಿ, ಸಮಿತಿ ಮರುತನಿಖೆಗೆ ನಿರ್ಣಯಿಸಿದಲ್ಲಿ ತಾವು ತನಿಖೆ ನಡೆಸಲು ಸಿದ್ಧ. ತೋಟದ ಮಾಲೀಕ, ನಿರ್ಮಲಾರ ಪತಿಯನ್ನು ಕರೆಯಿಸಿ ಮಾಹಿತಿ ಪಡೆಯುತ್ತೇನೆ. ನಿರ್ಮಲಾರ ಸ್ಥಿತಿಯ ಕುರಿತು ಖಚಿತ ಮಾಹಿತಿ ಇಲ್ಲ. ಈ ಕುರಿತು ಮಾಹಿತಿಗಾಗಿ ಕ್ರಮವಹಿಸಲಾಗುವುದು ಎಂದರು.

ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ, ಜೀವಿಕಾ ಸಂಸ್ಥೆಯ ಬಸವರಾಜು ಮಾತನಾಡಿದರು.

ಪಿರಿಯಾಪಟ್ಟಣ, ಕೆ.ಆರ್. ನಗರ, ಸರಗೂರು, ಎಚ್.ಡಿ. ಕೋಟೆಯ ತಹಸೀಲ್ದಾರ್‌ ಗಳು, ಇಒಗಳು ಇನ್ನಿತರ ಅಧಿಕಾರಿಗಳು ಸಮಿತಿ ಸದಸ್ಯರಾದ ಚಂದ್ರಶೇಖರ್, ಮಹದೇವ್, ಜೀವಿಕಲಕ್ಷ್ಮೀ ಇದ್ದರು.

Share this article