ಬಳ್ಳಾರಿ: ಪ್ರಸ್ತಕ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಭತ್ತ, ರಾಗಿ, ಜೋಳ ಖರೀದಿಸಲು ಜಿಲ್ಲೆಯಾದ್ಯಂತ ಏಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತಾಪಿ ವರ್ಗದವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.
ನಗರದ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.2024-25ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ಬಿಳಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿಸಲು ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ತೀರ್ಮಾನಿಸಿದೆ. ಈ ಹಿಂದೆ ಕೇವಲ ರಾಗಿ, ಜೋಳ ಬೆಳೆಗಳನ್ನು ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆಗಳ ನೋಂದಣಿ ಹಾಗೂ ಖರೀದಿ ಮಾಡಲಾಗುತ್ತಿತ್ತು. ಪ್ರಸ್ತುತ ಜಿಲ್ಲೆಯಲ್ಲಿನ ಭತ್ತದ ಬೆಳೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭತ್ತವನ್ನೂ ಸಹ ನೋಂದಣಿ ಮತ್ತು ಖರೀದಿ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿನ ಎಂಎಸ್‌ಪಿ ಕಾರ್ಯಾಚರಣೆಯ ಖರೀದಿ ಕೇಂದ್ರಗಳು:ಕನಿಷ್ಠ ಬೆಂಬಲ ಯೋಜನೆಯಡಿ ಭತ್ತ, ರಾಗಿ, ಜೋಳ ಕೃಷಿ ಉತ್ಪನ್ನಗಳನ್ನು ಬಳ್ಳಾರಿ, ಕುರುಗೋಡು, ಕಂಪ್ಲಿ, ಸಂಡೂರು, ಸಿರುಗುಪ್ಪ , ತಾಲೂಕಿನ ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ ಹಾಗೂ ಪ್ರಾಥಮಿಕ ಕೃತಿ ಪತ್ತಿನ ಸಹಕಾರ ಸಂಘಗಳು, ಹಚ್ಚೊಳ್ಳಿ, ಕರೂರು ಎಪಿಎಂಸಿ ಯಾರ್ಡ್ ನಿಂದ ಖರೀದಿಸಲಾಗುವುದು. ಕಳೆದ ಬಾರಿ ಐದು ಖರೀದಿ ಕೇಂದ್ರಗಳಲ್ಲಿ ಬೆಳೆ ಖರೀದಿ ಮಾಡಲಾಗುತ್ತಿತ್ತು, ರೈತರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಎರಡು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಖರೀದಿಸುವ ಉತ್ಪನ್ನ ಮತ್ತು ನಿಗದಿಯಾದ ಬೆಂಬಲ ಬೆಲೆ:ಸಾಮಾನ್ಯ ಭತ್ತಕ್ಕೆ ₹2,300 (ಪ್ರತಿ ಕ್ವಿಂಟಲ್‌ಗೆ) ಮತ್ತು ಗ್ರೇಡ್-ಎ ಭತ್ತಕ್ಕೆ ₹2,320 (ಪ್ರತಿ ಕ್ವಿಂಟಲ್‌ಗೆ) ಇದ್ದು, ರಾಗಿ ಬೆಳೆಗೆ ₹4,290 (ಪ್ರತಿ ಕ್ವಿಂಟಲ್‌ಗೆ) ಇರುತ್ತದೆ.
ಹೈಬ್ರೀಡ್ ಬಿಳಿ ಜೋಳಕ್ಕೆ ₹3,371 (ಪ್ರತಿ ಕ್ವಿಂಟಲ್‌ಗೆ) ಇದ್ದು, ಮಾಲ್ದಂಡಿ ಬಿಳಿ ಜೋಳಕ್ಕೆ ₹3,421 (ಪ್ರತಿ ಕ್ವಿಂಟಲ್‌ಗೆ) ಬೆಲೆ ನಿಗದಿಯಾಗಿದ್ದು, ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಭತ್ತ ಬೆಳೆಯನ್ನು ನೋಂದಾಯಿಸಲು ನ.11ರಿಂದ ಡಿ.31ವರೆಗೆ ಅವಕಾಶವಿದೆ. ಭತ್ತ ಖರೀದಿ ಕೇಂದ್ರದಲ್ಲಿ 2025ರ ಜ.1ರಿಂದ ಮಾ.31ರವರೆಗೆ ಖರೀದಿಸಲಾಗುತ್ತದೆ. ರಾಗಿ ಮತ್ತು ಜೋಳ ನೋಂದಣಿಯು ಡಿ.1ರಿಂದ ಪ್ರಾರಂಭಗೊಳ್ಳುತ್ತದೆ. ರಾಗಿ, ಜೋಳ ಬೆಳೆಯ ಖರೀದಿ ಕೇಂದ್ರದಲ್ಲಿ 2025ರ ಜ.1ರಿಂದ ಮಾ.31ರವರೆಗೆ ಖರೀದಿಸಲಾಗುತ್ತದೆ ಎಂದು ಹೇಳಿದರು.
ರೈತರ ಹೆಸರು ಹೇಳಿ, ಅಕ್ರಮವಾಗಿ ಬೆಳೆ ನೋಂದಾಯಿಸಿಕೊಂಡು ಮಾರಾಟ ಮಾಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಬೆಳೆ ಮಾರಾಟ ಸಂದರ್ಭದಲ್ಲಿ ಗೋಣಿ ಚೀಲ ವ್ಯವಸ್ಥೆಯನ್ನು ಖರೀದಿ ಸಂಸ್ಥೆ ಅಥವಾ ಏಜೆನ್ಸಿ ಅವರೇ ಮಾಡತಕ್ಕದ್ದು. ಉಗ್ರಾಣ ಸಮಸ್ಯೆ, ಕಳಪೆ ನಿರ್ವಹಣೆ ಸೇರಿದಂತೆ ಇನ್ನಿತರೆ ದೂರುಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿ ಮತ್ತು ಏಜೆನ್ಸಿ ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಎಸ್ಪಿ ಡಾ.ಶೊಭಾರಾಣಿ, ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸಕೀನಾ.ಬಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್, ಬಳ್ಳಾರಿ ತಾಲೂಕು ತಹಸೀಲ್ದಾರ್ ಗುರುರಾಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತರು ಹಾಗೂ ಇತರರು ಉಪಸ್ಥಿತರಿದ್ದರು.
ಕನಿಷ್ಠ ಬೆಂಬಲ ಯೋಜನೆಯಡಿ ರೈತರ ಉತ್ಪನ್ನಗಳನ್ನು ಖರೀದಿಸಲು ಆರಂಭಿಸಿರುವ ಖರೀದಿ ಕೇಂದ್ರಗಳ ಕುರಿತು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮಾಹಿತಿ ನೀಡಿದರು.