ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ಕಳೆದ ೧೦ ದಿನಗಳಿಂದ ನ್ಯಾಯಬೆಲೆ ಅಂಗಡಿಗಳ ಮುಂದೇ ಜನರು ಸರತಿ ಸಾಲಿನಲ್ಲಿ ನಿಂತು ಕೊನೆಗೆ ಸರ್ವರ್ ಸಮಸ್ಯೆಯಿಂದ ಮನೆಗೆ ಮರಳಿ ಹೋಗುವಂತಹ ದಯನೀಯ ಸ್ಥಿತಿ ಸಾರ್ವಜನಿಕರದ್ದಾಗಿದೆ. ಸರ್ವರ್‌ನ್ನು ಹಲವು ಇಲಾಖೆಗಳು ಅವಲಂಬಿಸುತ್ತಿದ್ದು, ಮುಖ್ಯವಾಗಿ ಹೊಸ ಕಾರ್ಡ್ ಹಾಗೂ ತಿದ್ದುಪಡಿಗೂ ಸಮಸ್ಯೆಯಾಗಿದೆ.
ತಿಂಗಳು ಮುಗಿಯುತ್ತಾ ಬಂದರೂ ಅನ್ನಭಾಗ್ಯದ ಅಕ್ಕಿಗಾಗಿ ನಿತ್ಯದ ಕೆಲಸ ಕಾರ್ಯ ಬದಿಗಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂದೆ ಅಲೆದಾಡುವ ಸ್ಥಿತಿ ಎದುರಾಗಿದ್ದು, ಕೂಲಿನಾಲಿ ಮಾಡಿ ಜೀವನ ಸಾಗಿಸುವ ಬಡ ಕುಟುಂಬದ ಸಮಸ್ಯೆಗಳಂತೂ ಹೇಳತೀರದು. ನ್ಯಾಯ ಬೆಲೆ ಅಂಗಡಿ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬಂದರೂ ನಮಗೇನು ಸಂಬಂಧಿವಿಲ್ಲದಂತೆ ಕೈಕಟ್ಟಿ ಕುಳಿತ ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವನೆ ಸಾಧುವಲ್ಲ.ಪಟ್ಟಣದ ಜನತಾ ಬಜಾರ್ ನ್ಯಾಯಬೆಲೆ ಅಂಗಡಿಯಲ್ಲಿಯೇ ಅಂದಾಜು ೧೬೭೦ಕ್ಕೂ ಹೆಚ್ಚು ಪಡಿತರದಾರರು ಇದ್ದು, ಪಂಚಾಯ್ತಿ ವ್ಯಾಪ್ತಿಯಲ್ಲಿ ೩ಸಾವಿರಕ್ಕೂ ಹೆಚ್ಚು ಅರ್ಹ ಪಡಿತರದಾರರು ಇದ್ದಾರೆ. ಸಾಲು ಸಾಲು ಹಬ್ಬ ಹರಿದಿನಗಳ ಇಂತಹ ಸಂದರ್ಭದಲ್ಲಿ ಪಡಿತರ ನೀಡದೇ ಇದ್ದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಳೆದ ೧೫ ದಿನಗಳಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸರ್ವರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬಯೋಮೆಟ್ರಿಕ್‌ಗಾಗಿ ಇಲಾಖೆ ವೆಬ್ ಸೈಟ್ ಆನ್ ಮಾಡಿದರೆ ದಿಸ್ ಸೈಟ್ ಕಾಂಟ್ ಬೀ ರೀಚಡ್ ಎಂದು ಪರದೆ ಮೇಲೆ ಕಾಣಿಸಿಕೊಳ್ಳುವ ಮೆಸೇಜ್ ಓದಿ ಪಡಿತರ ವಿತರಕರು ಸುಸ್ತಾಗಿದ್ದಾರೆ.
ಸರ್ವರ್ ಸಮಸ್ಯೆ ರಾಜ್ಯಮಟ್ಟದಲ್ಲಿಯೇ ಇರುವುದರಿಂದ ಪಡಿತರ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ. ಬೆಳಗ್ಗೆ ೭ಗಂಟೆಯಿಂದ ರಾತ್ರಿ ೧೦ ಗಂಟೆವರೆಗೆ ಪಡಿತರ ಹಂಚಿಕೆ ಮಾಡಲು ಮೌಖಿಕವಾಗಿ ನ್ಯಾಯಬೆಲೆ ಅಂಗಡಿಯವರಿಗೆ ತಿಳಿಸಲಾಗಿದೆ. ಸಮಸ್ಯೆ ಸರಿಪಡಿಸುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಹಸೀಲ್ದಾರ್ ಅನಿಲ್ ಬಡಿಗೇರ ತಿಳಿಸಿದ್ದಾರೆ.