ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಜೆ.ಎಲ್ ಜವರೇಗೌಡ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ದೇವದಾಸಿಯರಿಗೆ ಪಿಂಚಣಿ, ಎಚ್‌ಐವಿ ಸೊಂಕಿತರಿಗೆ ಸಹಾಯಧನ, ದಮನಿತ ಮಹಿಳೆಯರಿಗೆ ಹಾಗೂ ವಿಕಲಚೇತನ ಮಹಿಳೆಯರಿಗೆ ಸಾಕಷ್ಟು ರೀತಿಯ ಸಹಾಯಧನವನ್ನು ನೀಡುತ್ತಿದೆ. ಕಳೆದ ವರ್ಷ ಉದ್ಯೋಗಿನಿ ಯೋಜನೆಯಡಿ ೮೩,೦೦೦ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದು, ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಉದ್ಯೋಗಿನಿ ಯೋಜನೆಯಡಿ ಗುರಿಯನ್ನು ಜಾಸ್ತಿ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.ಬ್ಯಾಂಕ್‌ಗಳಲ್ಲಿ ಸಾಲ ನೀಡಲು ತೊಂದರೆ:
ಮಹಿಳೆಯರ ಸಬಲೀಕರಣಕ್ಕಾಗಿ ಕಿರುಸಾಲ ಯೋಜನೆ, ಮಾರುಕಟ್ಟೆ ನೆರವು ಹಾಗೂ ಸ್ತ್ರೀಶಕ್ತಿ ಸಂಘಗಳ ಒಕ್ಕೂಟಕ್ಕೆ ಕೈಸಾಲ ನೀಡುವಂತೆ ಒಟ್ಟು ೩ ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ರಾಜ್ಯದಲ್ಲಿ ಆ್ಯಸಿಡ್ ದಾಳಿಗೆ ಒಳಗಾದ ಸಾಕಷ್ಟು ಮಹಿಳೆಯರಿಗೆ ಅಭಿವೃದ್ಧಿ ನಿಗಮದಿಂದ ೫ ಲಕ್ಷ ರು.ಸಾಲ ನೀಡುವ ಮೂಲಕ ಫ್ಯಾನ್ಸಿ ಸ್ಟೋರ್, ಪ್ರಾವಿಜನ್ ಸ್ಟೋರ್, ಬಳೆ ಅಂಗಡಿ ಹಾಗೂ ಇನ್ನಿತರೆ ವ್ಯಾಪಾರ ನಡೆಸುವುದಕ್ಕೆ ಅವಕಾಶ ಕಲ್ಪಿಸಿದ್ದೇವೆ. ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಎಲ್ಲಾ ರಂಗದಲ್ಲಿಯೂ ಮುನ್ನುಗ್ಗಿ ತನ್ನ ಛಾಪನ್ನು ಮೂಡಿಸಿದ್ದಾರೆ. ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿದ್ದಾರೆ. ಜೊತೆಗೆ ಜಿಲ್ಲೆಯ ಆಡಳಿತವು ಕೂಡ ಉತ್ತಮ ರೀತಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಿಂಗತ್ವ ಅಲ್ಪ ಸಂಖ್ಯಾತರಿಗೆ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ಹಾಗೂ ಗೃಹಲಕ್ಷ್ಮೀ ಯೋಜನೆಯ ಆದೇಶ ಪತ್ರವನ್ನು ವಿತರಿಸಲಾಯಿತು.
ಆರ್ಥಿಕ ಸಬಲೀಕರಣಕ್ಕೆ ಯೋಜನೆ: ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಉದ್ಯೋಗಿನಿ ಯೋಜನೆಯಡಿಯಲ್ಲಿ ೩,೩೩೪ ಫಲಾನುಭವಿಗಳಿಗೆ ೫,೨೪,೪೪,೩೮೦ ರು., ಕಿರುಸಾಲ ಯೋಜನೆಯಡಿ ೯೪ ಫಲಾನುಭವಿಗಳಿಗೆ ೧,೭೧,೮೫,೦೦೦ ರು, ಸಮೃದ್ಧಿ ಯೋಜನೆಯಲ್ಲಿ ೧೨೨೭ ಫಲಾನುಭವಿಗಳಿಗೆ ೧,೨೨,೭೦೦೦೦ ರು., ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ೧೬೩ ಫಲಾನುಭವಿಗಳಿಗೆ ೫೩,೦೩,೮೮೦ ರು., ಧನಶ್ರೀ ಯೋಜನೆಯಡಿ ೧೫೮ ಫಲಾನುಭವಿಗಳಿಗೆ ೭೧,೩೩,೭೦೦ ರು. ಹಾಗೂ ಚೇತನ ಯೋಜನೆಯಡಿ ೯೩ ಫಲಾನುಭವಿಗಳಿಗೆ ೪೨,೩೬,೧೦೦ ರು. ಸಹಾಯಧನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಸಾಲ ಪಡೆಯಲು ತೊಂದರೆಗಳಿದ್ದರೆ ಗಮನಕ್ಕೆ ತನ್ನಿ:ಜಿಲ್ಲೆಯ ಮಹಿಳೆಯರು ಸರ್ಕಾರದ ಯೋಜನೆಗಳಾದ ಉದ್ಯೋಗಿನಿ ಹಾಗೂ ಇನ್ನಿತರೆ ಯೋಜನೆಯ ಮೂಲಕ ಸ್ವಂತ ವ್ಯಾಪಾರ ಹಾಗೂ ಇನ್ನಿತರೆ ಕೆಲಸದಿಂದ ಆರ್ಥಿಕವಾಗಿ ಸಬಲರಾಗಲು ಕಿರುಸಾಲ ಹಾಗೂ ಸಹಾಯಧನ ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್‌ನಿಂದ ಸಾಲ ಪಡೆದು ಅಧಿಕ ಬಡ್ಡಿಯನ್ನು ಕಟ್ಟಲಿಕ್ಕೆ ಹೋಗಬೇಡಿ. ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ತೊಂದರೆಗಳಿದ್ದಲ್ಲಿ ನಮ್ಮ ಗಮನಕ್ಕೆ ತರುವ ಕೆಲಸ ಮಾಡಿ.