ಚನ್ನಗಿರಿ ತಾಲೂಕು ಕಚೇರಿ ಬಳಿ ದೊಡ್ಡ ಅಂಚೆ ಪೆಟ್ಟಿಗೆ ಸ್ಥಾಪಿಸಿ: ಚಿನ್ನಸ್ವಾಮಿ ಒತ್ತಾಯ

KannadaprabhaNewsNetwork | Published : Aug 15, 2024 1:58 AM

ಸಾರಾಂಶ

ಚನ್ನಗಿರಿ ಪಟ್ಟಣದ ತಾಲೂಕು ಕಚೇರಿ ಕಾಂಪೌಂಡ್ ಗೋಡೆಗೆ ನೇತು ಹಾಕಿರುವ ಅಂಚೆ ಪೆಟ್ಟಿಗೆಯನ್ನು ಬದಲಾಯಿಸಿ, ಶಾಶ್ವತವಾದ ಸ್ಥಿರ ಅಂಚೆ ಪೆಟ್ಟಿಗೆ ಅಳವಡಿಸಬೇಕು ಎಂದು ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘ ಕಾರ್ಯದರ್ಶಿ ಜಿ.ಚಿನ್ನಸ್ವಾಮಿ ಒತ್ತಾಯಿಸಿದ್ದಾರೆ.

- ಕಾಂಪೌಂಡ್ ಗೋಡೆಗೆ ನೇತುಹಾಕಿರುವ ಚಿಕ್ಕ ಅಂಚೆ ಪೆಟ್ಟಿಗೆ ಬದಲಿಸಲು ಆಗ್ರಹ

- ಕಾಗದ ಪತ್ರ ಹಾಕುವವರಿಗೆ ಅಂಚೆ ಪೆಟ್ಟಿಗೆ ಬಳಿ ಹೋಗಲು ಸರಿಯಾದ ದಾರಿಯೇ ಇಲ್ಲ

- ಅವ್ಯವಸ್ಥೆ ವಿರುದ್ಧ ಚನ್ನಗಿರಿ, ದಾವಣಗೆರೆ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ತಾಲೂಕು ಕಚೇರಿ ಕಾಂಪೌಂಡ್ ಗೋಡೆಗೆ ನೇತು ಹಾಕಿರುವ ಅಂಚೆ ಪೆಟ್ಟಿಗೆಯನ್ನು ಬದಲಾಯಿಸಿ, ಶಾಶ್ವತವಾದ ಸ್ಥಿರ ಅಂಚೆ ಪೆಟ್ಟಿಗೆ ಅಳವಡಿಸಬೇಕು ಎಂದು ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘ ಕಾರ್ಯದರ್ಶಿ ಜಿ.ಚಿನ್ನಸ್ವಾಮಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪಟ್ಟಣದ ಅಂಚೆ ಇಲಾಖೆಗೂ ಮತ್ತು ದಾವಣಗೆರೆ ಸೀನಿಯರ್ ಸೂಪರಿಂಟೆಂಡೆಂಟ್‌ ಆಫ್ ಪೋಸ್ಟ್ ಆಫೀಸ್‌ನವರಿಗೂ ಮನವಿ ಸಲ್ಲಿಸಿದ್ದಾರೆ. ಸದರಿ ಅಂಚೆ ಪೆಟ್ಟಿಗೆ ಬಹಳ ಚಿಕ್ಕದಾಗಿದೆ. ದೊಡ್ಡ ಲಕೋಟೆಗಳನ್ನು ಹಾಕಲು ತೊಂದರೆಯಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲ ಆಗುವಂತೆ ದೊಡ್ಡ ಅಂಚೆ ಪೆಟ್ಟಿಗೆಯನ್ನು ಅಳವಡಿಸಬೇಕು. ಅಂಚೆ ಪೆಟ್ಟಿಗೆ ನೇತು ಹಾಕಿರುವ ಜಾಗದಲ್ಲಿ ಪತ್ರಬರಹಗಾರರು ಟೇಬಲ್‌ -ಕುರ್ಚಿಗಳನ್ನು ಹಾಕಿಕೊಂಡು ಪತ್ರ ವ್ಯವಹಾರ ನಡೆಸುತ್ತಾರೆ. ಇದರಿಂದಾಗಿ ಕಾಗದ ಪತ್ರ ಹಾಕುವವರಿಗೆ ಅಂಚೆ ಪೆಟ್ಟಿಗೆ ಬಳಿ ಹೋಗಲು ಸರಿಯಾದ ದಾರಿಯೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.

ಇಂತಹ ನ್ಯೂನತೆಗಳ ಬಗ್ಗೆ ಈ ಹಿಂದೆ ಅಂಚೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಈ ಅಂಚೆ ಪೆಟ್ಟಿಗೆ ಇಟ್ಟಿರುವ ಸುತ್ತಮುತ್ತಲೂ ತಾಲೂಕು ಕಚೇರಿ, ತಾಲೂಕು ನೋಂದಣಾಧಿಕಾರಿ ಕಚೇರಿ, ಕೃಷಿ ಇಲಾಖೆ, ಆಹಾರ ಇಲಾಖೆ, ಸಾರ್ವಜನಿಕ ಆಸ್ಫತ್ರೆ, ಜೂನಿಯರ್ ಕಾಲೇಜ್, ಪಶು ಸಂಗೋಪನಾ ಇಲಾಖೆ ಇಷ್ಟು ಕಚೇರಿಗಳಿವೆ. ಸಾರ್ವಜನಿಕರು ಹಲವಾರು ಕೆಲಸಗಳಿಗೆ ಬಂದು ಹೋಗುವ ವೃತ್ತ ಇದಾಗಿದೆ. ಈ ಹಿನ್ನೆಲೆ ಅಂಚೆ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ದೊಡ್ಡ ಅಂಚೆ ಪೆಟ್ಟಿಗೆಯನ್ನು ಶಾಶ್ವತವಾಗಿ ಇರುವಂತೆ ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.

Share this article